Advertisement

ಮಂಗಳೂರು ಹಿಂಸಾಚಾರ ಕುರಿತು ತನಿಖೆ

10:23 AM Dec 23, 2019 | Lakshmi GovindaRaj |

ಮಂಗಳೂರು: ನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಪೊಲೀಸ್‌ ಗೋಲಿಬಾರ್‌ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ಗೋಲಿ ಬಾರ್‌ನಲ್ಲಿ ಮೃತಪಟ್ಟವರಿಗೆ ಕಾನೂನು ಬದ್ಧವಾಗಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

Advertisement

ಮಂಗಳೂರಿನ ಸಕೀಟ್‌ ಹೌಸ್‌ನಲ್ಲಿ ಶನಿವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಯಾವ ರೀತಿಯ ತನಿಖೆ ನಡೆಸಬೇಕು ಎಂಬ ಬಗ್ಗೆ ಗೃಹ ಸಚಿವರ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲ ಅಂಶಗಳು ತನಿಖೆಯಲ್ಲಿ ಬಹಿರಂಗಗೊಳ್ಳಲಿವೆ ಎಂದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬ ಗಳಿಗೆ ನಿಯಮಾನುಸಾರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದರು. ನಗರದ ಬಂದರು ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರಗಳು ಇದ್ದ ಕೊಠಡಿಗೆ ನುಗ್ಗುವ ಪ್ರಯತ್ನ ನಡೆದಿತ್ತು.

ಒಂದೊಮ್ಮೆ ಬಂದೂಕುಗಳು ಅವರ ಕೈಗೆ ಸಿಗುತ್ತಿದ್ದರೆ ಭಾರೀ ಅನಾಹುತಕ್ಕೆ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ನಾನು ಘಟನೆಯ ವೀಡಿಯೋಗಳನ್ನು ತರಿಸಿ ವೀಕ್ಷಿಸಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಹಬ್ಬಗಳಿಗೆ ಅಡ್ಡಿಪಡಿಸದಂತೆ ಸೂಚನೆ: ಮಂಗಳೂರಿನ ಕ್ರೈಸ್ತ ಸಮುದಾಯದ ಮುಖಂಡರ ಜತೆಗೂ ಸಮಾಲೋಚಿಸಿದ್ದೇನೆ. ಅವರು ಕೂಡ ಮಂಗಳೂರಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಕ್ರಿಸ್ಮಸ್‌ ಹಬ್ಬ ಸಮೀಪಿಸುತ್ತಿದ್ದು, ಹಬ್ಬಗಳಿಗೆ ಅಡಚಣೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಲ್ಲ ಸಮುದಾಯಗಳನ್ನು ಒಂದೇ ರೀತಿಯಾಗಿ ನೋಡುವ ನೀತಿಯನ್ನು ನಾನು ಹಿಂದೆಯೂ ಅನುಸರಿಸಿದ್ದು, ಅದು ಮುಂದುವರಿಯುತ್ತದೆ.

Advertisement

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಗುರುತು ಪತ್ರ ಇಲ್ಲದೆ ಕೇರಳದಿಂದ ಪತ್ರಕರ್ತರು ಎನ್ನಲಾದ ಕೆಲವರು ಆಗಮಿಸಿದ್ದು, ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅವರು ಯಾಕಾಗಿ ಬಂದಿದ್ದರು ಮತ್ತು ಉದ್ದೇಶ ಏನಿತ್ತು ಎಂಬುದು ತನಿಖೆಯ ವೇಳೆ ಹೊರಬರಲಿದೆ ಎಂದರು.

ಸೋಮವಾರದಿಂದ ರದ್ದು: ನಗರದ ಎಲ್ಲ ಸಮುದಾಯಗಳ ಮುಖಂಡರ ಜತೆ ನಡೆಸಿದ ಸಮಾಲೋಚನೆ ವೇಳೆ ಅವರು ವ್ಯಕ್ತಪಡಿಸಿದ ಅಪೇಕ್ಷೆಯಂತೆ ಅಧಿಕಾರಿಗಳ ಜತೆ ಚರ್ಚಿಸಿ, ಕರ್ಫ್ಯೂವನ್ನು ಸಡಿಲಿಸಲಾಗಿದೆ. ಶನಿವಾರ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ಭಾನುವಾರ ರಾತ್ರಿ ಮಾತ್ರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸೋಮವಾರದಿಂದ ಕರ್ಫ್ಯೂವನ್ನು ಸಂಪೂರ್ಣವಾಗಿ ಹಿಂದೆಗೆಯಲಾಗು ತ್ತಿದ್ದು, 144 ಸೆಕ್ಷನ್‌ನಂತೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಅನೌಪಚಾರಿಕ ಸಭೆ: ಯಡಿಯೂರಪ್ಪನವರು ಬೆಂಗಳೂರಿನಿಂದ ಮಧ್ಯಾಹ್ನ ಸುಮಾರು 11.30ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಜಿಲ್ಲೆಯ ಪ್ರಮುಖ ಅಧಿಕಾರಿಗಳ ಜತೆ ಸುಮಾರು ಅರ್ಧತಾಸು ಅನೌಪಚಾರಿಕ ಸಭೆ ನಡೆಸಿ ಮಾಹಿತಿ ಪಡೆದರು.

ಈ ವೇಳೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ರಾಜ್ಯ ಸಿಐಡಿ ಎಡಿಜಿಪಿ ದಯಾನಂದ, ಗುಪ್ತಚರ ಇಲಾಖೆ ಎಡಿಜಿಡಿ ಕಮಲ್‌ ಪಂತ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲೆಯ ಕೆಲವು ಶಾಸಕರು ಉಪಸ್ಥಿತರಿದ್ದರು. ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಅವರನ್ನು ಸಭೆಯಿಂದ ಹೊರಗಿಟ್ಟಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next