Advertisement

BJP-JDSದೋಸ್ತಿ ವಿರುದ್ಧ ತನಿಖಾಸ್ತ್ರ?ಇಂದಿನ ಜನಾಂದೋಲನದಲ್ಲಿ ಸಿದ್ದರಾಮಯ್ಯ ಘೋಷಣೆ ನಿರೀಕ್ಷೆ

01:49 AM Aug 09, 2024 | Team Udayavani |

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಪಾದ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಆಯೋಜಿಸಿರುವ ಜನಾಂದೋಲನ ಸಭೆಯ ಸಮಾವೇಶ ಮೈಸೂರಿ ನಲ್ಲಿ ಶುಕ್ರವಾರ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮೈತ್ರಿ ಪಕ್ಷಗಳ ವಿರುದ್ಧ ಪ್ರಬಲ ರಾಜಕೀಯ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಕಾಲದಲ್ಲಿ ನಡೆದ 22 ಪ್ರಮುಖ ಹಗರಣಗಳ ಬಗ್ಗೆ ಪ್ರಸ್ತಾವಿಸಿ, ಅವುಗಳ ತನಿಖೆಯನ್ನು ಚುರುಕುಗೊಳಿಸುವ ನಿರ್ಧಾರವನ್ನು ಸಮಾವೇಶದ ವೇದಿಕೆಯಿಂದ ಘೋಷಿಸುವ ಸಾಧ್ಯತೆ ಇದೆ.

Advertisement

ಕಾಂಗ್ರೆಸ್‌ ಮೂಲಗಳ ಪ್ರಕಾರ ಈ ಸಮಾ ವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಒಂದು ಲಕ್ಷಕ್ಕೂ ಮೇಲ್ಪಟ್ಟು ಜನರು ಸೇರಲಿದ್ದಾರೆ. ಎಲ್ಲ ವರ್ಗಗಳ ನಾಯಕರನ್ನು ಈ ವೇದಿಕೆಯಲ್ಲಿ ಒಟ್ಟು ಸೇರಿಸುವ ಜತೆಗೆ “ಅಹಿಂದ’ ನಾಣ್ಯವನ್ನು ಗಟ್ಟಿಯಾಗಿ ಪ್ರಯೋಗಿಸುವ ಸಾಧ್ಯತೆ ಇದೆ. ಹಿಂದೆ ಹಿಂದುಳಿದ ವರ್ಗಕ್ಕೆ ಸೇರಿದ ದೇವರಾಜ್‌ ಅರಸು ಅವರನ್ನು ಷಡ್ಯಂತ್ರದಿಂದ ಕೆಳಗಿಳಿಸಿದ ರೀತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಂಚು ರೂಪಿಸಲಾಗುತ್ತಿದೆ ಎಂಬು ದನ್ನು ವ್ಯವಸ್ಥಿತವಾಗಿ ಪ್ರತಿಪಾದಿಸಲು ನಿರ್ಧ ರಿಸಲಾಗಿದ್ದು, ಕಾಂಗ್ರೆಸ್‌ನ ಅಹಿಂದ ನಾಯಕ ರೆಲ್ಲರಿಗೂ ಸಮಾವೇಶದಲ್ಲಿ ಕಡ್ಡಾಯವಾಗಿ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ.

ಎರಡು ಪುಸ್ತಕ ಅನಾವರಣ
ಸಮಾವೇಶದಲ್ಲಿ ಎರಡು ಮಹತ್ವದ ಪುಸ್ತಕ ಬಿಡುಗಡೆಗೊಳಿಸಲಾಗುತ್ತದೆ. ಬಿಜೆಪಿ- ಜೆಡಿಎಸ್‌ ಅಧಿಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಎಲ್ಲ ಹಗರಣಗಳು ಮತ್ತು ಅದರಲ್ಲಿ ಭಾಗಿಯಾಗಿದ್ದಾರೆ  ಎನ್ನಲಾದನಾಯಕರ ಹೆಸರಿರುವ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಇದೇ ಸಂದರ್ಭ ಸಿಎಂ ಈ ಹಗರಣಗಳ ತನಿಖೆ ತೀವ್ರಗೊಳಿಸುವ ಬಗ್ಗೆ ಪ್ರಸ್ತಾವಿಸಲಿದ್ದು, ಕೆಲವು ಪ್ರಕರಣಗಳ ಸಂಬಂಧ ಬಿಜೆಪಿ ನಾಯಕರಿಗೆ ಬಂಧನ ಭೀತಿ ಸೃಷ್ಟಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಇದಕ್ಕೆ ವರಿಷ್ಠರಿಂದಲೂ ಸಹಮತ ಸಿಕ್ಕಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮೈಸೂರು ಸಮಾವೇಶದ ಬಳಿಕ ರಾಜ್ಯದಲ್ಲಿ ಭೀಕರ ರಾಜಕೀಯ ಕದನ ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ.

ಮುಡಾ ಸ್ಪಷ್ಟನೆ
ಇನ್ನೊಂದು ಪುಸ್ತಕ ಮುಡಾ ಹಗರಣಕ್ಕೆ ಸಂಬಂಧಪಟ್ಟಿದೆ. “ಸತ್ಯಶೋಧಿತ’ ಎಂಬ ಹೆಸರಿನ ಈ ಪುಸ್ತಕದಲ್ಲಿ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷಗಳು ಇದುವರೆಗೆ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಲಾಗುತ್ತದೆ. ವಿಪಕ್ಷ ಮಾಡಿರುವ ಸುಳ್ಳು ಆರೋಪ ಹಾಗೂ ಅದಕ್ಕೆ ಸಂಬಂಧಪಟ್ಟ ಸ್ಪಷ್ಟನೆ ಇದರಲ್ಲಿ ಇರಲಿದೆ. ಹೀಗಾಗಿ ಒಂದೇ ವೇದಿಕೆಯ ಮೂಲಕ ಸಿದ್ದರಾಮಯ್ಯ ತಮ್ಮ ವಿರುದ್ಧ ವ್ಯಕ್ತವಾದ ಆರೋಪಕ್ಕೆ ಸ್ಪಷ್ಟನೆ ನೀಡುವ ಜತೆಗೆ ರಾಜಕೀಯ ಪ್ರತ್ಯಸ್ತ್ರ ಪ್ರಯೋಗಕ್ಕೂ ನಿರ್ಧರಿಸಿದ್ದಾರೆ.

Advertisement

ಸಚಿವ ಸಂಪುಟದ ಬಲ
ಈ ಸಮಾವೇಶದಲ್ಲಿ ಸಚಿವ ಸಂಪುಟದ ಎಲ್ಲ ಸದಸ್ಯರು ಭಾಗವಹಿಸಲಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪ್ರದರ್ಶನ ಮಾಡಲಿದ್ದಾರೆ. ಬಿಜೆಪಿಯ ಪಾದಯಾತ್ರೆ ಮೈಸೂರು ಪ್ರವೇಶಿಸುವುದಕ್ಕೆ ಮುನ್ನವೇ ಕಾಂಗ್ರೆಸ್‌ ರಣಕಹಳೆ ಮೊಳಗಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next