ಗದಗ: ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳು ಮಾಫಿಯಾದಲ್ಲಿ ಹಾಲಿ-ಮಾಜಿ ಶಾಸಕರು, ಅಧಿಕಾರಿಗಳು ಶಾಮೀಲಾಗಿದ್ದು, ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದಾರೆ. ಸದ್ಯ ಸ್ಟಾಕ್‌ಯಾರ್ಡ್‌ನಲ್ಲಿ ನಿಯಮ ಮೀರಿ ಸಂಗ್ರಹಿಸಿರುವ ಮರಳಿನ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಯುವ ಮುಖಂಡ ಸಚಿನ್ ಪಾಟೀಲ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆಯಾಗಿ ಅಕ್ರಮ ಸಾಗಾಟ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
10 ಟನ್ ಮರಳು ಸಾಗಿಸಲು ಪರವಾನಗಿ ಪಡೆಯುವ ಗುತ್ತಿಗೆದಾರರು, ಕಾನೂನು ಧಿಕ್ಕರಿಸಿ 20ರಿಂದ 30 ಟನ್ ಸಾಗಾಟ ಮಾಡುತ್ತಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಒಂದು ಪಾಸ್‌ನಲ್ಲಿ (ಪರ್ಮಿಟ್) ಮೂರು ಟ್ರಿಪ್ ಹೊಡೆಯುತ್ತಾರೆ. ಇದಕ್ಕೆ ಮುಂಡರಗಿ ತಹಶೀಲ್ದಾರ್, ಸಿಪಿಐ ಹಾಗೂ ಉಪವಿಭಾಗಾಧಿಕಾರಿಗಳ ಸಹಕಾರವಿದೆ. ಹೀಗಾಗಿ ಮರಳು ಬೆಲೆ ಗಗನಕ್ಕೇರಿದ್ದು, ಬಡವರ ಕೈಗೆಟುಕದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಡರಗಿ ಭಾಗದ ಮರಳು ಪಾಯಿಂಟ್‌ಗಳಲ್ಲಿ ಗುತ್ತಿಗೆದಾರರು ನಿಯಮ ಬಾಹಿರವಾಗಿ ಯಂತ್ರಗಳನ್ನು ಬಳಸಿ ಮರಳು ತೆಗೆಯುತ್ತಿದ್ದಾರೆ. ಇದು ಪರೋಕ್ಷವಾಗಿ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಸದ್ಯ ಮರಳು ತೆಗೆಯುವುದನ್ನು ನಿಲ್ಲಿಸಿದ್ದರೂ ಕೆಲವರು 15 ಸಾವಿರ ಟನ್‌ನಿಂದ 50 ಸಾವಿರ ವರೆಗೆ ಸೇರಿದಂತೆ ಒಟ್ಟು 2 ಲಕ್ಷ ಟನ್‌ನಷ್ಟು ಮರಳು ಸಂಗ್ರಹಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು ಕೇವಲ 1.58 ಲಕ್ಷ ಟನ್ ಎಂದು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಪ್ರತಿ ಟನ್‌ಗೆ 650 ರೂ. ನಂತೆ ಸರ್ಕಾರಕ್ಕೆ ಗುತ್ತಿಗೆದಾರರು ರಾಜಸ್ವ ತುಂಬಬೇಕು. ಆದರೆ, ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ಶಾಮೀಲಾಗಿ ಕಡಿಮೆ ಪ್ರಮಾಣ ತೋರಿಸಿ, ಗುತ್ತಿಗೆದಾರರಿಗೆ ಲಾಭ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ಇನ್ನು, ವಾಹನಗಳ ಜಿಪಿಎಸ್, ಸಿಸಿ ಕ್ಯಾಮೆರಾ ಇವೆಲ್ಲ ನಾಮಕಾವಾಸ್ತೆ ಎಂಬಂತಾಗಿದೆ ಎಂದು ದೂರಿದರು.
ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಮರಳು ಮಾಫಿಯಾದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನವಿರುವ ಮುಂಡರಗಿ ತಹಶೀಲ್ದಾರ್, ಸಿಪಿಐ ಹಾಗೂ ಗದಗ ಉಪವಿಭಾಗಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. 10- 12 ಸಾವಿರ ರೂ.ಗೆ ಒಂದು ಲಾರಿ ಮರಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು 15 ದಿನಗಳಲ್ಲಿ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದಿದ್ದರೆ ಸಚಿನ್ ಪಾಟೀಲ ಅಭಿಮಾನಿ ಬಳಗದಿಂದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ರಮೇಶ ಹೊನ್ನೆನಾಯ್ಕರ್, ಅಸ್ಲಂ ನರೇಗಲ್, ರಮೇಶ ಕರಿಕಟ್ಟಿ, ಚೆನ್ನಾರೆಡ್ಡಿ ಗೂಳರಡ್ಡಿ ಇದ್ದರು.