ಬೆಂಗಳೂರು:ಸಿದ್ಧಾರ್ಥ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಧೈರ್ಯವಂತರು. ಆತ್ಮಹತ್ಯೆ ಬಗ್ಗೆ ಯೋಚಿಸುವ ವ್ಯಕ್ತಿ ಅಲ್ಲ. ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಹಾಗೂ ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಬೆನ್ನಲ್ಲೇ ಕೃಷ್ಣ ಅವರ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ ಶಿವಕುಮಾರ್ ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.
‘ಈ ಘಟನೆಯನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕು ಎಂದು ಟ್ವೀಟ್ ಮಾಡಿದ್ದೇನೆ. ಸಿದ್ಧಾರ್ಥ್ ಸಾಮಾನ್ಯ ವ್ಯಕ್ತಿ ಅಲ್ಲ. 50 ಸಾವಿರ ಜನರಿಗೆ ಆಶ್ರಯ ನೀಡಿರುವ ಉದ್ಯಮಿ. ಅವರು ಈ ದೇಶ ಮತ್ತು ರಾಜ್ಯದ ಆಸ್ತಿ. ಅವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಅವರು ಕಿಡ್ನಾಪ್ ಆಗಿದ್ದಾರೋ ಅಥವಾ ಮತ್ತೇನಾಗಿದ್ದಾರೆ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ನನಗೆ ಸಿದ್ಧಾರ್ಥ್ ಬಹಳ ಚೆನ್ನಾಗಿ ಗೊತ್ತು. ಅವರು ಸರಳ ಹಾಗೂ ಸಜ್ಜನ ವ್ಯಕ್ತಿ. ಬೇರೆಯವರಿಗೆ ಸಹಾಯ ಮಾಡುವ ಮನೋಭಾವದವರು. ಈಗ ಬರುತ್ತಿರುವ ವದಂತಿಗಳಂತೆ ಆತ್ಮಹತ್ಯೆ ಬಗ್ಗೆ ಯೋಚಿಸುವ ವ್ಯಕ್ತಿ ಅಲ್ಲ’ ಎಂದರು.
ಈ ಮಧ್ಯೆ, ಸಿದ್ದಾರ್ಥ್ ಅವರಿಗೆ ಐಟಿ ಇಲಾಖೆ ಅಧಿಕಾರಿಗಳ ಕಿರುಕುಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಅವರು ಕಿರುಕುಳ ನೀಡಿದ್ದಾರೋ, ಇಲ್ಲವೋ ಎಂಬ ವಿಚಾರ ನನಗೇನೂ ಗೊತ್ತಿಲ್ಲ. ಹೀಗಾಗಿ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ’ ಎಂದರು.
‘ಸಿದ್ಧಾರ್ಥ್ ಮೊನ್ನೆ ಭಾನುವಾರ ನನಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ಹೇಳಿದ್ದರು. ಅವರ ಕರೆ ಬಂದಾಗ ನಾನು ಕಂಚಿಗೆ ತೆರಳುತ್ತಿದ್ದೆ. ನಾನು ಸದ್ಯ ಚೆನ್ನೈನಲ್ಲಿದ್ದು, ವಾಪಸ್ ಬಂದ ನಂತರ ಎರಡು ದಿನಗಳಲ್ಲಿ ಭೇಟಿ ಮಾಡುವುದಾಗಿ ತಿಳಿಸಿದ್ದೆ. ನಾನು ವಾಪಸ್ ಬಂದು ಅವರನ್ನು ಭೇಟಿ ಮಾಡುವಷ್ಟರಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂಬ ಸಂದೇಶ ಬಂದಿದೆ ಎಂದು ತಿಳಿಸಿದರು.
ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಎಸ್.ಎಂ ಕೃಷ್ಣ ಸಾಹೇಬರ ಮನೆಗೆ ಭೇಟಿ ನೀಡಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸರ್ಕಾರ ಕೂಡ ಅಗತ್ಯ ಕ್ರಮ ಕೈಗೊಂಡಿದೆ. ಭಗವಂತನ ಇಚ್ಛೆ ಏನಿದೆಯೋ ನೋಡೋಣ’ಎಂದರು.