Advertisement

Invest Karnataka ಜಪಾನ್‌, ಕೊರಿಯಾ ಕಂಪನಿಗಳಿಂದ 6,450 ಕೋಟಿ ರೂ. ಹೂಡಿಕೆ

11:25 PM Jul 10, 2024 | Team Udayavani |

ಬೆಂಗಳೂರು: ಬರುವ ವರ್ಷ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ ಉದ್ಯಮಿಗಳನ್ನು ಸೆಳೆಯಲು ಜಪಾನ್‌ ಮತ್ತು ದಕ್ಷಿಣ ಕೊರಿಯಾಕ್ಕೆ ತೆರಳಿದ್ದ ಕರ್ನಾಟಕ ನಿಯೋಗದ ಭೇಟಿ ಫ‌ಲ ನೀಡಿದ್ದು, ಸುಮಾರು 6,450 ಕೋಟಿ ರೂ. ಬಂಡವಾಳ ಹರಿದುಬರಲಿದೆ. ಇದರಿಂದ ರಾಜ್ಯದಲ್ಲಿ ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ವಾರಗಳ ಈ ಉಭಯ ದೇಶಗಳ ಪ್ರವಾಸದಲ್ಲಿ 35 ಕೈಗಾರಿಕೋದ್ಯಮಗಳ ಪ್ರಮುಖರು ಮತ್ತು 200 ವಿವಿಧ ವಲಯಗಳ ಕಂಪನಿಗಳನ್ನು ಭೇಟಿ ಮಾಡಲಾಯಿತು. ಅವರಿಗೆ 2025ರಲ್ಲಿ ನಡೆಯಲಿರುವ ಇನ್‌ವೆಸ್ಟ್‌ ಕರ್ನಾಟಕಕ್ಕೆ ಆಹ್ವಾನ ನೀಡಲಾಯಿತು. ಇದರ ಜತೆಗೆ ಎರಡು ರೋಡ್‌ಶೋಗಳನ್ನು ನಡೆಸಲಾಯಿತು ಎಂದರು.

ಯಾವೆಲ್ಲ ಕಂಪೆನಿಗಳ ಆಸಕ್ತಿ?
ಒಟ್ಟಾರೆ ನಿರೀಕ್ಷೆಯಲ್ಲಿ ತಯಾರಿಕಾ ವಲಯದಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ಇದರಲ್ಲಿ ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌, ಟೊಯೊಟಾ ಮೋಟಾರ್‌ ಕಾರ್ಪೋರೇಷನ್‌, ಯಮಹ ಮೋಟಾರ್‌ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌, ಪ್ಯಾನಸೋನಿಕ್‌ ಎನರ್ಜಿ, ನಿಡೆಕ್‌ ಕಾರ್ಪೋರೇಷನ್‌, ನಿಸಾನ್‌ ಮೋಟಾರ್‌ ಕಾರ್ಪೋರೇಷನ್‌, ಬ್ರದರ್‌ ಇಂಡಸ್ಟ್ರೀಸ್‌, ಶಿಮಾಡ್ಜು  ಕಾರ್ಪೋರೇಷನ್‌, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ.

ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌, ಎಲ್‌ಜಿ ಎನರ್ಜಿ ಸಲ್ಯೂಷನ್ಸ್‌, ಎಲ್‌ ಎಕ್ಸ್‌ ಎಲೆಕ್ಟ್ರಾನಿಕ್ಸ್, ನಿಫ್ಸ್‌ ಕೊರಿಯಾ, ಒಸಿಐ ಹೋಲ್ಡಿಂಗ್ಸ್‌, ಕ್ರಾಫ್ಟನ್‌, ಎಚ್‌ವೈಸಿ, ಹ್ಯುಂಡೈ ಮೋಟಾರ್ಸ್‌, ವೈಜಿ-1, ಹೊಯ್ಸಂಗ್‌ ಅಡ್ವಾನ್ಸಡ್‌ ಮಟೀರಿಯಲ್ಸ್‌ ಮುಂತಾದವು ಸೇರಿವೆ. ಇದಲ್ಲದೆ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್‌ ಮತ್ತು ಇಂಧನ ಪರಿಹಾರ ವಲಯಗಳಲ್ಲಿ ಮುಂಬರುವ ದಿನಗಳಲ್ಲಿ 25 ಸಾವಿರ ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ ಎಂದು ಹೇಳಿದರು.

ಯಾವ ಕಂಪೆನಿಯಿಂದ ಎಷ್ಟು ಹೂಡಿಕೆ ಬದ್ಧತೆ?
ಒಸಾಕಾ ಗ್ಯಾಸ್‌: ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಣೆಗೆ 5 ಸಾವಿರ ಕೋಟಿ ರೂ.
ಡಿಎನ್‌ ಸಲ್ಯೂಷನ್ಸ್‌ ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪನೆಗೆ ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ
ಅವೊಯಮಾ ಸೈಸಕುಶೊ: ತುಮಕೂರು ಬಳಿಯ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು 210 ಕೋಟಿ ರೂ. ಹೂಡಿಕೆ ಒಪ್ಪಂದಕ್ಕೆ ಸಹಿ ಡೈಕಿ ಆ್ಯಕ್ಸಿಸ್‌, ಹೈವಿಷನ್‌ ಮತ್ತು ಇಎಂಎನ್‌ಐ ಕಂಪೆನಿ ಲಿಮಿಟೆಡ್‌: ಬ್ಯಾಟರಿ ಸೆಲ್‌ಗ‌ಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ 210 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಂದ
ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ (ಎಸ್‌ಎಚ್‌ಐ): ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿ ತೆರೆಯಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next