ಬೆಂಗಳೂರು: ಸಮಾವೇಶದಲ್ಲಿ ಹೂಡಿಕೆಯಾಗುವ ಯೋಜನೆಗಳನ್ನು ಮುಂದಿನ 3 ತಿಂಗಳೊಳಗೆ ಅನುಮೋದನೆ ನೀಡಿ ಕಾರ್ಯರೂಪಕ್ಕೆ ತರಲು ಸರಕಾರ ಸಿದ್ಧತೆ ನಡೆಸಿದೆ. ಬಂಡವಾಳ ಹೂಡಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದ್ದು, ಹೂಡಿಕೆದಾರರು ಕೂಡ ಗಂಭೀರತೆ ಹೊಂದಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅರಮನೆ ಮೈದಾನದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ: ಬಿಲ್ಡ್ ಫಾರ್ ದಿ ವರ್ಲ್ಡ್-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರವು ಹೂಡಿಕೆದಾರರಿಗೆ ಮೂಲ ಸೌಕರ್ಯ ಒಳಗೊಂಡಂತೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಇದೀಗ ಹೂಡಿಕೆಯ ಆರಂಭಿಕ ಹಂತವಾಗಿ 2.80 ಲಕ್ಷ ಕೋಟಿ ರೂ.ಗಳ ಬಂಡವಾಳಕ್ಕೆ ಅನುಮೋದನೆ ನೀಡಲಾಗಿದೆ. ಉಳಿದ ಯೋಜನೆಗಳನ್ನು ಮುಂದಿನ ಮೂರು ತಿಂಗಳೊಳಗೆ ಅನುಮೋದನೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜಾಗತಿಕ ಸ್ಪರ್ಧೆ ಗುರಿ
ಉತ್ತಮ ಗುಣಮಟ್ಟದ ಉತ್ಪಾದಕತೆ, ಗರಿಷ್ಠ ಮಟ್ಟದ ದಕ್ಷತೆ ಇರುವುದರಿಂದ ಆರ್ಥಿಕತೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿದೆ. ಮತ್ತಷ್ಟು ರೀತಿಯಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವುದು ಸರಕಾರದ ಗುರಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವ ಸಂಸ್ಥೆಗಳು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು.
ಕರ್ನಾಟಕವು ನವೋದ್ಯಮ, ಏರೋಸ್ಪೇಸ್, ಬಯೋಟೆಕ್, ನವೀಕರಿಸಬಹುದಾದ ಇಂಧನ ಸೇರಿ ಹಲವು ಕ್ಷೇತ್ರಗಳಲ್ಲಿ ನಂ.1 ಸ್ಥಾನದಲ್ಲಿದೆ. ದೇಶದ ಸುಮಾರು 105 ಯೂನಿಕಾರ್ನ್ಗಳಲ್ಲಿ 35 ಕರ್ನಾಟಕದಲ್ಲಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಕೂಡ ಜಾಗತಿಕವಾಗಿ ಸ್ಪರ್ಧಿಸಬೇಕು ಎಂಬುದು ಸರಕಾರದ ಉದ್ದೇಶ. ಈ ಹಿನ್ನೆಲೆಯಲ್ಲಿ ಹೂಡಿಕೆಸ್ನೇಹಿ ವಾತಾವರಣ ಕಲ್ಪಿಸಲಾಗಿದೆ ಎಂದರು.
Related Articles
ಈ ಸಮಾವೇಶದಲ್ಲಿ ಸುಮಾರು 7 ಲಕ್ಷ ಕೋಟಿ ರೂ. ಬಂಡವಾಳ ಹರಿದುಬರುವ ನಿರೀಕ್ಷೆ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಈಸ್ ಆಫ್ ಡುಯಿಂಗ್ ಬಿಸಿನೆಸ್, ಸೆಮಿಕಂಡಕ್ಟರ್ ನೀತಿ, ಆರ್ ಆ್ಯಂಡ್ ಡಿ ನೀತಿ ಸೇರಿ, ಉದ್ಯೋಗ ನೀತಿ ಸೇರಿ ಹಲವು ನೀತಿಗಳಿವೆ. ಕೈಗಾರಿಕಾ ನೀತಿಯಲ್ಲಿ ಸಾಕಷ್ಟು ತಿದ್ದುಪಡಿ ಮಾಡುವ ಮೂಲಕ ಹೂಡಿಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ರಾಜೀವ್ ಚಂದ್ರಶೇಖರ್, ಸಚಿವರಾದ ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣ, ಉದ್ಯಮಿಗಳು ಉಪಸ್ಥಿತರಿದ್ದರು.
ರಾಜ್ಯೋತ್ಸವದ ಶುಭ ಕೋರಿದ ಪ್ರಧಾನಿ
ಕನ್ನಡ ರಾಜ್ಯೋತ್ಸವ ಆಚರಿಸಿದ ಕನ್ನಡಿಗರು ಮತ್ತು ಕನ್ನಡ ಭಾಷಿಕರಿಗೆ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದರು. ನಿನ್ನೆಯಷ್ಟೇ ರಾಜ್ಯೋತ್ಸವನ್ನು ಕನ್ನಡಿಗರು ಆಚರಿಸಿದ್ದಾರೆ. ಕನ್ನಡ ಒಂದು ಮೃದು ಭಾಷೆ. ಆ ಭಾಷೆಯನ್ನಾಡುವವರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದ ಅವರು, ಕರ್ನಾಟಕ ಸಂಪ್ರದಾಯದೊಂದಿಗೆ ತಂತ್ರಜ್ಞಾನ, ಪ್ರಕೃತಿ ಸಂಪತ್ತಿನ ಜತೆಗೆ ಸಂಸ್ಕೃತಿ, ವಾಸ್ತುಶಿಲ್ಪದ ಜತೆಗೆ ಸ್ಟಾರ್ಟ್ ಅಪ್ ಗಳ ಮಹಾಸಂಗಮವಾಗಿದೆ ಎಂದು ಬಣ್ಣಿಸಿದರು.
ಮುಂದಿನ ಇನ್‌ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2025 ರಲ್ಲಿ ನಮ್ಮ ಸರಕಾರ ಮತ್ತೆ ಆಯೋಜಿಸುವ ಸಂಪೂರ್ಣ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಕರ್ನಾಟಕ ಸುಸ್ಥಿರ ಅಭಿವೃದ್ಧಿ ಕಾಣುತ್ತಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಗಮನಿಸಿದರೆ ರಾಜ್ಯದ ಮೇಲೆ ಹೂಡಿಕೆದಾರರು ವಿಶ್ವಾಸ ಹೊಂದಿರುವುದು ಸಾಬೀತಾಗುತ್ತದೆ.
– ಬಸವರಾಜ ಬೊಮ್ಮಾಯಿ, ಸಿಎಂ