ರಾಯ್ಪುರ/ರೇವಾ/ಹೈದರಾಬಾದ್: ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರವೆಂಬ ಕಾಯಿಲೆ ಗುಣಪಡಿಸಲು ನೋಟು ಅಮಾನ್ಯವೆಂಬ ಕಹಿ ಔಷಧ ನೀಡಬೇಕಾಯಿತು ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಮಧ್ಯ ಪ್ರದೇಶದ ರೇವಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಈ ಮಾತುಗಳನ್ನಾಡಿದ್ದಾರೆ. ಗೆದ್ದಲನ್ನು ನಿವಾರಿಸಲು ಅತ್ಯಂತ ಕಠಿಣ ಔಷಧ ನೀಡುತ್ತೇವೆ. ಅದೇ ರೀತಿ ದೇಶದ ವ್ಯವಸ್ಥೆಯಲ್ಲಿದ್ದ ಭ್ರಷ್ಟಾಚಾರ ಹೋಗಲಾಡಿಸಲು ಕಹಿ ಔಷಧ ನೀಡಬೇಕಾಯಿತು ಎಂದಿದ್ದಾರೆ.
ಮನೆಗಳಲ್ಲಿ, ಹಾಸಿಗೆ ಅಡಿಯಲ್ಲಿ , ಕಚೇರಿ, ಕಾರ್ಖಾನೆಗಳಲ್ಲಿ ಹಣ ಅಡಗಿಸಿ ಇಡುತ್ತಿದ್ದವರು ಈಗ ಪ್ರತಿಯೊಂದು ಪೈಸೆಗೂ ತೆರಿಗೆ ಪಾವತಿಸುತ್ತಿದ್ದಾರೆ. ಅದನ್ನು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದೇ ವೇಳೆ, ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡುವ ವಾಗ್ಧಾನ ಮಾಡಿತ್ತು. ಅದರಂತೆ ನಡೆದುಕೊಳ್ಳದ ಕಾಂಗ್ರೆಸ್-ಜೆಡಿಎಸ್ ಸರಕಾರ ರೈತರನ್ನು ಜೈಲಿಗೆ ಕಳುಹಿಸುವ ಕ್ರಮ ಕೈಗೊಂಡಿದೆ ಎಂದು ಟೀಕಿಸಿದ್ದಾರೆ. ಛತ್ತೀಸ್‌ಗಡದಲ್ಲಿ ಕೂಡ ರವಿವಾರ ಪ್ರಧಾನಿ ಇದೇ ವಿಚಾರ ಪ್ರಸ್ತಾಪ ಮಾಡಿದ್ದರು.
“ಕರ್ನಾಟಕ ಸರಕಾರವು ಸಾಲ ಮನ್ನಾ ಘೋಷಣೆ ಮಾಡಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, ಕೇಂದ್ರ ಸರಕಾರ 2022 ರ ಒಳಗಾಗಿ ರೈತರ ಆದಾಯ ಹೆಚ್ಚಿಸುವ ಗುರಿ ಹಾಕಿಕೊಂಡಿದೆ. 14 ಕೋಟಿ ಮಂದಿಗೆ ಪ್ರಧಾನಂತ್ರಿ ಮುದ್ರಾ ಯೋಜನೆ ಅಡಿ ಯಾವುದೇ ಖಾತರಿ ಇಲ್ಲದೆ ಸಾಲ ನೀಡಿದೆ’ ಎಂದ ಪ್ರಧಾನಿ, ಕಾಂಗ್ರೆಸ್ ನೇತೃತ್ವದ ಸರಕಾರ 10 ವರ್ಷಗಳಲ್ಲಿ ಸಾಧಿಸದೇ ಇದ್ದದ್ದನ್ನು ಕೇವಲ 4 ವರ್ಷಗಳಲ್ಲಿ ನಾವು ಸಾಧಿಸಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಲೇ ಬೇಡಿ: ನ.28ರಂದು ಮಧ್ಯಪ್ರದೇಶ ಚುನಾವಣೆಯಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿ ಮತದಾನ ಮಾಡಿ. ಒಬ್ಬನೇ ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗದಂತೆ ನಿರ್ಧಾರ ಕೈಗೊಳ್ಳಿ ಎಂದು ಮತದಾರರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರಕಾರ. ಕೇಂದ್ರದಲ್ಲಿಯೂ ನಮ್ಮದೇ ಸರ್ಕಾರ ಇದೆ. ಹೀಗಾಗಿ ರಾಜ್ಯಕ್ಕೆ ಡಬಲ್ ಎಂಜಿನ್ ಇದೆ ಎಂದರು.
ಪ್ರಣಾಳಿಕೆ ಬಿಡುಗಡೆ: ಮಿಜೋರಾಂ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಿಜೋ ಭಾಷೆಯನ್ನು ಸಂವಿಧಾನದ ಎಂಟನೇ ಷೆಡ್ಯುಲ್‌ನಲ್ಲಿ ಸೇರಿಸುವ ವಾಗ್ಧಾನ ಮಾಡಿದೆ.
ರಾಹುಲ್ ವಾಗ್ಧಾಳಿ: ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ರ್ಯಾಲಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ನೇತೃತ್ವದ ಕೇಂದ್ರ ಸರಕಾರ ಚುನಾವಣಾ ಆಯೋಗ, ಸಿಬಿಐ ಸೇರಿದಂತೆ ಎಲ್ಲಾ ಸಂಸ್ಥೆಗಳ ಕಾರ್ಯದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿಯಿಂದ ಲಂಚ
ತೆಲಂಗಾಣದ ನಿರ್ಮಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮಗೆ 25 ಲಕ್ಷ ರೂ. ಲಂಚ ನೀಡಲು ಮುಂದಾಗಿದ್ದರು ಎಂದು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ. ಸೋಮವಾರ ಮಾತನಾಡಿದ ಒವೈಸಿ, ತಾವು ರ್ಯಾಲಿ ನಡೆಸಬಾರದು. ಅದಕ್ಕಾಗಿ 25 ಲಕ್ಷ ರೂ. ಮೊತ್ತ ನೀಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಎ.ಮಹೇಶ್ವರ ರೆಡ್ಡಿ ಆಮಿಷವೊಡ್ಡಿದ್ದರು ಎಂದು ಹೇಳಿದ್ದಾರೆ. ಈ ಆರೋಪವನ್ನು ರೆಡ್ಡಿ ಅಲ್ಲಗಳೆದಿದ್ದಾರೆ.
ಎರಡನೇ ಹಂತದಲ್ಲಿ ಶೇ.71 ಮತದಾನ
ಛತ್ತೀಸ್‌ಗಡದಲ್ಲಿ ಮಂಗಳವಾರ ಎರಡನೇ ಮತ್ತು ಕೊನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, 72 ಕ್ಷೇತ್ರಗಳಲ್ಲಿ ಶೇ.71ರಷ್ಟು ಮತದಾನವಾಗಿದೆ. ಮತದಾನದ ಅವಧಿ ಸಂಜೆ 5 ಗಂಟೆಗೆ ಮುಕ್ತಾಯವಾಗಿದ್ದರೂ, ಸರತಿಯಲ್ಲಿ ಇನ್ನೂ ಜನರು ನಿಂತಿದ್ದರು. ಹಲವು ಸ್ಥಳಗಳಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಇವಿಎಂಗಳು ಕಾರ್ಯ ವೆಸಗಲಿಲ್ಲ. ಅದು ವಿಳಂಬಕ್ಕೆ ಕಾರಣವಾಯಿತು. ಕಾಂಗ್ರೆಸ್ ಈ ಬಗ್ಗೆ ಅಪಸ್ವರವೆತ್ತಿದೆ.