Advertisement
ಇಂದಿನಿಂದ ಆರಂಭವಾಗುವ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ, ಮುಂದಿನ ವರ್ಷದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿಯ ಮುನ್ನೋಟದ ಜತೆಗೆ ನೋಟು ಅಮಾನ್ಯದಿಂದ ರಾಜ್ಯದ ಜನತೆ ಎದುರಿಸಿದ ಸಂಕಷ್ಟಗಳನ್ನು ಕೇಂದ್ರ ಸರ್ಕಾರದಿಂದಲೇ ನೇಮಕಗೊಂಡ ರಾಜ್ಯಪಾಲರ ಬಾಯಲ್ಲಿ ಹೇಳಿಸಿ ಆ ಮೂಲಕ ಬಿಜೆಪಿಗೆ ಮುಜುಗರಕ್ಕೀಡುಪಡಿಸುವ ಎಲ್ಲ ಸಾಧ್ಯತೆಗಳಿವೆ.
Related Articles
Advertisement
ರಾಜ್ಯಪಾಲರೇ ನೋಟ್ ಬ್ಯಾನ್ ನಿಷೇಧವನ್ನು ಟೀಕಿಸುವ ಪರಿಸ್ಥಿತಿ ಬಂದಾಗ ಬಿಜೆಪಿ ಸಹ ಇದನ್ನು ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗಾœಳಿ ನಡೆಸುವ ಮತ್ತು ವಿಧಾನಮಂಡಲ ಅಧಿವೇಶನದಲ್ಲಿ ಕೋಲಾಹಲ ಎಬ್ಬಿಸುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ.
ನೋಟ್ ಬ್ಯಾನ್ ಜತೆಗೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳಲ್ಲಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡುವಲ್ಲಿ ಮಧ್ಯಂತರವಾಗಿ ನಿಯಮಾವಳಿಗಳನ್ನು ಬದಲಾವಣೆ ಮಾಡಿದ ನರೇಂದ್ರಮೋದಿ ಸರ್ಕಾರವನ್ನು ಸಹ ಟೀಕಿಸುವ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸುವ ಸಂಭವವನ್ನೂ ತಳ್ಳಿಹಾಕುವಂತಿಲ್ಲ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಹಲವಾರು ಯೋಜನೆಗಳಲ್ಲಿ ಅನುದಾನ ನೀಡಲು ಒಪ್ಪಿ ಮಧ್ಯಂತರ ಅವಧಿಯಲ್ಲಿ ಕೆಲವು ನಿಯಮಾವಳಿಗಳ ನೆಪವೊಡ್ಡಿ ಅನುದಾನ ನೀಡದೆ ವಂಚಿಸಿರುವ ಸಂಗತಿಯನ್ನೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ನಿಲುವು ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಟೀಕಿಸುವ ಸಾಧ್ಯತೆಯಿದೆ..
ಕಾವೇರಿ, ಮಹದಾಯಿ, ಕೃಷ್ಣಾ ವಿವಾದ ಹಾಗೂ ತೀವ್ರ ಬರಗಾಲ ಕುರಿತು ಸಹ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಗೊಳ್ಳಲಿದ್ದು ಕಾವೇರಿ ಮತ್ತು ಮಹದಾಯಿ ವಿವಾದದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವ ಬದ್ಧತೆಯನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಸತತ ಬರಗಾಲದ ಮಧ್ಯೆಯೂ ರಾಜ್ಯ ಸರ್ಕಾರ ಸಾಧನೆ ಮಾಡಿದ ಸಂಗತಿಗಳನ್ನು ರಾಜ್ಯಾಪಾಲರ ಭಾಷಣದಲ್ಲಿ ಹೇಳಲಾಗಿದೆ. ಅನ್ನಭಾಗ್ಯದಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಪಡಿತರ ಹಂಚಿಕೆ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಹಾಲಿನ ಪ್ರೋತ್ಸಾಹ ಧನ ಯಾವುದೇ ತೊಂದರೆ ಇಲ್ಲದೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದನ್ನು ಸಹ ರಾಜ್ಯಪಾಲರ ಭಾಷಣದಲ್ಲಿ ವಿವರಿಸಲಾಗಿದೆ.
50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಮತ್ತು ಕೃಷ್ಣಾ ಕಣಿವೆಯಲ್ಲಿ ನೀರಾವರಿ ಯೋಜನೆಗಳನ್ನು ಕಳೆದ ಮೂರು ವರ್ಷಗಳಲ್ಲಿ ಕೈಗೆತ್ತಿಕೊಂಡಿರುವುದು. ರಸ್ತೆ ಅಭಿವೃದ್ಧಿ, ಗ್ರಾಮೀಣಾಭಿವೃದ್ದಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 10 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ. ಸರ್ಕಾರದ ಅವಧಿಯಲ್ಲಿ ಹತ್ತು ಲಕ್ಷ ಕಡುಬಡವರಿಗೆ ವಸತಿ ನಿರ್ಮಿಸುವ ಯೋಜನೆಗಳನ್ನೂ ಸಹ ಸುದೀರ್ಘವಾಗಿ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ.
ನಾಡು, ನುಡಿ, ನೆಲ,. ಜಲ ವಿವಾದಗಳಲ್ಲಿ ಯಾವುದೇ ರಾಜಿ ಇಲ್ಲದೆ ಕನ್ನಡ ನಾಡಿನ ಹಿತಾಸಕ್ತಿಯನ್ನು ಕಾಪಾಡುವ ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
– ಸೋಮಶೇಖರ ಕವಚೂರು