ಕಲಬುರಗಿ: ರಾಜ್ಯದಲ್ಲಿನ ಅತಿವೃಷ್ಟಿ-ಅನಾವೃಷ್ಟಿ ಹಾನಿ ಕುರಿತು ಸಮೀಕ್ಷೆ ನಡೆದಿದ್ದು, ವರದಿ ಬಂದ ನಂತರ ಕೇಂದ್ರಕ್ಕೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಶುಕ್ರವಾರ ಜಿಲ್ಲೆಯ ಕಮಲಾಪುರ ಬಳಿ ಅನಾವೃಷ್ಟಿಯಿಂದ ಹಾನಿಗೀಡಾದ ಬೆಳೆ ವೀಕ್ಷಿಸಿದ ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿನ ಒಟ್ಟಾರೆ ಹಾನಿ ಕುರಿತು ಸರ್ವ ನಿಟ್ಟಿನಿಂದಲೂ ಸಮೀಕ್ಷೆ ನಡೆದಿದೆ. ಅದೇ ರೀತಿ ಮಳೆ ಕೊರತೆಯಿಂದ ರಾಜ್ಯದ ಇತರೆ ಭಾಗದಲ್ಲಿ ಆಗಿರುವ ಬೆಳೆ ಹಾನಿ ಕುರಿತು ವರದಿ ತರಿಸಲಾಗುತ್ತಿದೆ.
ಎಲ್ಲವನ್ನು ಕ್ರೋಢೀಕರಿಸಿ ನೆರವು ಕೋರಿ ಕೇಂದ್ರದ ಮೊರೆ ಹೋಗಲಾಗುವುದು. ಕೇರಳದಂತೆ ನಮಗೂ ಹೆಚ್ಚಿನ ಪರಿಹಾರ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಈಗಾಗಲೇ ಕೇಂದ್ರ ಸಚಿವ ಅನಂತಕುಮಾರ ಭರವಸೆ ನೀಡಿದ್ದಾರೆ. ಅಲ್ಲದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗಿಗೆ ಆಗಮಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಸೂಕ್ತ ನೆರವು ನೀಡಲಿದೆ ಎನ್ನುವ
ವಿಶ್ವಾಸವಿದೆ. ಕೊಡಗಿನಲ್ಲಿನ ಪ್ರವಾಹ ಕುರಿತಾಗಿ ಪ್ರಧಾನಮಂತ್ರಿಗಳು ಹಾಗೂ ರಾಷ್ಟ್ರಪತಿ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಕೇಂದ್ರದ ಪಡೆಗಳು ಪರಿಹಾರೋಪಾಯದಲ್ಲಿ ಕಾರ್ಯನಿರತವಾಗಿವೆ. ಈ ವಿಷಯದಲ್ಲಿ ರಾಜಕೀಯ ಮಾತನಾಡೋದು ಬೇಡ ಎಂದರು.
ಹಣಕಾಸು ಇಲಾಖೆಗೆ ಪ್ರಸ್ತಾವನೆ: ರಾಜ್ಯದಲ್ಲಿನ 50 ಹೊಸ ತಾಲೂಕುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯವಾಗಿ ನೂತನ ತಾಲೂಕಿನಲ್ಲಿ 14 ಕಚೇರಿಗಳನ್ನು ಕಾರ್ಯಾರಂಭ ಮಾಡಬೇಕಾಗಿವೆ.
ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಖರೀದಿಸುವ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಉದ್ದು, ಹೆಸರು ಖರೀದಿಗೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಸಹಾಯಕ ಆಯುಕ್ತ ರಾಚಪ್ಪ, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಹಿರಿಯ ಮುಖಂಡ ಕೃಷ್ಣಾಜಿ ಕುಲಕರ್ಣಿ ಮುಂತಾದವರಿದ್ದರು.