Advertisement

ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಯುವ ಸಾಧಕರ ಪರಿಚಯ

12:46 PM Aug 02, 2018 | |

ತೆಂಕಮಿಜಾರು : ಯುವ ಸಾಧಕರ ಪರಿಚಯದೊಂದಿಗೆ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ತೆಂಕ ಮಿಜಾರು ಗ್ರಾಮ ಪಂಚಾಯತ್‌ ವತಿಯಿಂದ ‘ಸ್ಫೂರ್ತಿ ಹಾಗೂ ಪ್ರೇರಣೆ- ನಮ್ಮ ಜೀವನ ನಮ್ಮ ಗುರಿಯೊಂದಿಗೆ’ ಎಂಬ ಧ್ಯೇಯ ವಾಕ್ಯ ದೊಂದಿಗೆ ನೀರ್ಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ಆ. 2ರಿಂದ ವಿಶೇಷ ಕಾರ್ಯಕ್ರಮ ಆರಂಭವಾಗಲಿದೆ.

Advertisement

ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಇದರ ಉದ್ದೇಶ. ನಗರದ ಶಾಲೆಗಳಲ್ಲಿ ಸಿಗುವಂಥ ವಾತಾವರಣವನ್ನು ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ್‌ ವತಿಯಿಂದ ಗ್ರಾಮೀಣ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಇದಕ್ಕಾಗಿ ತೆಂಕಮಿಜಾರು ಗ್ರಾ.ಪಂ.  ನಿಂದ ಸರಕಾರಿ ಪ್ರೌಢಶಾಲೆಗೆ ಯುವ ಸಾಧಕರನ್ನು ಕರೆಸಿ ಅವರು ನಡೆದು ಬಂದ ದಾರಿ, ಎದುರಿಸಿದ ಕಷ್ಟ, ಮಾಡಿದ ಸಾಧನೆ, ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಪ್ರಚುರಪಡಿಸಿ, ವಿದ್ಯಾರ್ಥಿಗಳಲ್ಲಿ ತಾನು ಒಬ್ಬ ಸಾಧಕನಾಗಬೇಕು ಎಂಬ ಪರಿಕಲ್ಪನೆ ಮೂಡಿಸಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದೆ.

ಹಂತ ಹಂತವಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಮೊದಲಿಗೆ ಮೂಡಬಿದಿರೆಯ ಯುವ ತಹಶೀಲ್ದಾರ್‌, ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ರಶ್ಮೀ ಅವರು ತಮ್ಮ ಸಾಧನೆ ಮತ್ತು ಕೆಎಎಸ್‌ ಉತ್ತೀರ್ಣದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ.

ಸರಕಾರಿ ಪ್ರೌಢಶಾಲೆಯ ಆಯ್ಕೆ
ಪ್ರೌಢ ಶಾಲೆ ವಿದ್ಯಾರ್ಥಿಗಳಲ್ಲಿ ಹೆಚ್ಚು ಕನಸು, ಆಸಕ್ತಿ, ಕಲಿಕೆಯ ಹಂಬಲವನ್ನು ಹುಟ್ಟಿಸುವ ಕಾಲಘಟ್ಟವಾಗಿದೆ. ಪ್ರೌಢತೆಯೊಂದಿಗೆ ಗುರಿ ಅವರಲ್ಲಿರಬೇಕು. ಅದಕ್ಕಾಗಿ ಮಾರ್ಗದರ್ಶನದ ಅಗತ್ಯವಿರುತ್ತದೆ. ಯುವ ಸಾಧಕರ ಪರಿಚಯ ಅವರನ್ನು ಕನಸು ಕಾಣುವಂತೆ ಮಾಡಲಿದೆ. ಸರಕಾರಿ ಪ್ರೌಢಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯಾರೂ ಹೆಚ್ಚು ಗಮನ ಕೊಡುತ್ತಿಲ್ಲ. ಈ ಸಂದರ್ಭದಲ್ಲಿ ಒಂದು ಅಶಾಕಿರಣ ಮೂಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲಿದೆ, ಒಳ್ಳೆಯ ಚಿಂತನೆಗೆ ಹಾದಿಯಾಗಲಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಇದು ಕೂಡ ಸಹಕಾರಿಯಾಗಲಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ಶಾಲೆಗಳಿಗೆ ವಲಸೆ ಹೋಗದಂತೆ ತಡೆಯಲು ಸಾಧ್ಯ ವಾಗುತ್ತದೆ ಎಂಬುದು ಪಂಚಾಯತ್‌ ಆಡಳಿತ ವರ್ಗದ ಅಭಿಪ್ರಾಯ.

ತಿಂಗಳಿಗೊಂದು ಕಾರ್ಯಕ್ರಮ
ತೆಂಕ ಮಿಜಾರು ಗ್ರಾಮ ಪಂಚಾಯತ್‌ ನಲ್ಲಿ ಬಡಗ ಮಿಜಾರು ಸರಕಾರಿ ಪ್ರೌಢಶಾಲೆ ಮತ್ತು ನೀರ್ಕೆರೆ ಸರಕಾರಿ ಪ್ರೌಢಶಾಲೆಯಿದೆ. ಎರಡೂ ಶಾಲೆಯಲ್ಲೂ ಪ್ರತಿ ತಿಂಗಳಿಗೊಂದು ಕಾರ್ಯಕ್ರಮ ನಡೆಯಲಿದ್ದು, ಆ. 2ರಂದು ನೀರ್ಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ಮೂಡಬಿದಿರೆ ತಹಶೀಲ್ದಾರ್‌ ರಶ್ಮೀ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ತೆಂಕಮಿಜಾರು ಗ್ರಾಮ ಪಂಚಾಯತ್‌ ತನ್ನ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕವಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಟ್ಟಿದೆ. ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಇಂತಹ ಯುವ ಸಾಧಕರನ್ನು ಪರಿಚಯಿಸಲು ತಯಾರಾಗಬೇಕು. ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುವ ಯುವ ಸಾಧಕರೇ ಪ್ರೇರಣಾ ಶಕ್ತಿಗಳು. ಇದು ಎಲ್ಲ ಶಾಲೆಗಳಲ್ಲಿ ನಡೆದರೆ ವಿದ್ಯಾರ್ಥಿಗಳು ಸಮಾಜಕ್ಕೆ ಮುಂದಿನ ದಿನಗಳಲ್ಲಿ ಆಸ್ತಿಯಾಗಬಹುದು.

Advertisement

ಉನ್ನತ ಸ್ಥಾನಕ್ಕೇರಬೇಕು
ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ತಾವು ಕೂಡ ಮುಂದೆ ಉನ್ನತ ಸ್ಥಾನಮಾನ ಗಳಿಸುವಂತಾಗಬೇಕು ಎಂಬ ಮನೋಭಾವ ಮೂಡಿಸುತ್ತದೆ. ತಮ್ಮ ಭವಿಷ್ಯದ ಬಗ್ಗೆ ಚಿಂತನೆಗಳು ಮೂಡುತ್ತವೆ. ಸ್ಪರ್ಧಾತ್ಮಕ ಯುಗದಲ್ಲಿ ತಾವು ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಪ್ರೇರಣೆಯಾಗಲಿದೆ.  
ಪ್ರತಿಮಾ,
ಮುಖ್ಯೋಪಾಧ್ಯಾಯಿನಿ, ಸರಕಾರಿ ಪ್ರೌಢಶಾಲೆ, ನೀರ್ಕೆರೆ

ಸೌಲಭ್ಯಗಳಿಂದ ವಂಚಿತರಾಗಬಾರದು
ಗ್ರಾಮೀಣ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗುವಂಥ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬುದು ಗ್ರಾ.ಪಂ. ನ ಆಶಯ. ಇದಕ್ಕೆ ಪೂರಕವಾಗಿ ಯುವ ಸಾಧಕರನ್ನು ಶಾಲೆಗೆ ಕರೆಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಕಾರ್ಯ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗುರಿ, ಛಲ, ಆಸಕ್ತಿಯನ್ನು ಬೆಳೆಸುವುದು ಸಮಾಜದ ಹಿತದೃಷ್ಟಿಯಿಂದ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು.
 -ಸಾಯೀಶ್‌ ಚೌಟ
ಪಿಡಿಒ, ತೆಂಕಮಿಜಾರು

Advertisement

Udayavani is now on Telegram. Click here to join our channel and stay updated with the latest news.

Next