Advertisement

13 ನಿಮಿಷಗಳಲ್ಲಿ ವರದಿ ನೀಡುವ ಎಕ್ಸ್‌ಪ್ರೆಸ್‌ ಪರೀಕ್ಷಾ ಸೌಲಭ್ಯದ ಪರಿಚಯ

06:09 PM Mar 08, 2021 | Team Udayavani |

ಮುಂಬಯಿ: ಕಳೆದ 6 ತಿಂಗಳಲ್ಲಿ ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.2 ಲಕ್ಷ ಪ್ರಯಾಣಿಕರು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದು, ಅವರಲ್ಲಿ 1,480 ಮಂದಿಯ ವರದಿ ಪಾಸಿಟಿವ್‌ ಬಂದಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

Advertisement

ಸಿಎಸ್‌ಎಂಐಎ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವಿಮಾನ ನಿಲ್ದಾಣ ಪ್ರಾಧಿಕಾರವು ಕಳೆದ ವರ್ಷ ಸೆ. 6ರಂದು ಟರ್ಮಿನಲ್‌ನಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷಾ ಕೌಂಟರ್‌ಗಳನ್ನು ಪರಿಚಯಿಸಿತು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ 1,776 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ 80,923ಕ್ಕೂ ಹೆಚ್ಚು ಪ್ರಯಾಣಿಕರು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದಾರೆ ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ. 2020ರ ಸೆಪ್ಟಂಬರ್‌ನಿಂದ 2021ರ ಫೆಬ್ರವರಿಯ ಅವಧಿಯಲ್ಲಿ ವಿಮಾನ ನಿಲ್ದಾಣದಲ್ಲಿ ನಡೆಸಿದ 2,20,000ಕ್ಕೂ ಹೆಚ್ಚು ಪರೀಕ್ಷೆಗಳಲ್ಲಿ 1,480 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.

8 ಗಂಟೆಗಳೊಳಗೆ ವರದಿ :

ಸಿಎಸ್‌ಎಂಐಎ ಸರಕಾರದ ಮಾನದಂಡ ಗಳಿಗೆ ಅನುಗುಣವಾಗಿ ಪರೀಕ್ಷಾ ಸೌಲಭ್ಯ ವನ್ನು ಪರಿಚಯಿಸಿತ್ತು. ಪ್ರಯಾಣಿಕ ರಿಗೆ ವಿಮಾನ ನಿಲ್ದಾಣದಲ್ಲಿನ ಕೌಂಟರ್‌ಗಳಲ್ಲಿ ಪರೀಕ್ಷಾ ಮಾದರಿ ಸಲ್ಲಿಸಲು ಮತ್ತು ಅವರ ವರದಿಯನ್ನು 8 ಗಂಟೆಗಳಲ್ಲಿ ಸ್ವೀಕರಿಸಲು ಅನುವು ಮಾಡಿಕೊಟ್ಟಿತು. ತನ್ನ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ತಡೆರಹಿತ ಸಂಚಾರದ ತನ್ನ ಬದ್ಧತೆಯನ್ನು ಮುಂದಿಟ್ಟುಕೊಂಡು, ವಿಮಾನ ನಿಲ್ದಾಣವು 2020ರ ಅಕ್ಟೋಬರ್‌ನಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸಿತು.

13 ನಿ.ಗಳ ಎಕ್ಸ್‌ಪ್ರೆಸ್‌ ಪರೀಕ್ಷಾ ಸೌಲಭ್ಯ :

Advertisement

ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಲ್ಲದೆ, ತಮ್ಮವರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಅಥವಾ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲು ಬರುವವರು ಕೂಡ ಈ ಸೌಲಭ್ಯವನ್ನು ಪಡೆಯಬಹುದು. ಸಿಎಸ್‌ಎಂಐಎ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚು ಗಮನ ಹರಿಸುತ್ತಿದ್ದು, ತ್ವರಿತ ಫಲಿತಾಂಶ ಬಯಸುವ ಪ್ರಯಾಣಿಕರಿಗಾಗಿ ಸಿಎಸ್‌ಎಂಐಎ 13 ನಿಮಿಷಗಳಲ್ಲಿ ಫಲಿತಾಂಶಗಳನ್ನು ಒದಗಿಸುವ ಎಕ್ಸ್‌ಪ್ರೆಸ್‌ ಪರೀಕ್ಷೆಯನ್ನೂ ಪರಿಚಯಿಸಿರುವುದು ವಿಶೇಷತೆಯಾಗಿದೆ.

ಆಗಮನ-ನಿರ್ಗಮನ  ಗೇಟ್‌ಗಳಲ್ಲಿ ಕಟ್ಟೆಚ್ಚರ :

ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆಗೆ ಸಂಬಂಧಿಸಿದಂತೆ ಸರಕಾರವು ನಿಗದಿಪಡಿಸಿದ ಆವಶ್ಯಕತೆ ಗಳನ್ನು ಸಿಎಸ್‌ಎಂಐಎ ಪಾಲಿಸುತ್ತಿದ್ದು, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರಸ್ತುತ ವಿಮಾನ ನಿಲ್ದಾಣವು ತನ್ನ ಟರ್ಮಿನಲ್‌ 2ರ ಗೇಟ್‌ ಬಿ, ಲೆವೆಲ್‌ 2 ಏಸೈಡ್‌ ಕಾರಿಡಾರ್‌ ಮತ್ತು ಗೇಟ್‌ 2ರ ಎದುರಿನ ಕಬೆಸೈಡ್‌ ಲೆವೆಲ್‌ 4ರ ನಿರ್ಗಮನ ಗೇಟ್‌ಗಳಲ್ಲಿ ಮೂರು ಪರೀಕ್ಷಾ ಸೌಲಭ್ಯಗಳನ್ನು ಹೊಂದಿದೆ. ಲೈಫ್ನಿಟಿ ವೆಲ್ನೆಸ್‌ ಇಂಟರ್‌ನ್ಯಾಶನಲ್‌ ಲಿ. ಮತ್ತು ಮೈಲಾಬ್‌  ಡಿಸ್ಕವರಿ ಸೊಲ್ಯೂಶನ್ಸ್‌ ಪ್ರೈ. ಲಿ. ಪರೀಕ್ಷಾ ಸೌಲಭ್ಯಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ.

30ಕ್ಕೂ ಹೆಚ್ಚು ಪರೀಕ್ಷಾ  ಸೌಲಭ್ಯಗಳ ಸ್ಥಾಪನೆ  :

ಸಿಎಸ್‌ಎಂಐಎ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗಾಗಿ 30ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಇವು ಆಣ್ವಿಕ ಪರೀಕ್ಷಾ ಸೌಲಭ್ಯಗಳನ್ನು ಹೊಂದಿವೆ. ಸರಕಾರದ ಮಾನದಂಡಗಳಿಗೆ ಅನುಗುಣವಾಗಿ 8 ಗಂಟೆಗಳ ಒಳಗೆ ಫಲಿತಾಂಶಗಳನ್ನು ಒದಗಿಸುವ ನಿಯಮಿತ ಪರೀಕ್ಷೆಯನ್ನು ಪ್ರಯಾಣಿಕರು ಕನಿಷ್ಠ 850 ರೂ. ವೆಚ್ಚದಲ್ಲಿ ಪಡೆಯಬಹುದು. ಅಲ್ಲದೆ ಎಕ್ಸ್‌ಪ್ರೆಸ್‌ ಪರೀಕ್ಷೆಗೆ 4,500 ರೂ. ಗಳನ್ನು ನಿಗದಿಪಡಿಸಲಾಗಿದ್ದು, 13 ನಿಮಿಷಗಳಲ್ಲಿ ಫಲಿತಾಂಶ ಲಭಿಸುತ್ತದೆ.

ಪ್ರಯಾಣಿಕರಿಗೆ  ಉತ್ತಮ ಸೇವಾ ಸೌಲಭ್ಯ :

ವಿಮಾನ ನಿಲ್ದಾಣವು ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. 40 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಿದ್ದು, ಸಿಎಸ್‌ಎಂಐಎ ಇತ್ತೀಚೆಗೆ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. ಸಿಎಸ್‌ಎಂಐಎಯಲ್ಲಿರುವ ಆರ್‌ಟಿ-ಪಿಸಿಆರ್‌ ಪರೀಕ್ಷಾ ಸೌಲಭ್ಯವು ಆಗಮನ ಮತ್ತು ನಿರ್ಗಮನ ಪ್ರಯಾಣಿಕರಿಗಾಗಿ ಪ್ರವೇಶ ಮತ್ತು ನಿರ್ಗಮನದುದ್ದಕ್ಕೂ ವಿವಿಧ ಸಂಪರ್ಕ ತಡೆ ನಿಯಂತ್ರಣ ವ್ಯವಸ್ಥೆ ಮೂಲಕ ಪ್ರಯಾಣಿಕರ ಕಾಳಜಿ ವಹಿಸಿದೆ.

 

7 ದಿನಗಳ ಕಡ್ಡಾಯ ಸಂಪರ್ಕ ತಡೆ :

ಸರಕಾರದ ಇತ್ತೀಚೆಗಿನ ನಿರ್ದೇಶನದಂತೆ ಯುಕೆ, ಯುರೋಪ್‌, ಮಧ್ಯಪ್ರಾಂಚ್ಯ, ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಕಡ್ಡಾಯ ಸಾಂಸ್ಥಿಕ ಸಂಪರ್ಕ ತಡೆಯನ್ನು ಘೋಷಿಸಲಾಗಿದೆ. ಸಿಎಸ್‌ಎಂಐಎಯಿಂದ ಭಾರತದ ಇತರ ರಾಜ್ಯಗಳಿಗೆ ಪ್ರಯಾಣಿಸುವ ಮತ್ತು ಆಗಮಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಆಣ್ವಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆಗಮಿಸುವ 72 ಗಂಟೆಗಳ ಮೊದಲು ಕೈಗೊಂಡ ಪರೀಕ್ಷೆಯ ನೆಗೆಟಿವ್‌ ವರದಿಯ ಪುರಾವೆಗಳನ್ನು ಇತರ ಎಲ್ಲ ಅಂತಾರಾಷ್ಟ್ರೀಯ ಆಗಮನದ  ಪ್ರಯಾಣಿಕರು ಒದಗಿಸಬೇಕಾಗುತ್ತದೆ.

ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯ :

ದಿಲ್ಲಿ, ರಾಜಸ್ಥಾನ, ಗೋವಾ, ಗುಜರಾತ್‌ ಮತ್ತು ಕೇರಳದಿಂದ ಸಿಎಸ್‌ಎಂಐಎಗೆ ಆಗಮಿಸುವ ದೇಶೀಯ ಪ್ರಯಾಣಿಕರು ತಮ್ಮ ಪ್ರಯಾಣದ 72 ಗಂಟೆಗಳ ಮೊದಲು ತೆಗೆದುಕೊಂಡ ನೆಗೆಟಿವ್‌ ವರದಿಯನ್ನು ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಸಲ್ಲಿಸಬೇಕು. ಒಂದು ವೇಳೆ ವರದಿಯಿಲ್ಲದಿದ್ದಲ್ಲಿ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ಪರೀûಾ ವರದಿ ನೀಡಬೇಕು. ಸಾಂಕ್ರಾಮಿಕ ರೋಗದ ಮಧ್ಯೆ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬಂದಿಯ ಯೋಗಕ್ಷೇಮವನ್ನು ಕಾಪಾಡಲು ಆರೋಗ್ಯ ಮತ್ತು ಸರಕಾರಿ ಸಂಸ್ಥೆಗಳು ರೂಪಿಸಿರುವ  ತಡೆಗಟ್ಟುವ ಕ್ರಮಗಳು ಸಹಿತ ಹಲವಾರು ಎಸ್‌ಒಪಿಗಳನ್ನು ಸಿಎಸ್‌ಎಂಐಎ ಜಾರಿಗೆ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next