Advertisement

ಪಾರಂಪರಿಕ ವೈದ್ಯ ಪದತಿ ವಿಶ್ವಾಕ್ವೆ ಪರಿಚಯಿಸಿ

04:10 PM Oct 27, 2018 | |

ದಾವಣಗೆರೆ: ಪ್ರಸ್ತುತ ವೈದ್ಯಕೀಯ ಕ್ಷೇತ್ರ ವೆಚ್ಚದಾಯಕವಾಗಿದ್ದು, ಜನಸಾಮಾನ್ಯರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನೀಡುತ್ತಿರುವ ಪಾರಂಪರಿಕ ವೈದ್ಯ ಪದ್ಧತಿಯನ್ನು ಜಗದುದ್ದಕ್ಕೂ ಪರಿಚಯಿಸಿ, ಉಳಿಸಬೇಕಿದೆ ಎಂದು ಇಳಕಲ್‌ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಹೇಳಿದ್ದಾರೆ.

Advertisement

ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವದ ಎರಡನೇ ದಿನದ ಸುಸ್ಥಿರ ಪಾರಂಪರಿಕ ವೈದ್ಯ ಪದ್ಧತಿಗೆ ಔಷಧಿ ಸಸ್ಯಗಳ ಕೃಷಿ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವರು ವಂಶ ಪಾರಂಪರ್ಯವಾಗಿ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಜನರಿಂದ ಹಣ ಪಡೆಯದೇ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಾಕಷ್ಟು ತಮ್ಮ ಕೊಡುಗೆ ನೀಡುತ್ತಾ ಮಾದರಿಯಾಗಿದ್ದಾರೆ.  ಜೊತೆಗೆ ತಮ್ಮ ಮುಂದಿನ ಪೀಳಿಗೆಗೂ ಅದೇ ಸಂಸ್ಕಾರ ಕಲಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಇಂದಿನ ಆಧುನಿಕ ವೈದ್ಯ ಪದ್ಧತಿ ಸಾಕಷ್ಟು ವೆಚ್ಚದಾಯಕವಾಗಿದ್ದು, ಅದನ್ನು ನಿವಾರಣೆ ಮಾಡುವ ಶಕ್ತಿ ಪಾರಂಪರಿಕ ವೈದ್ಯ ಪದ್ಧತಿಗಿದೆ ಎಂದರು.

ನಾಟಿ ವೈದ್ಯರಲ್ಲಿ ಅಪಾರವಾದ ಅನುಭವ ಇತ್ತು. ಅವರು ಅನೇಕ ಕಾಯಿಲೆಗಳನ್ನು ಬಹುಬೇಗ ಗುಣಪಡಿಸುತ್ತಿದ್ದರು. ಅ ವೈದ್ಯ ಪದ್ಧತಿ ಅತ್ಯಂತ ಪರಿಣಾಮಕಾರಿ ಆಗಿದೆ. ಅನಾದಿಕಾಲದಿಂದಲೂ ಬಂದ ಈ ವಿದ್ಯೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಿದೆ ಎಂದು ಹೇಳಿದರು.

ಪಾರಂಪರಿಕ ವೈದ್ಯ ಪದ್ಧತಿ ಮಣ್ಣಿನಲ್ಲಿಯೇ ಮರೆಯಾಗಿ ಹೋಗಬಾರದು. ಈ ಪದ್ಧತಿ ಅನೇಕ ಋಷಿಮುನಿಗಳ, ಪಂಡಿತರ ಅನುಭವದ ಸಾವಿರಾರು ವರ್ಷಗಳ ಜ್ಞಾನವಾಗಿದೆ. ಅದನ್ನು ಪ್ರಯೋಗ ಮಾಡಿ ನಂತರ ಪುಸ್ತಕದಲ್ಲಿ ಬರೆದಿದ್ದಾರೆ. ಅಂತಹ ಅನುಭಾವದ ಪದ್ಧತಿಯನ್ನು ಸಾರ್ವಕಾಲಿಕವಾಗಿ ಉಳಿಯುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು. 

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಯು. ಸಿದ್ದೇಶ್‌ ಮಾತನಾಡಿ, ಆಯುಷ್‌ ಇಲಾಖೆ ತನ್ನ ಹಿರಿಮೆ ಗರಿಮೆ ಸಾಧಿಸಲು ಭಾರತೀಯ ಪಾರಂಪರಿಕ ವೈದ್ಯ ಪದ್ಧತಿ ಬಗ್ಗೆ ಪ್ರಚಾರ ಪಡಿಸಬೇಕಿದೆ. ನಮ್ಮಲ್ಲಿ ಸಾಕಷ್ಟು ಪಾರಂಪರಿಕ ವೈದ್ಯರು ಇದ್ದಾರೆ. ಈಗ ಬರೀ ಅಲೋಪಥಿ ಪದ್ಧತಿಯ ಔಷಧಿಗಳ ಬಗ್ಗೆ ಹೆಚ್ಚು ಪ್ರಚಾರ ಪಡಿಸಲಾಗುತ್ತಿದೆ. ಆದರೆ ಪಾರಂಪರಿಕ ವೈದ್ಯರ ಕಾರ್ಯಾಗಾರ ನಡೆಯದೇ ಈ ಪದ್ಧತಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಪಾರಂಪರಿಕ ವೈದ್ಯರಿಗೆ ಸಂಬಂಧಿಸಿದಂತೆ ಕಾರ್ಯಕ್ರಮಕ್ಕೆ ಈಗಾಗಲೇ ಮಾಹಿತಿ ಸಂಗ್ರಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತರಬೇತಿ ನೀಡಲಾಗುವುದು. ಸರಕಾರದಿಂದ ಸನ್ಮಾನ, ಪ್ರಮಾಣ ಪತ್ರ ನೀಡಿ, ನಾಟಿ ವೈದ್ಯರನ್ನು ಗುರುತಿಸಲಾಗುವುದು. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಜಿಲ್ಲೆಯಲ್ಲಿರುವ ನಾಟಿ ವೈದ್ಯರ ಪಟ್ಟಿ ಕೂಡ ಸಿದ್ಧ ಮಾಡಲಾಗಿದೆ ಎಂದು ತಿಳಿಸಿದರು. 

ಭಾರತ ಸರ್ಕಾರ ರಾಷ್ಟ್ರೀಯ ಆಯುಷ್‌ ಮಿಷನ್‌ ಜಾರಿಗೆ ತಂದು ಪಾರಂಪರಿಕ ವೈದ್ಯ ಪದ್ಧತಿ ಉಳಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಿದೆ. ಜೊತೆಗೆ ಪಾರಂಪರಿಕ ವೈದ್ಯರ ಮಕ್ಕಳಿಗೆ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಶೇ. 2ರಷ್ಟು ಮೀಸಲಾತಿ ಕಲ್ಪಿಸಿದೆ ಎಂದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಟಿ.ಎನ್‌. ದೇವರಾಜ್‌ ಮಾತನಾಡಿ, ನಮ್ಮ ಕೇಂದ್ರದ ಕದಳಿ ವನದಲ್ಲಿ ಅಲ್ಲಲ್ಲಿ ಔಷಧೀಯ ಸಸ್ಯಗಳು ಇದ್ದು, ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಎಲ್ಲರಿಗೂ ಔಷಧಿ ಸಸ್ಯ ದೊರೆಯುವಂತೆ ಮಾಡಲಾಗುವುದು ಎಂದರು. 

ಪ್ರಪಂಚದಲ್ಲಿ 7 ಮಿಲಿಯನ್‌ ಜನರಿದ್ದು, ಎಲ್ಲರಿಗೂ ಆಹಾರ ದೊರಕಿಸುವ ಕೆಲಸ ಮಾಡಬೇಕಿದೆ. 1.3 ಬಿಲಿಯನ್‌ನಷ್ಟು ಜನರು ಬಳಸುವ ಆಹಾರ ವ್ಯರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಹೆಚ್ಚು ಮಾಡುವ ಮೂಲಕ ಪ್ರತಿಯೊಬ್ಬರಿಗೂ ಆಹಾರ ದೊರಕಿಸುವ ನಿಟ್ಟಿನಲ್ಲಿ ಸವಾಲು ಎದುರಿಸಬೇಕಿದೆ ಎಂದು ತಿಳಿಸಿದರು.

ಇರಕಲ್‌ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ, ಶ್ರೀ ಗುರುಬಸವ ಗುರುಗಳು, ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಶ್ರೀ ಬಸವ ಭೃಗೇಶ್ವರ ಸ್ವಾಮೀಜಿ, ಶ್ರೀ ರಾಮಮೂರ್ತಿ ಸ್ವಾಮೀಜಿ, ಚಿಕ್ಕಬುಳ್ಳಾಪುರದ ನಿರಂಜನಾನಂದ ದೇಶಿಕೇಂದ್ರ ಸ್ವಾಮೀಜಿ, ಸತ್ಯನಾರಾಯಣ ಭಟ್‌,
ನೇರ್ಲಿಗೆ ಗುರುಸಿದ್ದಪ್ಪ, ಗೋಪಾಲಕೃಷ್ಣ, ದ್ಯಾಮಪ್ಪ, ಮಹಾದೇವಯ್ಯ, ಸದಾಶಿವ ನಡುಕೇರಿ, ಇತರರು ಉಪಸ್ಥಿತರಿದ್ದರು.

ಈ ಹಿಂದೆ ಹಿರಿಯರು ಸಸಿಗಳಲ್ಲಿನ ಔಷಧೀಯ ಗುಣ ಕಂಡು ಹಿಡಿದು ಅವುಗಳನ್ನು ಔಷಧ ರೂಪದಲ್ಲಿ ಜನರ ಆರೋಗ್ಯಕ್ಕಾಗಿ ಬಳಸುತ್ತಾ ಬಂದಿದ್ದಾರೆ. ಇವತ್ತಿಗೂ ಅರಿಶಿಣ, ಲವಂಗ, ಏಲಕ್ಕಿ, ಶುಂಠಿ ಮುಂತಾದವು ಗಿಡ ಮೂಲಿಕೆಯ ಔಷಧಗಳಾಗಿವೆ. ಇಂತಹ ಔಷಧಿಯ ಸಸ್ಯಗಳನ್ನು ಉಳಿಸಬೇಕು. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾರಂಪರಿಕ ಪದ್ಧತಿಯ ಬಗ್ಗೆ ಪ್ರಚಾರಪಡಿಸಬೇಕು.
 ಶ್ರೀ ಗುರುಮಹಾಂತ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next