Advertisement

ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ ಪರಿಚಯಿಸಿ

09:17 PM Apr 28, 2019 | Lakshmi GovindaRaju |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ತಿಳಿಸಿದರು.

Advertisement

ಹೋಬಳಿ ಕೇಂದ್ರದ ಗೊಮ್ಮಟೇಶ್ವರ ನಗರದಲ್ಲಿರುವ ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಅನ್ವೇಷಣೆ-19 ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡದಲ್ಲಿ ಮಂತ್ರ ಹೇಳುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣಿನ ಸಂಸ್ಕಾರ ಉಳಿಯಲಿ: ನಮ್ಮ ಈ ಮಣ್ಣಿನ ಸಂಸ್ಕಾರ ಉಳಿಯಬೇಕು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರೆ ಯುವ ಸಮುದಾಯಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿ ಪರಿಚಯವಾಗಬೇಕು ಇಲ್ಲದೆ ಹೋದರೆ ಕ್ರಮೇಣ ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣ ದೊರೆಯುತ್ತಿದೆ ಆದರೆ ದೇಶದ ಇತಿಹಾಸ, ಈ ಮಣ್ಣಿನ ಪರಂಪರೆಯ ಅರಿವು ಮೂಡಿಸುವ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಈ ಬಗ್ಗೆ ವಿಶ್ವ ವಿದ್ಯಾಲಯಗಳು ಹಾಗೂ ಸರ್ಕಾರ ಗಮನ ಹರಿಸಬೇಕು.

ಯುವ ಜನತೆ ಸರಿಯಾದ ಹಾದಿಯಲ್ಲಿ ನಡೆಯಬೇಕೆಂದರೆ ಸಂಸ್ಕಾರಯುತ ಶಿಕ್ಷಣ ನೀಡುವುದು ಅತ್ಯವಶ್ಯಕ ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮಠಗಳಿಂದ ನಡೆಯುತ್ತಿರುವ ವಿದ್ಯಾಲಯ ಹಾಗೂ ಸರ್ಕಾರಿ ಶಿಕ್ಷಕರು ಇದನ್ನು ಮನಗಂಡು ಜ್ಞಾನಾರ್ಜನೆ ನೀಡಲು ಮುಂದಾಗಬೇಕು ಎಂದರು.

Advertisement

ಉತ್ತಮ ಸಂಸ್ಕಾರ ಅಗತ್ಯ: ಭಾಷೆಯನ್ನು ನಿಯಮಿತವಾಗಿ ಬಳಸುವುದನ್ನು ರೂಡಿಸಿಕೊಳ್ಳಬೇಕು, ಅನ್ವೇಷಣಾ ಮನೋಭಾವದಿಂದ ಯಶಸ್ಸು ಸಾಧಿಸಲು ಸಾಧ್ಯ, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕೆಂದರೆ ಉತ್ತಮ ಸಂಸ್ಕಾರ ಅತ್ಯಗತ್ಯ, ಸಂಸ್ಕಾರವಿಲ್ಲದೆ ಕೇವಲ ಹಣ ಸಂಪಾದನೆಗೆ ಮಾತ್ರ ಬೆಲೆ ಕೊಟ್ಟರೆ ಅಂತಹ ಮಕ್ಕಳು ದುಷ್ಕೃತ್ಯ ಎಸಗುವ ಉಗ್ರವಾದಿಯಾಗುತ್ತಾರೆ ಎಂದು ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯ ಬಗ್ಗೆ ವಿವರ ನೀಡಿ ಬೇಸರ ವ್ಯಕ್ತಪಡಿಸಿದರು.

ನಮ್ಮ ಗುರಿ ಉನ್ನತವಾಗಿರಲಿ: ಚಿಕ್ಕಮಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಟಿ.ತ್ಯಾಗರಾಜ್‌ ಮಾತನಾಡಿ, ನಮ್ಮ ಗುರಿ ಉನ್ನತವಾಗಿರಬೇಕು. ಹಣ ಸಂಪಾದನೆ ಮಾಡುವುದೇ ಯಶಸ್ಸಲ್ಲ, ಸಾಮಾಜಿಕ ಚಿಂತನೆಯೊಂದಿಗೆ ಸರ್ವಕಾಲಕ್ಕೂ ನಮ್ಮನ್ನು ನೆನಪಿಸಿಕೊಳ್ಳುವಂತಹ ಸಾಧನೆ ಮಾಡುವುದೇ ನಿಜವಾದ ಯಶಸ್ಸು ಎಂದರು.

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬಹಳ ಮುಖ್ಯ, ಪ್ರತಿಭೆಗೆ ನಗರ ಹಾಗೂ ಹಳ್ಳಿ ಎಂಬ ವ್ಯತ್ಯಾಸವಿರುವುದಿಲ್ಲ ಅತಿ ಹೆಚ್ಚು ಪ್ರತಿಭಾನ್ವಿತರು ಉಗಮ ಸ್ಥಾನವೆಂದರೆ ಗ್ರಾಮಾಂತರ ಪ್ರದೇಶ ಎಂದು ತಿಳಿಸಿದರು.

ಮಕ್ಕಳಿಗೆ ಜಾಲತಾಣ ಮಾರಕ: ಚಿಕ್ಕಮಗಳೂರಿನ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ಮಾತನಾಡಿ, ಯುವ ಜನತೆ ಸಾಮಾಜಿಕ ಜಾಲತಾಣದ ದಾಸರಾಗಿದ್ದಾರೆ. ಇದರಿಂದ ಹೊರ ಬರದಿದ್ದರೆ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಶಿಕ್ಷಣಕ್ಕೆ ಪೂರಕವಾಗುವ ಸಾಮಾಜಿಕ ಜಾಲತಾಣವನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಯಶಸ್ಸಿನ ಪಯಣದಲ್ಲಿ ಸಾಗುತ್ತಿರುವವರಿಗೆ ಅನೇಕ ಟೀಕೆಗಳು ಎದುರಾಗುತ್ತವೆ ಇವಕ್ಕೆ ಕಿವಿ ಕೊಡಬಾರದು. ಮಾನವೀಯತೆಯನ್ನು ಪ್ರೀತಿ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಂತರಂಗದಲ್ಲಿನ ಕಲ್ಮಷ ದೂರವಾಗುತ್ತದೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಅನ್ವೇಷಣೆಗೆ ಸಹಾಯವಾಗಲಿದೆ ಎಂದು ನುಡಿದರು.

ತಂತ್ರಜ್ಞಾನ ಸದ್ಬಳಕೆಯಾಗಲಿ: ಮಾನವೀಯತೆ, ಶಾಂತಿ, ತ್ಯಾಗ ಹಾಗೂ ಆಂತರಿಕ ಶೋಧನೆ ಮಾಡಲು ಅನ್ವೇಷಣೆ ಬಹಳ ಪ್ರಮುಖವಾಗಿದೆ, ಇಂದು ತಾಂತ್ರಿಕತೆ ಬಹಳ ವೇಗವಾಗಿ ಬೆಳೆಯುತ್ತಿದ್ದು, ಪ್ರತಿಯೊಂದಕ್ಕೂ ತಾಂತ್ರಜ್ಞಾನದ ಹಿಂದೆ ಹೋಗುತ್ತಿದ್ದೇವೆ. ತಂತ್ರಜ್ಞಾನವನ್ನು ಅವಶ್ಯಕವಾಗಿ ಬಳಸದೆ ಅಗತ್ಯಕ್ಕೆ ತಕ್ಕಷ್ಟು ಬಳಸಬೇಕು. ತಂತ್ರಜ್ಞಾನದ ಮೇಲೆ ಇದೇ ರೀತಿ ಅವಲಂಬನೆ ಮುಂದುವರಿದರೆ ತುಂಬಾ ಅಪಾಯ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಗೊಮ್ಮಟೇಶ ಎಂ. ರಾವನ್ನವರ್‌ ಮಾತನಾಡಿದರು, ಅನ್ವೇಷಣೆ-19 ಕಾರ್ಯಕ್ರಮದ ಸಂಚಾಲಕಿ ಕೆ.ಬಿ.ಮನು, ಸಹ ಸಂಚಾಲಕ ಪಿ.ಕಿರಣ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎಂ.ಆರ್‌ರಶ್ಮಿ, ಕಾರ್ಯದರ್ಶಿ ಮೋಹಿತ್‌ಕುಮಾರ್‌, ಖಜಾಂಚಿ ಮೇಘನಾ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next