Advertisement
ಜುಲೈ 2ರಿಂದ ಮತ್ತಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡುವ ಇಂಗಿತ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಬಿಜೆಪಿಯ ಕೇಂದ್ರ ನಾಯಕರು ಕೂಡ ಆಪರೇಷನ್ ಕಮಲಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮೈತಿಯಿಂದ “ರಿವರ್ಸ್ ಆಪರೇಷನ್’ ನಡೆದಿದೆ ಎಂಬ ಸವಾಲನ್ನು ಹಾಕಿದ್ದರು.
Related Articles
Advertisement
ಜುಲೈ 9ರಂದು 8 ಮಂದಿ ಅತೃಪ್ತರ ರಾಜೀನಾಮೆ ಕ್ರಮಬದ್ಧವಿಲ್ಲವೆಂದು ತಿರಸ್ಕರಿಸಲಾಗಿತ್ತು. ನಂತರ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಆದೇಶದಂತೆ ಮುಂಬೈನಿಂದ ಬೆಂಗಳೂರಿಗೆ ಬಂದು ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿ ವಾಪಸ್ಸಾದರು. ಮುಂಬೈನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರ ಜತೆಗೆ ಬಿಜೆಪಿ ಮುಖಂಡರಾದ ಆರ್.ಅಶೋಕ್, ಅಶ್ವತ್ಥ್ ನಾರಾಯಣ ಮೊದಲಾದವರು ಕಾಣಿಸಿಕೊಂಡರು.
ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಳಗ್ಗೆ ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದ ಹೊಸಕೋಟೆ ಶಾಸಕ ಹಾಗೂ ಸಚಿವ ಎಂ.ಟಿ.ಬಿ.ನಾಗರಾಜ್ ಕೂಡ ಜುಲೈ 14ರಂದು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಎಂ.ಟಿ.ಬಿ.ನಾಗರಾಜ್ ಅವರು ಮುಂಬೈಗೆ ಹೋಗಲು ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರೇ ವಿಮಾನದ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದವರೆಗೂ ಅವರೊಂದಿಗೆ ಹೋಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತು. ಕೆಲವೇ ಗಂಟೆಯಲ್ಲಿ ಎಂ.ಟಿ.ಬಿ.ನಾಗರಾಜ್ ಮುಂಬೈನಲ್ಲಿದ್ದ ಅತೃಪ್ತ ಶಾಸಕರ ದಂಡನ್ನು ಸೇರಿಕೊಂಡರು.
ಈ ಮಧ್ಯೆ ಜುಲೈ 12ರಂದು ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ರಾಜ್ಯ ಸರ್ಕಾರಕ್ಕೆ ಬಹುಮತ ಇಲ್ಲ, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕರು ಸದನದ ಒಳಗೆ ಆಗ್ರಹ ಆರಂಭಿಸಿದರು. ಅದೇ ದಿನ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡನೆ ಮಾಡಿದರು. ಹಾಗೆಯೇ ಬಿಜೆಪಿ ಶಾಸಕರು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಸೇರಿಕೊಂಡರು. ಬಿಜೆಪಿಯ ಬಹುತೇಕ ಶಾಸಕರು ಯಡಿಯೂರಪ್ಪ ಅವರ ಮಾರ್ಗದರ್ಶನದಂತೆ ರೆಸಾರ್ಟ್‌ನಲ್ಲೇ ಇದ್ದರು. ಇನ್ನು ಕೆಲವರು ಅನುಮತಿ ಪಡೆದು ಸ್ವಕ್ಷೇತ್ರಕ್ಕೆ ತೆರಳಿದ್ದರು. ಆದರೆ, ಕಲಾಪಕ್ಕೆ ಎಲ್ಲರೂ ಹಾಜರಾಗುತ್ತಿದ್ದರು.
ಜುಲೈ 12ರಿಂದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಸಹಿತವಾಗಿ ಬಿಜೆಪಿಯ ಎಲ್ಲ ಶಾಸಕರು ವಿಧಾನಸಭೆಯಲ್ಲಿ ಯಾವುದೇ ರೀತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ, ಆಡಳಿತ ಪಕ್ಷದ ನಾಯಕರ ಎಲ್ಲ ರೀತಿಯ ಟೀಕೆಗಳನ್ನು ಸಹಿಸಿಕೊಂಡರು. ಚರ್ಚೆ ಎಷ್ಟೇ ತಾರಕಕ್ಕೆ ಏರಿದ್ದರೂ, ಬಿಜೆಪಿಯ ಶಾಸಕರು ತಾಳ್ಮೆ ಕಳೆದುಕೊಳ್ಳದೆ ವಿಶ್ವಾಸ ಮತ ಸಾಬೀತಿಗೆ ಆಗಾಗ ಒತ್ತಾಯ ಮಾಡುತ್ತಿದ್ದರು. ಜುಲೈ 22ರ ರಾತ್ರಿಯ ವರೆಗೂ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಎಲ್ಲಿಯೂ ಪ್ರತಿಭಟಿಸುವ ಅಥವಾ ಸಭಾತ್ಯಾಗ ಮಾಡುವ ಯಾವುದೇ ನಿರ್ಧಾರ ತೆಗೆದುಕೊಳ್ಳದೆ, ಸಹನೆಯಿಂದ ಕಲಾಪದಲ್ಲಿ ಪೂರ್ಣ ಪ್ರಮಾಣದಲ್ಲಿ ಕುಳಿತಿದ್ದರು. ಈ ಮಧ್ಯೆ ವಿಧಾನ ಪರಿಷತ್ತಿನಲ್ಲಿ ಜುಲೈ 12ರಿಂದಲೇ ಪ್ರತಿಪಕ್ಷದ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿ, ಒಂದು ದಿನವೂ ಸುಸೂತ್ರವಾಗಿ ಕಲಾಪ ನಡೆಸಲು ಬಿಟ್ಟಿಲ್ಲ.
ಪ್ರಮುಖ ಘಟನಾವಳಿ!-ಜುಲೈ 1ರಂದು ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೋಳಿ ರಾಜೀನಾಮೆ. -ಜುಲೈ 2ರಂದು “ರಿವರ್ಸ್ ಆಪರೇಷನ್’ಗೆ ಬಿಎಸ್‌ವೈ ಸವಾಲು. -ಜುಲೈ 6ರಂದು 9 ಮಂದಿ ಅತೃಪ್ತ ಶಾಸಕರ ರಾಜೀನಾಮೆ. -ಜುಲೈ6ರಂದೇ ಮುಂಬೈಗೆ ಹಾರಿದ ಅತೃಪ್ತ ಶಾಸಕರು. -ರಾಜೀನಾಮೆ ಅಂಗೀಕಾರಕ್ಕೆ ಕೋರಿ ಸುಪ್ರೀಂಗೆ ಅರ್ಜಿ. -ಕ್ರಮಬದ್ಧವಾಗಿ ರಾಜೀನಾಮೆ ನೀಡಲು ಜುಲೈ 11ರಂದು ಓಡೋಡಿ ಬಂದ ಅತೃಪ್ತರು. -ಜುಲೈ 12ರಿಂದ ಅಧಿವೇಶನ ಆರಂಭ. -ಬಿಜೆಪಿಯ ಎಲ್ಲ ಶಾಸಕರು ತಾಳ್ಮೆಯಿಂದ ಸದನದಲ್ಲಿ ಭಾಗಿಯಾಗಿದ್ದರು. * ರಾಜು ಖಾರ್ವಿ ಕೊಡೇರಿ