ಬೆಂಗಳೂರು: ರಾಜಕಾರಣಿಗಳು ಸ್ವಹಿತಕ್ಕಾಗಿ ಜಾತಿ, ಧರ್ಮಗಳ ವಿಚಾರ ಬಳಸಿಕೊಂಡು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಟಿಬೆಟ್ ಧರ್ಮಗುರು ದಲೈಲಾಮ ಅಭಿಪ್ರಾಯಪಟ್ಟರು. ವಿದ್ಯಾಲೋಕೆ ಸಂಸ್ಥೆಯಿಂದ ಹೋಟೆಲೊಂದರಲ್ಲಿ ಶನಿವಾರ ಹಮ್ಮಿಕೊಂಡಿದ್ದ “21ನೇ ಶತಮಾನದಲ್ಲಿ ಧೈರ್ಯ ಹಾಗೂ ಸಹಾನುಭೂತಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಸೇರಿದಂತೆ ಅನೇಕ ಧರ್ಮಗಳ, ಅವುಗಳ ಉಪಜಾತಿಗಳ ಜನ ವಾಸವಿದ್ದಾರೆ. ಅವರ ನಡುವೆ ಯಾವುದೇ ಭೇದವಿಲ್ಲ. ಆದರೆ, ಕೆಲ ರಾಜಕಾರಣಿಗಳು ಜಾತಿ, ಧರ್ಮದ ಹೆಸರಿನಲ್ಲಿ ಜನರ ತಲೆಕೆಡೆಸಿ ಅಸಹಿಷ್ಣುತೆ ಹಾಗೂ ಸಂಘರ್ಷಗಳಿಗೆ ಕಾರಣವಾಗುತ್ತಿದ್ದಾರೆ ಎಂದು ಹೇಳಿದರು.
ಆರಂಭದ ಶಿಕ್ಷಣ ಪದ್ಧತಿಯಲ್ಲಿ ಯೋಗ, ಧ್ಯಾನ, ಆಧ್ಯಾತ್ಮದಂತಹ ಅನೇಕ ಅಂಶಗಳಿದ್ದು, ಅವುಗಳು ಉತ್ತಮ ಜೀವನಕ್ಕೆ ದಾರಿ ತೋರುತ್ತಿದ್ದವು. ಪ್ರಸ್ತುತ ಶಿಕ್ಷಣದಲ್ಲಿ ಪುರಾತನ ಶಿಕ್ಷಣ ಪದ್ಧತಿ ಆಳವಡಿಸುವ ಕುರಿತು ಶಿಕ್ಷಣ ತಜ್ಞರು ಹಾಗೂ ಪ್ರಮುಖ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಧೈರ್ಯ ಮತ್ತು ಸಹಾನೂಭೂತಿ ಜೀವನದ ಅತ್ಯಂತ ಪ್ರಮುಖ ಅಂಶಗಳು. ಅವುಗಳನ್ನು ನಮ್ಮಿಂದ ನಾವೇ ಕಲಿಯಬೇಕು. ಒಂದು ಸಮಸ್ಯೆ ಬಗೆಹರಿಸಲು ತಾಳ್ಮೆ, ಶಾಂತಚಿತ್ತ ಮನಸ್ಸು ಅಗತ್ಯ. ಕೋಪದಲ್ಲಿ ಸರಿ, ತಪ್ಪುಗಳನ್ನು ನಿರ್ಧರಿಸಲು ಆಗುವುದಿಲ್ಲ. ಇನ್ನು ನಮ್ಮ ತಲೆಯಲ್ಲಿನ ನಕಾರಾತ್ಮಕ ಚಿಂತನೆಗಳನ್ನು ಹೊರ ಹಾಕುವುದೇ ಮೋಕ್ಷಕ್ಕೆ ನಿಜವಾದ ದಾರಿ ಎಂದು ಹೇಳಿದರು.
ಮನುಷ್ಯ ಯಂತ್ರಗಳನ್ನು ಹೆಚ್ಚಾಗಿ ಅವಲಂಬಿಸತ್ತಾ ಇಂದು ಯಾಂತ್ರಿಕ ಸಮಾಜ ನಿರ್ಮಾಣವಾಗಿದೆ. ಯಂತ್ರಗಳು ಮಾನವ ನಿರ್ಮಿತ ಎಂಬುದನ್ನು ಮರೆತು ಅದಕ್ಕೆ ದಾಸರಾಗುತ್ತಿದ್ದೇವೆ. ಇದರಿಂದ ಮೊದಲು ಹೊರಬಂದು ತೀರಾ ಅಗತ್ಯವಿದ್ದಾಗ ಮಾತ್ರ ಯಂತ್ರಗಳನ್ನು ಅವಲಂಭಿಸಬೇಕು ಎಂದು ಸಲಹೆ ನೀಡಿದರು.