Advertisement
ಸಮಯ ಕಳೆಯುವುದೇ ಈಗಿನವರಿಗೆ ಬಲು ದೊಡ್ಡ ಸಮಸ್ಯೆ. ಕೋಲು-ಬಾಲು ಎನ್ನುವ ಕ್ರಿಕೆಟ್ ಹೆಚ್ಚಿನವರಿಗೆ ಗೊತ್ತಿರುವ ಆಟ. ಅದರಲ್ಲೂ ಆಡುವುದಕ್ಕಿಂತ ನೋಡುವುದೇ ಹೆಚ್ಚು. ಕೈಯಲ್ಲೊಂದು ಫೋನು – ಕಂಪ್ಯೂಟರ್ಗಳೇ ಆಟದ ಅಂಗಳ. ಕೆಲವರಿಗೆ ರಜೆಯಲ್ಲೂ ಟ್ಯೂಶನ್ ಎಂಬ ತಲೆಬಿಸಿ. ನಾವಾಗ ಪರೀಕ್ಷೆಗಳು ಮುಗಿದು, ರಜಾ ಪ್ರಾರಂಭವಾಗಿ ಅಜ್ಜಿಯ ಮನೆಗೆ ಎಂದು ಓಡುವುದೋ ಎಂದು ಲೆಕ್ಕಾಚಾರ ಹಾಕುತ್ತಿದ್ದೆವು.
Related Articles
Advertisement
ಮತ್ತೆ ಅಂಗಳಕ್ಕೆ ಓಡೋಣವೆನ್ನುವಷ್ಟರಲ್ಲಿ ಅಜ್ಜಿ, “ಈ ಬಿಸಿಲಿನಲ್ಲಿ ಹೊರಗೆ ಹೋಗಬೇಡಿ, ಒಳಗೆ ಕುಳಿತು ಆಡಿ’, ಎನ್ನುತ್ತಿದ್ದಂತೆ, ಯಾರ ಮನೆಯಲ್ಲಿ ಮಧ್ಯಾಹ್ನ ಹಿರಿಯರು ಮಲಗುವುದಿಲ್ಲವೋ ಆ ಮನೆಯಲ್ಲಿ ಮಕ್ಕಳ ಜಾತ್ರೆ. ಮನೆಯ ಒಳಗೆ ಕುಳಿತು ಆಡುವ ಆಟಗಳೇ ಬೇರೆ ! ಚನ್ನೆಮಣೆ, ಚೀಟಿಯಲ್ಲಿ ಕಳ್ಳಾ-ಪೊಲೀಸ್, ಗಜ್ಜುಗ- ಹುಣಸೆ ಬೀಜ ಬಳಸಿ ಆಟ, ಟಿಕ್ಟಾಕ್ ಟೊ, ಹಾಡಿನ-ಹೆಸರಿನ ಅಂತ್ಯಾಕ್ಷರಿ, ಹಾವು-ಏಣಿ, ಕೇರಮ್, ಚೆಸ್, ಇಸ್ಪೀಟ್, ಮೈಂಡ್ ಗೈಮ್ – ಒಂದೇ ಎರಡೇ?!
ಬಿಸಿಲು ತಣಿದಾಗ ಹೊಟ್ಟೆಗೆ ಚಹಾ ಚಕ್ಕುಲಿ ತುಂಬಿಸಿ ಪುನ: ಆಟದ ಮೈದಾನದಲ್ಲಿ ಹಾಜರ್. ಸಾಯಂಕಾಲದ ಆಟಗಳೇ ಬೇರೆ. ಬ್ಯಾಡ್ಮಿಂಟನ್, ಕೋಕೋ, ಕಬಡ್ಡಿ, ಟೆನಿಕಾಯ್, ಥ್ರೋ ಬಾಲ್, ವಾಲಿ ಬಾಲ್ ಇತ್ಯಾದಿ. ಕ್ರಿಕೆಟ್ ಕೂಡ ಆಡುತ್ತಿದ್ದೆವಾದರೂ ಈಗಿನಷ್ಟು ಕ್ರೇಝ್ ಇರಲಿಲ್ಲ. ಇವೂ ಆಡಿ ಬೇಸರವಾದರೆ ಕುಂಟಕಾಲಿನಲ್ಲಿ ಮುಟ್ಟಾಟ, ಮಂಕಿ ಡೊಂಕಿ, ಕಲರ್ ಕಲರ್ ವಾಟ್ ಕಲರ್, ಕಪ್ಪೆ ಆಟ , 3 ಕಾಲು ಓಟ, ಗೋಣಿ ಚೀಲ ಓಟ, ಬಾಲ್ ಅಡಗಿಸಿಟ್ಟು ಹುಡುಕುವುದು, ಸ್ವಲ್ಪ ಚಿಕ್ಕ ಮಕ್ಕಳಾದರೆ ಕೆರೆ-ದಂಡೆ, ಹೆಂಗೆಳೆಯರು ಮಾತ್ರವಾದರೆ ರತ್ತೋರತ್ತೋ ರಾಯನ ಮಗಳೆ, ಚಿಕ್ಕ-ಚಿಕ್ಕ ಪಾತ್ರೆ ಜೋಡಿಸಿ ಅಡುಗೆ ಮನೆ ಆಟ, ಮಕ್ಕಳ ಲೋಕವೇ ಬೇರೆಯಂತಿತ್ತು ಆ ದಿನಗಳು !!
ಸೂರ್ಯಾಸ್ತವಾಗುತ್ತಿದ್ದಂತೆ ಅಜ್ಜಿಯ ಬುಲಾವು. “ಈಗ ಬಂದೆ ಅಜ್ಜಿ 2 ನಿಮಿಷ’ ಎಂದು ಅರ್ಧ ಗಂಟೆ ಬಿಟ್ಟು ಮನೆಯತ್ತ ಓಟ. ಆಮೇಲೆ ಅಜ್ಜಿಯೊಟ್ಟಿಗೆ ದೇವಸ್ಥಾನಕ್ಕೋ, ಪೇಟೆಗೋ, ಐಸ್ ಕ್ರೀಮ್ ಮೆಲ್ಲಲೋ, ಕಬ್ಬಿನ ಹಾಲು ಕುಡಿಯಲೋ, ಗರದಿ ಗಮ್ಮತ್ತು ನೋಡಲೋ ಹೊರಟರೆ, ದೇಹದ ಆಯಾಸವೆಲ್ಲ ತೊಲಗಿ ಮನಸ್ಸು ಉಲ್ಲಾಸವಾಗಿರುತ್ತಿತ್ತು. ಮನೆಗೆ ಮರಳುವಾಗ ಅಂಗಡಿಯಲ್ಲಿ ತೂಗಿಬಿಟ್ಟ ಬಣ್ಣದ ಕಾಗದ ತರುತ್ತಿದ್ದೆವು. ಅಜ್ಜಿ ಅಡಿಗೆ ಮಾಡಿ ಮುಗಿಸುವುದರೊಳಗೆ ನಮ್ಮ ಗಾಳಿಪಟ ರೆಡಿ.
ಬಣ್ಣದ ಕಾಗದ, ಕಸಬರಿಗೆಯ ಕಡ್ಡಿ, ದಾರ ಮತ್ತು ಮೈದಾ ಹಿಟ್ಟಿನ ಅಂಟು -ಇಷ್ಟೇ ಸಾಕು, ಅಂದದ ಗಾಳಿಪಟ ಹಾರಿಸಲು! ಆಗೆಲ್ಲ ಟಿವಿಯ ಹಾವಳಿ ಕಡಿಮೆ. ಊಟ ಮಾಡಿ ಅಜ್ಜಿ ಹೇಳುವ ಕಥೆ ಕೇಳಿ ಮರುದಿನ ಗಾಳಿಪಟ ಹಾರಿಸುವ ಕನಸು ಕಾಣುತ್ತ ನಿದ್ರೆಗೆ ಜಾರುತ್ತಿದ್ದೆವು.
ಗಾಳಿಪಟ ಹಾರಿಸುವಾಗ ಕೂಡ “ನನ್ನ ಪಟ ಮೇಲೆ, ನಿನ್ನ ಪಟ ಗೋತಾ ಹೊಡೆಯಿತು’, ಎಂದು ಅಣಕಿಸುವುದು, ಇನ್ನೊಬ್ಬರ ಪಟದ ದಾರ ತುಂಡರಿಸಲು ನೋಡುವುದು, ಸಿಟ್ಟು, ಅಳು, ಜಗಳ, ಬೀಳುವುದು, ಏಳುವುದು, ಕೋಪಿಸಿಕೊಂಡು ಆಟ ಬಿಟ್ಟು ಹೋಗಿ, ಸ್ವಲ್ಪ ಸಮಯಕ್ಕೆ ವಾಪಸ್ಸಾಗುವುದು ಇವೆಲ್ಲ ಇದ್ದೇ ಇರುತ್ತಿತ್ತು. “ಚಾಳಿ ಟೂ’ ಎಂದು ಮಾತು ಬಿಡುವುದೂ ಒಂದು ದಿನದ ಮಟ್ಟಿಗೆ ಸೀಮಿತವಾಗಿರುತ್ತಿತ್ತು.
ಆ ಕಾಲವೇ ಹಾಗಿತ್ತು. ನಮಗೆಲ್ಲ ಬೇಸಗೆಯ ರಜೆಯಾಗಲಿ, ದಸರೆಯ ರಜೆಯಾಗಲೀ ಸಾಲುತ್ತಲೇ ಇರಲಿಲ್ಲ. ಕುಣಿದು ಕುಪ್ಪಳಿಸಿ, ಆಡಿ-ಓಡಿ, ಅತ್ತು-ನಗಲು ದಿನದ ಗಂಟೆಗಳು ಕಡಿಮೆ ಎನ್ನಿಸುತಿತ್ತು. ಆ ದಿನಗಳನ್ನು ನೆನೆಪಿಸಿಕೊಳ್ಳಲು ಈಗ ಸಮಯ ಸಾಲದು.
*ಸಹನಾ ಹರೇಕೃಷ್ಣ, ಟೊರಂಟೋ