Advertisement
ನಾನು “ತುಳು ಜನಪದ ಸಾಹಿತ್ಯ’ ಎಂಬ ವಿಷಯವನ್ನು ಕುರಿತು ಪಿಎಚ್.ಡಿ. ಪದವಿಗಾಗಿ ಸಂಶೋಧನೆ ನಡೆಸಲು ಸೂಚಿಸಿದವರು ಮೈಸೂರು ವಿವಿ ಕನ್ನಡ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ ಡಾ. ಹಾ. ಮಾ. ನಾಯಕರು. ಈ ವಿಷಯಕ್ಕೆ ಅವರೇ ನನಗೆ ಮಾರ್ಗದರ್ಶಕರಾಗಬೇಕೆಂದು ಕೇಳಿಕೊಂಡಾಗ ಮೊದಲು ಅವರು ಒಪ್ಪಿಕೊಳ್ಳಲಿಲ್ಲ. “ನನಗೆ ತುಳು ಗೊತ್ತಿಲ್ಲ’ ಎಂದರು. ಆದರೆ, ಅವರು ಅಮೆರಿಕದ ಇಂಡಿಯಾನ ಮತ್ತು ಪೆನ್ಸಿಲ್ವೇನಿಯಾ ವಿವಿಗಳಲ್ಲಿ ಭಾಷಾವಿಜ್ಞಾನ ಮತ್ತು ಜಾನಪದ ವಿಜ್ಞಾನಗಳಲ್ಲಿ ತರಬೇತಿ ಪಡೆದವರು, ಜಾನಪದ ಅಧ್ಯಯನದ ಆಧುನಿಕ ತಿಳುವಳಿಕೆಯನ್ನು ಹೊಂದಿದ್ದವರು. ನನ್ನ ಒತ್ತಾಸೆಗೆ ಒಪ್ಪಿಕೊಂಡು ಹಾ. ಮಾ. ನಾ. ಪಿಎಚ್.ಡಿ. ಸಂಶೋಧನೆಗೆ ಮಾರ್ಗದರ್ಶಕರಾದರು. ಮೈಸೂರು ವಿವಿಯಲ್ಲಿ 1974ರಲ್ಲಿ ನೋಂದಣಿ ಮಾಡಿಕೊಂಡೆ. ನನ್ನದು ತುಳು ಜಾನಪದದ ಮೊತ್ತಮೊದಲನೆಯ ಪಿಎಚ್.ಡಿ. ಆದಕಾರಣ, ವಿಷಯದ ವ್ಯಾಪ್ತಿ ಹೆಚ್ಚಾಗಿದ್ದರೂ ಇರಲಿ ಎಂದರು ಹಾ. ಮಾ. ನಾ. ನಾನು ಓದಬೇಕಾದ ಅನೇಕ ಇಂಗ್ಲಿಷ್ ಪುಸ್ತಕಗಳ ವಿವರಗಳನ್ನು ಅವರೇ ಕೊಟ್ಟರು. ಅವರ ಸೂಚನೆಯಂತೆ ಅಸ್ಸಾಮಿನ ಗೌಹಾತಿ ವಿವಿಯಿಂದ ನಾನು ತರಿಸಿದ ಪುಸ್ತಕ Ballads and Tales of Assam: Praphulladatta Goswami. ( University of Gauhati,1970). ಪಿ.ಡಿ. ಗೋಸ್ವಾಮಿ ಅವರ ಈ ಡಾಕ್ಟರೇಟ್ ಪ್ರಬಂಧ ನನ್ನ ಅಧ್ಯಯನಕ್ಕೆ ಬಹಳ ಉಪಯುಕ್ತ ಆಯಿತು.
Related Articles
Advertisement
ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲದ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಭಾಗವಾಗಿ ಸ್ಥಾಪನೆ ಆದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್‌ಆರ್‌ಸಿ) ಸಂಸ್ಥೆಗಳು ಕು. ಶಿ. ಹರಿದಾಸ ಭಟ್ಟರ ನಿರ್ದೇಶಕತ್ವದಲ್ಲಿ ತುಳು ಮತ್ತು ಜಾನಪದಕ್ಕೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಡುವ ಕೆಲಸಗಳನ್ನು ಮಾಡಿದವು. ಈ ಸಂಸ್ಥೆಗಳ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಕಾರಣ ನನಗೆ ಜಾನಪದದಲ್ಲಿ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳು ಪ್ರಾಪ್ತವಾದುವು. ಫಿನ್ಲಂಡ್‌ನ ರಾಷ್ಟೀಯ ಮಹಾಕಾವ್ಯ ಕಲೆವಾಲ ಪ್ರಕಟಣೆಯ 150ನೆಯ ವರ್ಷದ ಉತ್ಸವವನ್ನು ಉಡುಪಿಯ ಆರ್‌ಆರ್‌ಸಿಯಲ್ಲಿ 1985 ಅಕ್ಟೊಬರ 12ರಂದು ನಡೆಸಿದಾಗ ಅದರಲ್ಲಿ ಫಿನ್ಲಂಡಿನ ತುರ್ಕು ವಿವಿಯ ಜಾನಪದ ಪ್ರಾಧ್ಯಾಪಕರಾದ ಲೌರಿ ಹಾಂಕೊ ಭಾಗವಹಿಸಿದ್ದು ಒಂದು ಐತಿಹಾಸಿಕ ಘಟನೆ. ಆಗ ನಡೆಸಿದ Folk Epics of Tulunad and Finland ಸೆಮಿನಾರ್‌ನಲ್ಲಿ ನಾನು Paaddanas as Folk Epics ಎನ್ನುವ ಪ್ರಬಂಧ ಮಂಡಿಸಿದೆ. ಹಾಂಕೊ ಅವರು ಪಾಡªನಗಳ ಬಗ್ಗೆ ನನ್ನ ಜೊತೆಗೆ ಸಮಾಲೋಚನೆ ನಡೆಸಿದರು. ಜಗತ್ತಿನ ಹಿರಿಯ ಜಾನಪದ ವಿದ್ವಾಂಸ ಲೌರಿ ಹಾಂಕೊ ಅವರ ಪರಿಚಯವಾದದ್ದು ನನ್ನ ಜಾನಪದ ಬದುಕಿನ ಅಪೂರ್ವ ಸನ್ನಿವೇಶ.
ಪ್ರೊ. ಲೌರಿ ಹಾಂಕೊ ಅವರು ತುಳು ಪಾಡªನಗಳ ಬಗ್ಗೆ ತಾಳಿದ ಆಸಕ್ತಿಯ ಪರಿಣಾಮವಾಗಿ ಫಿನ್ನಿಷ್-ಇಂಡಿಯನ್ ಫೋಕ್‌ಲೋರ್ ಟ್ರೇನಿಂಗ್ ಕೋರ್ಸ್ 1989 ಫೆಬ್ರವರಿ 12ರಿಂದ 24ರವರೆಗೆ ಉಡುಪಿ-ಧರ್ಮಸ್ಥಳಗಳಲ್ಲಿ ನಡೆಯಿತು. ಹಾಂಕೊ ಅವರು ಫಿನ್ಲಂಡ್‌ನಿಂದ ಪ್ರೊ. ಅಸ್ಕೊ ಪರ್ಪೋಲ, ಲೌರಿ ಹಾರ್ವೆಲತ್ತಿ, ಮರ್ತಿ ಯುನನಹೋ, ಮರಿಯ ರಾಯಮಕಿ, ವಿಡಿಯೊ ಕೆಮರಾಮೆನ್ ಸಕಾರಿ ರಿಮೆನೆನ್ ಮತ್ತು ನಾರ್ವೆಯಿಂದ ಪ್ರೊ. ಬೆಂತೆ ಅಲ್ವೆರ್, ಆರಿಲ್ ಸ್ಟ್ರೋಮ್‌ವಾಗ್ ಅವರನ್ನು ಕರೆದುಕೊಂಡು ಬಂದರು. ಮಂಗಳೂರು ವಿವಿಯಿಂದ ನಾನು ಮತ್ತು ಚಿನ್ನಪ್ಪಗೌಡ, ಉಡುಪಿಯಿಂದ ಪ್ರೊ. ಕುಶಿ ಹರಿದಾಸ ಭಟ್, ಯು. ಪಿ. ಉಪಾಧ್ಯಾಯ, ಸುಶೀಲಾ ಉಪಾಧ್ಯಾಯ, ಎಸ್. ಎ. ಕೃಷ್ಣಯ್ಯ, ರಾಮದಾಸ್ ಮತ್ತು ಹರ್ಷವರ್ಧನ ಭಟ್ ಮತ್ತು ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ಇದ್ದೆವು. ಈ ಕೋರ್ಸ್‌ನಲ್ಲಿ ತರಬೇತಿ ಪಡೆಯುವವರು 12 ಮಂದಿ ಜಾನಪದ ಸಂಶೋಧಕರು ಇದ್ದರು.
ಕ್ಷೇತ್ರಕಾರ್ಯದ ಮೂರು ತಂಡಗಳು: ತುರ್ಕು ತಂಡ- ಲೌರಿ ಹಾಂಕೊ ಮತ್ತು ತುರ್ಕು ವಿವಿ ತಜ್ಞರು. ನಮ್ಮ ಕಡೆಯಿಂದ ಅಮೃತ ಸೋಮೇಶ್ವರ, ಚಿನ್ನಪ್ಪ ಗೌಡ, ಎಸ್. ಎ. ಕೃಷ್ಣಯ್ಯ. ಹೆಲ್ಸಿಂಕಿ ತಂಡ: ಅಸ್ಕೊ ಪರ್ಪೋಲಾ ಮತ್ತು ಹೆಲ್ಸಿಂಕಿ ವಿವಿ ತಜ್ಞರು. ನಮ್ಮ ಕಡೆಯಿಂದ ಯುಪಿ ಉಪಾಧ್ಯಾಯ ಮತ್ತು ಸುಶೀಲಾ ಉಪಾಧ್ಯಾಯ. ಬೆರ್ಗೆನ್ ತಂಡ: ಬೆಂತೆ ಅಲ್ವೆರ್ ಮತ್ತು ಆರಿಲ್ ಸ್ಟ್ರೋಮ್‌ವಾಗ್. ನಮ್ಮ ಕಡೆಯಿಂದ ನಾನು ಮತ್ತು ಲೀಲಾ ಭಟ್, ಕೆ. ರಾಮದಾಸ್, ನಮ್ಮ ವಿಡಿಯೋಗ್ರಾಫರ್. ಮೊದಲ ಎರಡು ದಿನ ಉಡುಪಿಯಲ್ಲಿ ಪ್ರಾಥಮಿಕ ಸಮಾಲೋಚನೆ, ಕ್ಷೇತ್ರಕಾರ್ಯದ ಯೋಜನೆ ಬಗ್ಗೆ ಮಾಹಿತಿ ಪಡೆದು ಫೆಬ್ರವರಿ 14ರಿಂದ 24ರವರೆಗೆ ಧರ್ಮಸ್ಥಳ ಪರಿಸರದಲ್ಲಿ ಮತ್ತು ಹೊರಗಡೆ ಕ್ಷೇತ್ರಕಾರ್ಯ ನಡೆಸಿದೆವು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಇಡೀ ಶಿಬಿರದ ಎಲ್ಲರ ವಸತಿ ಊಟದ ವ್ಯವಸ್ಥೆ ಮಾತ್ರವಲ್ಲದೆ, ಕ್ಷೇತ್ರಕಾರ್ಯಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಸಂಪರ್ಕವ್ಯಕ್ತಿಗಳನ್ನು ಒದಗಿಸಿದರು. ಅವರೇ ಆಸಕ್ತಿಯಿಂದ ಪ್ರತಿದಿನ ಎಲ್ಲರನ್ನು ಭೇಟಿಯಾಗಿ ಶಿಬಿರಾರ್ಥಿಗಳ ಅನುಭವಗಳನ್ನು ಕೇಳುತ್ತಿದ್ದರು.
ಬೆರ್ಗೆನ್ ತಂಡದಲ್ಲಿ ಬೆಂತೆ ಅಲ್ವೆರ್ ಮತ್ತು ನಾನು ಶಿಬಿರಾರ್ಥಿಗಳ ಜೊತೆಗೆ ನಾವೂ ಕ್ಷೇತ್ರಕಾರ್ಯ ಮಾಡುತ್ತ ಹೊಸಸಂಗತಿಗಳನ್ನು ಕಲಿತೆವು. ಕೆಮರಾ, ವಿಡಿಯೋ ಕೆಮರಾ, ಟೇಪ್ ರೆಕಾರ್ಡರ್, ಮಾಹಿತಿ ದಾಖಲಾತಿಯ ಕೋಲ್‌ಕಾರ್ಡ್- ಇವನ್ನು ಒಟ್ಟಿಗೆ ಬಳಸುವ ಬಹುಮಾಧ್ಯಮ ದಾಖಲೀಕರಣದ ವಿದ್ಯೆಯನ್ನು ನಾನು ಕಲಿತದ್ದು ಈ ಶಿಬಿರದಲ್ಲಿ. ನಮ್ಮ ಬೆರ್ಗೆನ್ ತಂಡ ಮಾಡಿದ ದಾಖಲಾತಿಗಳು: ಪುದುವೆಟ್ಟು ಮೇರರ ಪಿಲಿಪಂಜಿ ಕುಣಿತ, ಮುಚ್ಚಾರಿನಲ್ಲಿ ಚಾಪೆ ಹೆಣೆಯುವ ಮತ್ತು ಕಳ್ಳು ತೆಗೆಯುವ ಕಲೆಗಾರಿಕೆ, ಅಳದಂಗಡಿಯಲ್ಲಿ ಪಾಡªನಗಳ ಸಂಗ್ರಹ, ಬಾಂಜಾರಮಲೆಯಲ್ಲಿ ಮಲೆಕುಡಿಯರ ಕಸುಬುಗಳು, ಬೆಳಾಲಿನಲ್ಲಿ ಜಾತ್ರೆ, ಕೊಕ್ರಾಡಿಯಲ್ಲಿ ಕೃಷಿಮೇಳ. ಫೆಬ್ರವರಿ 20 ಮತ್ತು 21ರಂದು ಅನಂತಾಡಿ ಉಳ್ಳಾಲ್ತಿ ಮೆಚ್ಚಿಯನ್ನು ಪೂರ್ಣವಾಗಿ ನೋಡಿ ದಾಖಲಾತಿ ಮಾಡಿದೆವು. ಮಧ್ಯರಾತ್ರಿ ಕಳೆದು ನಾನು ಕಲಾವಿದರ ಸಂದರ್ಶನ ಮುಗಿಸಿದಾಗ, ಬೆಂತೆ ಅಲ್ವೆರ್, “ಪ್ರೊ. ರೈ, ಆರ್ ಯು ಟಯರ್ಡ್?’ ಎಂದು ತಾಯಿಯ ವಾತ್ಸಲ್ಯದ ಧ್ವನಿಯಲ್ಲಿ ನನ್ನಲ್ಲಿ ಕೇಳಿದ್ದು ಈಗಲೂ ನೆನಪಾಗುತ್ತದೆ. ಮುಂಜಾನೆ ವೇಳೆಗೆ ಉಳ್ಳಾಲ್ತಿ ದೈವದ ಕಲಾವಿದ ಬಾಬು ಪರವ ಆವೇಶ ಇಳಿದ ಬಳಿಕ ಸ್ಮತಿ ತಪ್ಪಿದಾಗ ಅವರ ತಾಯಿ ಅವರನ್ನು ಎತ್ತಿಕೊಂಡು ಶುಶ್ರೂಷೆ ಮಾಡಿದ ದೃಶ್ಯವನ್ನು ನೆನೆದುಕೊಂಡಾಗ ಆ ತಾಯಿಯೇ ಜೀವಂತ ಉಳ್ಳಾಲ್ತಿಯಾಗಿ ನನ್ನ ಕಣ್ಣ ಮುಂದೆ ಬರುತ್ತಾರೆ.
ಲೌರಿ ಹಾಂಕೊ ನೇತೃತ್ವದ ತುರ್ಕು ತಂಡವು ಮಾಚಾರು ಗೋಪಾಲ ನಾಯ್ಕರ ಸಿರಿ ದರ್ಶನವನ್ನು ರಾತ್ರಿ ಇಡೀ ದಾಖಲಾತಿ ಮಾಡಿಕೊಂಡಿತು. ಜನಪದ ಕಾವ್ಯಗಳ ವಿದ್ವಾಂಸ ಲೌರಿ ಹಾಂಕೊ ಅವರಿಗೆ ಗೋಪಾಲ ನಾಯ್ಕರ ಸಿರಿ ಸಂದಿಯ ಹಾಡುವಿಕೆ ಮತ್ತು ದರ್ಶನ ವಿಶೇಷ ಆಸಕ್ತಿಯನ್ನು ಉಂಟುಮಾಡಿತು. ಹಾಂಕೊ ಮತ್ತು ಗೋಪಾಲ ನಾಯ್ಕರ ಆಕಸ್ಮಿಕ ಭೇಟಿ ಸಿರಿ ಕಾವ್ಯದ ದಾಖಲೀಕರಣದ ಅಪೂರ್ವ ಯೋಜನೆಗೆ ನಾಂದಿ ಹಾಡಿತು.
ಲೌರಿ ಹಾಂಕೊ ಮತ್ತು ಅವರ ಪತ್ನಿ ಅನೆಲಿ ಹಾಂಕೊ 1990 ದಶಂಬರದಲ್ಲಿ ಮಂಗಳೂರಿಗೆ ಬಂದರು. ನಾನು ಮತ್ತು ಚಿನ್ನಪ್ಪ ಗೌಡ ಅವರ ಜೊತೆಗೆ ಸಭೆ ನಡೆಸಿದೆವು. ಗೋಪಾಲ ನಾಯ್ಕರ ಸಿರಿ ಸಂದಿಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡುವ ಯೋಜನೆಯ ಬಗ್ಗೆ ರೂಪುರೇಷೆ ಸಿದ್ಧವಾಯಿತು. ಉಜಿರೆಯಲ್ಲಿ ಚಿನ್ನಪ್ಪಗೌಡರ ಭಾವ ದೇವಪ್ಪ ಗೌಡ ಮಾಸ್ಟ್ರ ಮನೆಯ ಪಕ್ಕದ ತೋಟದಲ್ಲಿ ಗೋಪಾಲ ನಾಯ್ಕರು ಹಾಡುವ ಸಿರಿ ಸಂದಿಯನ್ನು ಆಡಿಯೋ ಮತ್ತು ವಿಡಿಯೋ ಮೂಲಕ ದಾಖಲಿಸುವುದು, ಹರ್ಷವರ್ಧನ್ ಭಟ್ ವಿಡಿಯೋ ಬಳಸುವುದು, ಅನೆಲಿ ಹಾಂಕೊ ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಮುದ್ರಣ, ಚಿನ್ನಪ್ಪ ಗೌಡ ಟಿಪ್ಪಣಿ ಮಾಡುವುದು. ಲೌರಿ ಹಾಂಕೊ ಮತ್ತು ನಾನು ಗೋಪಾಲ ನಾಯ್ಕರ ಜೊತೆಗೆ ಸಂವಾದ- ಇದು ಸ್ಥೂಲವಾದ ಚೌಕಟ್ಟು. ನಮ್ಮ ಯೋಜನೆಯಂತೆ ಉಜಿರೆಯಲ್ಲಿ ದೇವಪ್ಪ ಗೌಡರ ತೋಟದಲ್ಲಿ ದಾಖಲಾತಿ ಆರಂಭವಾದದ್ದು 1990 ದಶಂಬರ 21ರಂದು ಬೆಳಗ್ಗೆ 7.39ಕ್ಕೆ. ಮುಕ್ತಾಯ ಆದದ್ದು ದಶಂಬರ 28 ಸಂಜೆ 5.09ಕ್ಕೆ. ಆರು ದಿನಗಳ ಹಾಡುವಿಕೆಯ ಬಹುಮಾಧ್ಯಮ ದಾಖಲಾತಿ ನಡೆಯಿತು. ಹಾಡುವಿಕೆಯ ಉಸಿರ್ದಾಣದ ಆಧಾರದಲ್ಲಿ ಇಡೀ ಸಿರಿ ಕಾವ್ಯದ ಒಟ್ಟು ಸಾಲುಗಳ ಸಂಖ್ಯೆ: 15,682. ಇದು ಸಿರಿ ಮಹಾಕಾವ್ಯದ ಮೊದಲ ಹಂತ. ಗೋಪಾಲ ನಾಯ್ಕರ ಜೊತೆಗೆ ಸಂವಾದ, ಆರಾಧನೆ ಆಚರಣೆಗಳ ದಾಖಲೀಕರಣ, ಹಾಡಿದ ಪಠ್ಯದ ರೋಮನ್ ಲಿಪಿಯಲ್ಲಿನ ಲಿಪ್ಯಂತರ, ಮತ್ತೆ ಅವುಗಳ ಮೂಲ ತುಳು ಸಾಲುಗಳ ಇಂಗ್ಲಿಷ್ ಅನುವಾದ. ಬಳಿಕ ಪರಿಷ್ಕರಣ, ಕೊನೆಗೆ ಮೂರು ಸಂಪುಟಗಳಲ್ಲಿ ಪ್ರಕಟಣೆ( FF Communications, Helsinki, 1998). 1999ರ ಮಾರ್ಚ್ ನಲ್ಲಿ ಉಡುಪಿಯಲ್ಲಿ ಸಿರಿ ಸಂಪುಟಗಳ ಬಿಡುಗಡೆಯ ಐತಿಹಾಸಿಕ ಸಮಾರಂಭ. ಸಿರಿ ಕಾವ್ಯದ ಪಠಿÂàಕರಣದ ಮಹಾಯಾನವೇ ಜಾನಪದ ಪ್ರಕ್ರಿಯೆಗೆ ಬೃಹತ್ ಅಣಿಯನ್ನು ಕಟ್ಟಿದ ಜಾಗತಿಕ ವಿದ್ಯಮಾನ.
ಫೋಟೋ : ಹರ್ಷವರ್ಧನ ಭಟ್ – ಬಿ. ಎ. ವಿವೇಕ ರೈ