ಬಹಳ ಹಿಂದೆ ಒಂದು ಕಾಡಿನಲ್ಲಿ ಆನೆ, ಕಾಡಿನ ರಾಜನಾಗಿತ್ತು. ಅದು ಪ್ರಜೆಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಒಂದು ದಿನ ಆನೆಗೆ ಕೆರೆ ನದಿ ಹಳ್ಳಗಳಿಗೂ ಒಬ್ಬ ರಾಜನನ್ನು ನೇಮಿಸಬೇಕೆಂಬ ಯೋಚನೆ ಬಂತು. ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಕೊಡಲು ಯಾರಾದರೂ ಒಬ್ಬರು ಜವಾಬ್ದಾರಿಯುತ ವ್ಯಕ್ತಿ ಬೇಕು. ಮಳೆಯ ಮುನ್ಸೂಚನೆ ಸಿಕ್ಕರೆ ಕಾಡಿನ ಪ್ರಾಣಿಗಳು ಮುಂಚಿತವಾಗಿ ರಕ್ಷಣೆ ಪಡೆಯಲು ಸಹಾಯವಾಗುತ್ತದೆ ಎನ್ನುವುದು ಗಜರಾಜನ ಅಭಿಪ್ರಾಯವಾಗಿತ್ತು. ಅದು ತನ್ನ ಸೇವಕ ಹುಂಜವನ್ನು ಕರೆದು “ನದಿ, ಕೆರೆ, ಹಳ್ಳಗಳ ಉಸ್ತುವಾರಿ ನೋಡಿಕೊಳ್ಳುವ ಜಲರಾಜನಾಗಲು ಆರ್ಹತೆಯಿರುವವರು ನಾಳೆ ಬೆಳಗ್ಗೆ ಅರಮನೆಯ ಮುಂದಿನ ಅಂಗಳದ ಹತ್ತಿರ ಜಮಾಯಿಸಬೇಕೆಂದು ಡಂಗುರ ಹೊಡೆಸಿ’ ಎಂದು ಆಜ್ಞಾಪಿಸಿತು.
ಮಾರನೇ ದಿನ ಅರಮನೆಯ ಮುಂದೆ ಕಾಡಿನ ಎಲ್ಲಾ ಪ್ರಾಣಿಗಳು ಜಲರಾಜನಾಗಲು ನಾಮುಂದು ತಾಮುಂದು ಎಂದು ಜಮಾಯಿಸಿದ್ದವು. ಗಜರಾಜ ಮೊದಲು ಬೆಕ್ಕಿನ ಬಳಿ ಬಂದಿತು “ನಿನಗೆ ನೀರೆಂದರೆ ಭಯ. ಮಳೆ ಬಂದರೆ ಸಾಕು ಬೆಚ್ಚಗಿನ ಜಾಗವನ್ನು ಹುಡುಕಿಕೊಂಡು ಓಡುತ್ತೀಯಾ. ಹಾಗಾಗಿ ನಿನಗೆ ಜಲರಾಜನಾಗುವ ಅರ್ಹತೆ ಇಲ್ಲ!’ ಎಂದಿತು.
ನಂತರ ಮಂಗನ ಬಳಿ ಬಂದ ಆನೆ, “ನೀನು ಯಾವಾಗಲೂ ಆಟದಲ್ಲೇ ಮುಳುಗಿರುತ್ತೀಯಾ, ನಿನಗೆ ಮರೆವೂ ಸ್ವಲ್ಪ ಜಾಸ್ತಿ, ನಿನ್ನ ಆಟದಲ್ಲಿ ಮೈಮರೆತು ನಿನ್ನ ಕರ್ತವ್ಯವನ್ನು ಮರೆಯಬಹುದೆಂಬ ಭಯ ನನಗೆ. ಹಾಗಾಗಿ ನೀನು ಸಹ ಈ ಸ್ಥಾನಕ್ಕೆ ಹೊಂದುವುದಿಲ್ಲ.’ ಎಂದಿತು. ಈ ರೀತಿ ಅನೇಕ ಪ್ರಾಣಿಗಳನ್ನು ಹಿಂದಕ್ಕೆ ಕಳಿಸಿತು. ಕೊನೆಗೆ ಉಳಿದದ್ದು ಮಿಡತೆ ಮತ್ತು ಕಪ್ಪೆ ಮಾತ್ರ. ಅವೆರಡನ್ನೂ ನೋಡಿದ ಗಜರಾಜ “ನೀವಿಬ್ಬರೂ ಈ ಕೆಲಸವನ್ನು ಚೆನ್ನಾಗಿ ಮಾಡಬಲ್ಲಿರಿ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ನಿಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ತೋಚುತ್ತಿಲ್ಲ!’ ಎಂದಿತು. ಆಗ ಸೇವಕ ಹುಂಜ “ಇವರಿಬ್ಬರಿಗೂ ಓಟದ ಸ್ಪರ್ಧೆ ಏರ್ಪಡಿಸೋಣ’ ಎಂದು ಸಲಹೆ ನೀಡಿತು. ಗಜರಾಜ ಸಮ್ಮತಿಸಿದ.
ಓಟದ ಸ್ಪರ್ಧೆ ಪ್ರಾರಂಭವಾಯಿತು. ಮಿಡತೆ ಮತ್ತು ಕಪ್ಪೆ ಎರಡೂ ವೇಗದಿಂದ ಓಡತೊಡಗಿದವು. ದಾರಿ ಬದಿ ಒಂದು ಹೊಳೆ ಸಿಕ್ಕಿತು. ದೂರದಲ್ಲೆಲ್ಲೋ ಮಳೆಯಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿತ್ತು. ಕಪ್ಪೆ ಗಕ್ಕನೆ ನಿಂತು ಬಿಟ್ಟಿತು. ಹೊಳೆಯಲ್ಲಿ ಪ್ರವಾಹ ಬಂದರೆ ಕಾಡಿಗೆ ನೀರು ನುಗ್ಗುವುದೆಂದು ಗಾಬರಿಯಾಯಿತು. ಅದು ಕೂಡಲೆ ಓಟವನ್ನು ನಿಲ್ಲಿಸಿ ವಿಷಯ ಮುಟ್ಟಿಸಲು ಹಿಂದಕ್ಕೆ ಬಂದುಬಿಟ್ಟಿತು. ಆದರೆ ಮಿಡತೆ ಇದೇ ಸರಿಯಾದ ಅವಕಾಶವೆಂದು ಮುಂದೋಡಿ ಮೊದಲ ಸ್ಥಾನ ಬಂದಿತು. ಆದರೆ ಗಜರಾಜ “ಸ್ಪರ್ಧೆಯನ್ನು ಲೆಕ್ಕಿಸದೆ ಅಪಾಯದ ಮುನ್ಸೂಚನೆಯನ್ನು ತಿಳಿಸಲು ಬಂದ ಕಪ್ಪೆಯೇ ಕಾಡಿನ ಜಲರಾಜ’ ಎಂದು ಘೋಷಿಸಿತು. ಪ್ರಾಣಿಗಳೆಲ್ಲವೂ ಚಪ್ಪಾಳೆ ತಟ್ಟಿದವು.
– ಪುರುಷೋತ್ತಮ್