Advertisement

ಸೃಜನಾತ್ಮಕ ಸೃಷ್ಟಿಸುವ ಕಲೆ ತುಳು, ಕನ್ನಡ ಸಿನೆಮಾ ನಿರ್ದೇಶಕರಿಗಿದೆ 

06:14 AM Feb 17, 2019 | |

ಕನ್ನಡ ಚಲನಚಿತ್ರ ರಂಗದ ಬಹುಬೇಡಿಕೆಯ ನಟರ ಪೈಕಿ ಅನಂತನಾಗ್‌ ಕೂಡ ಒಬ್ಬರು. ಅನಂತ್‌ನಾಗ್‌ ಆವರು ಇದೇ ಮೊದಲ ಬಾರಿ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ ಕೆ. ಸೂರಜ್‌ ಶೆಟ್ಟಿ ನಿರ್ದೇಶನದ ‘ಇಂಗ್ಲಿಷ್‌’ ಎಂಬ ತುಳು ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನಂತ್‌ನಾಗ್‌ ಅವರು ಶನಿವಾರ ಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿಗೆ ಆಗಮಿಸಿದ್ದು, ‘ಇಂಗ್ಲಿಷ್‌’ ಚಲನಚಿತ್ರದಲ್ಲಿ ಅಭಿನಯಿಸಿದ ಅನುಭವ ಮತ್ತು ಕರಾವಳಿಯ ಒಡನಾಟದ ಬಗ್ಗೆ ‘ಉದಯವಾಣಿ ಸುದಿನ’ ದ ನವೀನ್‌ ಭಟ್‌ ಇಳಂತಿಲಜತೆ ತಮ್ಮ ಅನುಭವ
ಹಂಚಿಕೊಂಡಿದ್ದು ಹೀಗೆ ….

Advertisement

ತುಳು ಚಲನಚಿತ್ರದಲ್ಲಿ ಮೊದಲ ಬಾರಿ ಅಭಿನಯಿಸಿದ್ದೀರಿ. ನಿಮ್ಮ ಅನುಭವ ಹೇಗಿತ್ತು?
ತುಂಬಾ ಖುಷಿಯಾಗುತ್ತಿದೆ. ಅಭಿನಯಕ್ಕೂ ಮುನ್ನ ತುಳು ಭಾಷೆಯ ಸಂಭಾಷಣೆಯನ್ನು ಬಾಯಿ ಪಾಠ ಮಾಡಿದ್ದೇನೆ. ಅಷ್ಟೇ ಅಲ್ಲದೆ, ಶೇ. 70ರಷ್ಟು ತುಳು ಭಾಷೆ ನನಗೆ ಅರ್ಥವಾಗುತ್ತದೆ. 4ನೇ ತರಗತಿವರೆಗೆ ನಾನು ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದೆ. ಬೆಂಗಳೂರಿನಲ್ಲಿಯೂ ತುಳುನಾಡಿನ ಅನೇಕ ಮಂದಿ ನನ್ನ ಸ್ನೇಹಿತರಿದ್ದಾರೆ. ಈಗ ಅದೇ ಭಾಷೆಯಲ್ಲಿ ನಟಸಿದ್ದಕ್ಕೆ ಹೆಮ್ಮೆ ಇದೆ.

ಇಂಗ್ಲಿಷ್‌ ಚಲನಚಿತ್ರದಲ್ಲಿ ನಿಮ್ಮ ಪಾತ್ರ?
ಇಂಗ್ಲಿಷ್‌ ಚಲನಚಿತ್ರದಲ್ಲಿ ಇಂಗ್ಲಿಷ್‌ ಅಧ್ಯಾಪಕನ ಪಾತ್ರ ನಿರ್ವಹಿಸುತ್ತಿದ್ದೇನೆ. ವ್ಯವಹಾರಕ್ಕೆ ಇಂಗ್ಲಿಷ್‌ ಭಾಷೆ ಮುಖ್ಯ. ಹಾಗಂತ ಮಾತೃಭಾಷೆಯನ್ನು ಮರೆಯಬಾರದು. ವಿದ್ಯಾಭ್ಯಾಸದ ಸಮಯದಲ್ಲಿ ಶಾಲೆಗಳಲ್ಲಿ ಇಂಗ್ಲಿಷ್‌ ಭಾಷೆ ಕಲಿತರೂ, ಮನೆಯಲ್ಲಿ ಮಾತೃಭಾಷೆ ಮಾತನಾಡಬೇಕು. ಮಾತೃಭಾಷೆಗಿಂತ ದೊಡ್ಡ ಭಾಷೆ ಬೇರೆ ಇಲ್ಲ. ಈ ತಾತ್ಪರ್ಯ ಕೂಡ ಚಿತ್ರದಲ್ಲಿದೆ.

ಕರಾವಳಿಯ ಜತೆಗಿನ ನಿಮ್ಮ ಒಡನಾಟ?
ನಾನು ಕರಾವಳಿಯವನು. ನನ್ನ ತಾಯಿ ದಕ್ಷಿಣ ಕನ್ನಡ ಜಿಲ್ಲೆಯವರು. ತಂದೆ ಉತ್ತರ ಕನ್ನಡದವರು. ಉಡುಪಿ, ಹೊನ್ನಾವರ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾನು ಬೆಳೆದವನು. ಅನಂತರ ಮುಂಬಾಯಿಗೆ ಹೋದರೂ, ಅಲ್ಲಿಯೂ ಕರಾವಳಿಗರ ನಂಟಿತ್ತು.

ಮಂಗಳೂರಿನ ಬಗ್ಗೆ ಏನ್‌ ಹೇಳ್ತೀರಿ?
ಸಾರಿಗೆ, ಉದ್ಯಮ ಸಹಿತ ಎಲ್ಲ ಚಟುವಟಿಕೆಗಳಲ್ಲಿ ಭಾರತದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆ ನಂಬರ್‌-1 ಸ್ಥಾನದಲ್ಲಿದೆ. ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಕರಾವಳಿಗರು ಕೆಲಸಗಳಿಗೆ ಸರಕಾರವನ್ನು ಅವಲಂಬಿಸಿಲ್ಲ. ನಾನು ಕೂಡ ಇದೇ ಪ್ರದೇಶದವನು ಎಂಬ ಗರ್ವ ನನಗಿದೆ. ಮಂಗಳೂರಿನ ಜನ ನನಗಿಷ್ಟ. ನಾನು ಶುದ್ಧ ಸಸ್ಯಾಹಾರಿ ಇಲ್ಲಿನ ಎಲ್ಲಾ ಅಡುಗೆಗಳೆಂದರೆ ಪ್ರೀತಿ. ನಾವು ಕೊಂಕಣಿ ಭಾಷಿಗರು. ನಮ್ಮ ಮನೆಯಲ್ಲಿಯೂ ಪತ್ರೊಡೆ,
ನೀರು ದೋಸೆ ಮಾಡುತ್ತೇವೆ. ಮನೆಯಲ್ಲಿ ದಿನನಿತ್ಯ ಕರಾವಳಿ ಕೊಂಕಣಿ ಶೈಲಿಯ ಅಡುಗೆ ಮಾಡುತ್ತೇವೆ. ಮಂಗಳೂರಿಗೆ ಬಂದರೆ ಇಲ್ಲಿನ ಎಲ್ಲ ದೇವಸ್ಥಾನಗಳಿಗೂ ಭೇಟಿ ನೀಡುತ್ತೇನೆ.

Advertisement

ಈ ಹಿಂದೆ ತುಳು ಚಿತ್ರದಲ್ಲಿ ನಟಿಸಲು ಆಫರ್‌ ಬಂದಿತ್ತೇ?
ಈ ಹಿಂದೆಯೂ ತುಳು ಭಾಷೆಯ ಚಲನಚಿತ್ರದಲ್ಲಿ ನಟಿಸಲು ಅವಕಾಶ ಬಂದಿತ್ತು. ಆದರೆ, ಆ ರೋಲ್‌ನಲ್ಲಿ ತೂಕ ಇರಲಿಲ್ಲ. ಆದರೆ, ‘ಇಂಗ್ಲಿಷ್‌’ ಚಲನಚಿತ್ರದಲ್ಲಿ ನನ್ನ ಪಾತ್ರಕ್ಕೆ ಗಟ್ಟಿತನ ಇದೆ. ಅಲ್ಲದೆ ಒಟ್ಟಾರೆ ಚಿತ್ರವು ಉತ್ತಮ
ಕಥಾಹಂದರ ಹೊಂದಿದೆ.

ನಿಮ್ಮ ಮುಂದಿನ ಚಿತ್ರಗಳು ಯಾವುದು?
ಸದ್ಯ ನಾಲ್ಕೈದು ಚಲನಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹೇಮಂತ್‌ ರಾವ್‌ ನಿರ್ದೇಶನ ‘ಕವಲುದಾರಿ’ ಚಿತ್ರದಲ್ಲಿ ಜನರ ಅಪೇಕ್ಷೆಗೆ ಮೀರಿದ ಅಭಿನಯ ಮಾಡಿದ್ದೇನೆ.

ತುಳು ಮತ್ತು ಕನ್ನಡ ಚಲನಚಿತ್ರ ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವ?
ತುಳು ಮತ್ತು ಕನ್ನಡ ನಿರ್ದೇಶಕರಲ್ಲಿ ಒಂದೇ ರೀತಿಯ ಸಾಮ್ಯತೆ ಕಂಡಿದೆ. ಭಾಷೆಯ ಬದಲಾವಣೆ ಬಿಟ್ಟರೆ ಸೃಜಾನಾತ್ಮಕತೆ ಸೃಷ್ಟಿಸುವ ಕಲೆ ಎರಡೂ ಭಾಷೆಯ ನಿದೇಶಕರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next