Advertisement

Interview: ನಮಗೇಕೆ ಈ ಶಿಕ್ಷೆ? ದಕ್ಷಿಣದವರು ಎಂಬ ಕಾರಣಕ್ಕಾ?- ಕೃಷ್ಣ ಬೈರೇಗೌಡ

11:37 PM Feb 06, 2024 | Team Udayavani |

“ಬೇರೆ ರಾಜ್ಯಗಳಿಗೆ ಹಣ ಕೊಡ­ಬಾರದು ಎನ್ನು­ವುದು ನಮ್ಮ ವಾದವಲ್ಲ. ನಮ್ಮ ರಾಜ್ಯದ ಪಾಲನ್ನು ಕೊಡಲು ಯಾಕೆ ಇವರು ಹಿಂದೇಟು ಹಾಕುತ್ತಾರೆ? ಕರ್ನಾಟಕ ಎಂದರೆ ಇವರಿಗೇಕೆ ಇಷ್ಟೊಂದು ನಿರ್ಲಕ್ಷ್ಯ. ಈ ಧೋರಣೆ ವಿರುದ್ಧವೇ ನಮ್ಮ ಹೋರಾಟ’ ಎಂದು ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪರಿಷತ್ತಿನ ಸದಸ್ಯರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಮ್ಮ ಆಕ್ರೋಶ ಹೊರಹಾಕಿದರು.

Advertisement

ದಿಲ್ಲಿಯಲ್ಲಿ ರಾಜ್ಯ ಸರಕಾರ ಪ್ರತಿಭಟನೆಗೆ ಇಳಿದಿರುವ ಬೆನ್ನಲ್ಲೇ, ಉದಯವಾಣಿ ಜತೆ “ನೇರಾ-ನೇರ’ ಮಾತಿಗಿಳಿದ ಕೃಷ್ಣ ಬೈರೇಗೌಡ, ಅನುದಾನದ ಹಂಚಿಕೆಯಲ್ಲಿ ರಾಜ್ಯಕ್ಕಾದ ಅನ್ಯಾಯ, ಇದರಿಂದ ರಾಷ್ಟ್ರದ ಪ್ರಗತಿ ಮೇಲೆ ಬೀರಲಿರುವ ಪರಿಣಾಮ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಒಟ್ಟು ಹಣ ಮತ್ತಿತರ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಅದರ ಪೂರ್ಣಪಾಠ ಇಲ್ಲಿದೆ…

– ದೇಶದ ಖಜಾನೆಗೆ ಎರಡನೇ ಅತೀ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕ. ಹಾಗಿದ್ದರೆ, ಕೇಂದ್ರದ ಅನುದಾನ ಹಂಚಿಕೆಯಲ್ಲಿ ನಮಗೆ ಎಷ್ಟನೇ ಸ್ಥಾನ ಇದೆ?
ಒಂದು ಲೆಕ್ಕಾಚಾರದ ಪ್ರಕಾರ ನಾವು ನೂರು ರೂಪಾಯಿ ಕೊಟ್ಟರೆ, ಆ ಕಡೆಯಿಂದ (ಕೇಂದ್ರ­ದಿಂದ) ನಮಗೆ 13 ರೂ. ವಾಪಸ್‌ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಗುಜರಾತಿಗೆ 31 ರೂ., ರಾಜಸ್ಥಾನಕ್ಕೆ 154 ರೂ., ಮಧ್ಯಪ್ರದೇಶಕ್ಕೆ 279 ರೂ., ಉತ್ತರ ಪ್ರದೇಶಕ್ಕೆ 333 ರೂ. ಹೋಗುತ್ತಿದೆ. ಇನ್ನು ವಿಚಿತ್ರವೆಂದರೆ ದಕ್ಷಿಣ ಭಾರತದಲ್ಲೂ ನಮ್ಮ ಸ್ಥಿತಿ ಅತ್ಯಂತ ನಿಕೃಷ್ಟವಾಗಿದೆ. ಈ ಧೋರಣೆ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ.

-ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ ಎಂಬ ಮಾತುಗಳು ವಿಪಕ್ಷಗಳಿಂದ ಕೇಳಿಬರುತ್ತಿವೆ. ಈ ಬಗ್ಗೆ ಏನು ಹೇಳುತ್ತೀರಿ?
“ಇಲ್ಲ’ ಎಂದವರು ಯಾರು? ಅಷ್ಟೇ ಅಲ್ಲ, ಬೇರೆ ರಾಜ್ಯಗಳಿಗೆ ಅನುದಾನ ಹಂಚಿಕೆ ಬಗ್ಗೆ ನಮ್ಮ ತಕರಾರು ಕೂಡ ಇಲ್ಲ. ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ನೂರು ರೂಪಾಯಿ ಕೊಡುತ್ತಿದ್ದರೆ, ಇನ್ನೂ 50 ರೂಪಾಯಿ ಕೊಡಲಿ. ಆದರೆ ರಾಜ್ಯಕ್ಕೆ ಬರಬೇಕಾದ ಪಾಲು ಕೊಡುವ ಸೌಜನ್ಯವನ್ನಾದರೂ ಕೇಂದ್ರ ಸರಕಾರ ತೋರಬೇಕಲ್ಲವೇ?

– ಹಾಗಿದ್ದರೆ, ಕೇಂದ್ರಕ್ಕೆ ರಾಜ್ಯದಿಂದ ಪ್ರತೀವರ್ಷ ತೆರಿಗೆ ರೂಪದಲ್ಲಿ ಹೋಗುವ ಹಣ ಎಷ್ಟು? ನಮಗೆ ಬರಬೇಕಾದ್ದೆಷ್ಟು? ಬಂದಿದ್ದೆಷ್ಟು?
ವರ್ಷಕ್ಕೆ ನಾಲ್ಕು ಲಕ್ಷ ಕೋ.ರೂ. ತೆರಿಗೆ ಹೋಗುತ್ತದೆ ಎಂಬ ಅಂದಾಜಿದ್ದು, ವಾಪಸ್‌ ಬರುವುದು 50 ರಿಂದ 60 ಸಾವಿರ ಕೋಟಿ ರೂ. ಮಾತ್ರ. ಹಣಕಾಸು ಆಯೋಗದ ಶಿಫಾರಸು, ತೆರಿಗೆಯನ್ನು ಸೆಸ್‌ ಆಗಿ ಪರಿವರ್ತನೆ ಸೇರಿದಂತೆ ಮತ್ತಿತರ ಮೂಲಗಳಿಂದ ಇನ್ನೂ 50ರಿಂದ 60 ಸಾವಿರ ಕೋಟಿ ಪ್ರತೀ ವರ್ಷ ಬರಬೇಕು. ಬರೀ ತೆರಿಗೆ ವಿಚಾರ ಅಲ್ಲ; ನೀರಾವರಿ ಯೋಜನೆ­ಗಳಲ್ಲೂ ಸಾಕಷ್ಟು ಅನ್ಯಾಯ ಆಗಿದೆ. ಮಹಾದಾಯಿ ಯೋಜನೆಗೆ ಪರಿಸರ ಅನುಮತಿ ನೀಡದೆ, ಪ್ರಾಜೆಕ್ಟ್ ನಿಲ್ಲಿಸಿದೆ. ಇದರಿಂದ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲಿಟ್ಟು, ನಯ್ನಾಪೈಸೆ ಕೊಟ್ಟಿಲ್ಲ. ಮೇಕೆದಾಟು ವಿಚಾರದಲ್ಲಿ ಅನುಮತಿಗೆ ತೀರ್ಮಾನ ಕೈಗೊಳ್ಳುತ್ತಿಲ್ಲ.

Advertisement

-ಯಾಕೆ ಕರ್ನಾಟಕವೇ ಟಾರ್ಗೆಟ್‌ ಆಗುತ್ತಿದೆ?
ಅವರೇ ಉತ್ತರ ಕೊಡಬೇಕು. ಪ್ರಗತಿಪರ ರಾಜ್ಯ ಅಂತಾ ಶಿಕ್ಷೆಯೇ? ದಕ್ಷಿಣ ಭಾರತದ ರಾಜ್ಯದವರು ಅಂತ ತೊಂದರೆ ಕೊಡುತ್ತಿದ್ದಾರಾ?

-ಇದು ಪುನರಾವರ್ತನೆ ಆಗುವುದರಿಂದ ಇದರ ಪರಿಣಾಮಗಳೇನು?
ದೇಶಕ್ಕೆ ಹಾಲು ಕೊಡುವಂತಹ ಹಸು ಕರ್ನಾಟಕ. ಅದಕ್ಕೆ ಹೊಟ್ಟೆಗೆ ಬೇಕಾದಷ್ಟು ಮೇವು, ಹಿಂಡಿಯಾದರೂ ಕೊಡಬೇಕಲ್ಲವೇ? ಹೀಗೆ ಕಡಿಮೆಯಾದರೆ, ಸಹಜವಾಗಿ ಹಾಲಿನ ಪ್ರಮಾಣವೇ ಕಡಿಮೆ ಆಗಬಹುದು. ತೆರಿಗೆ ಸಂಗ್ರಹ ಕಡಿಮೆ ಆಗುತ್ತದೆ. ನಿರುದ್ಯೋಗ ಸಮಸ್ಯೆ ಉಲ್ಬಣಿಸುತ್ತದೆ. ಅಂತಿಮವಾಗಿ ಒಂದರ ಮೇಲೊಂದು ಸತತ ಅನ್ಯಾಯ ಮಾಡುವುದ­ರಿಂದ ದೇಶದ ಪ್ರಗತಿ ಮೇಲೆ ಪರಿಣಾಮ ಬೀರುತ್ತದೆ.

ಯಾಕೆಂದರೆ, ಕರ್ನಾಟಕ ಬಲಿಷ್ಠವಾಗಿದ್ದರೆ, ದೇಶ ಬಲಿಷ್ಠವಾಗಿರಲು ಸಾಧ್ಯ. ಯಾಕೆಂದರೆ ಇದು ಎಲ್ಲರಿಗೂ ಗೊತ್ತಿರುವಂತೆ ದೇಶದ ಖಜಾನೆಗೆ ಅತೀ ಹೆಚ್ಚು ಆದಾಯ ತಂದುಕೊಡುವ ರಾಜ್ಯವಾಗಿದೆ. ವಿದೇಶದಿಂದ ಹಣ ತಂದುಕೊಡು­ವಂತಹ ರಾಜ್ಯ ಕರ್ನಾಟಕ. ಅತೀ ಹೆಚ್ಚು ಉದ್ಯೋಗ ನೀಡುತ್ತಿರುವುದು ಕರ್ನಾಟಕ. ಆದರೆ ಕೇಂದ್ರದ ಈ ಧೋರಣೆಯಿಂದ ನಮ್ಮ ಕಾಲ ಮೇಲೆ ನಾವೇ ಕೊಡಲಿ ಪೆಟ್ಟು ಹಾಕಿದಂತಾಗುತ್ತಿದೆ. ಇದಕ್ಕಾಗಿ ದಿಲ್ಲಿಯಲ್ಲಿ ಹಮ್ಮಿಕೊಂಡ ಹೋರಾಟ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ.

ಬೆಂಗಳೂರು ಹೆಚ್ಚು ತೆರಿಗೆ ನೀಡುತ್ತದೆ. ಹಾಗಂತ, ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕಕ್ಕೆ ಹಣ ನೀಡದೆ, ಬೆಂಗಳೂರಿಗಷ್ಟೇ ವಿನಿಯೋಗಿಸಲಾಗುತ್ತದೆಯೇ ಅಂತ ಕೇಂದ್ರ ಪ್ರಶ್ನಿಸುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ನೋಡಿ, ನಾನು ಈಗಾಗಲೇ ಹೇಳಿದಂತೆ, ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಅಣ್ಣ-­ತಮ್ಮಂದಿರು. ಯಾರಿಗೂ ಹಂಚಿಕೆ ಮಾಡದೆ, ನಾವು ಕೊಟ್ಟ ನೂರೂ ರೂಪಾಯಿಗಳನ್ನು ನಮಗೇ ಕೊಡಿ ಅಂತ ನಾವು ಹೇಳುತ್ತಿಲ್ಲ. ಇನ್ನೂ ಹೆಚ್ಚು ಕೊಡಿ ಅಂತ ಹೇಳುತ್ತಿದ್ದೇವೆ. ಕೊನೇ ಪಕ್ಷ ನಮಗೆ ಅಗತ್ಯ ಇರುವಷ್ಟಾದರೂ ಕೊಡಿ ಅಂತ ಕೇಳುತ್ತಿದ್ದೇವೆ.

ಉದಯವಾಣಿ ಸಂದರ್ಶನ
 ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next