Advertisement
ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿದವನಲ್ಲ. ನಾನು ಯಾವತ್ತೂ ಅಲ್ಪಸಂಖ್ಯಾತರಿಗೆ ನಾಯಕ ಎಂದು ಹೇಳಿಕೊಂಡವನಲ್ಲ. ನಾನು ಈ ರಾಜ್ಯದ ಜನತೆಯ ಸೇವಕ. ಸರ್ವ ಜನಾಂಗದ ಶಾಂತಿಯ ತೋಟ ಇದು, ಸರ್ವಧರ್ಮದ ಬೀಡು ಇದು, ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು ಸಿಗಬೇಕು. ಇದು ಬಸವಣ್ಣ, ಸರ್ವಜ್ಞನ ನಾಡು. ಹಾಗಾಗಿ, ಜಾತಿ-ಮತ, ಪಂಥಗಳ ಭೇದಭಾವ ಬಿಟ್ಟು ರಾಜಕಾರಣ ಮಾಡುವ ರಾಜಕಾರಣಿಗಳ ಪೈಕಿ ನಾನೂ ಒಬ್ಬ. ಈಗ ಹೋರಾಟದ ಸಮಯ. ಹೋರಾಟ ಕರ್ನಾಟಕದ ಪರಂಪರೆ, ಈ ಮಣ್ಣಿನ ಗುಣ. ಪಾಪದ ಕೆಲಸವನ್ನು ಕರ್ನಾಟಕ ಜನ ಯಾವತ್ತೂ ಸಹಿಸುವುದಿಲ್ಲ.
Related Articles
Advertisement
ನಾನು ನಾಮಕಾವಾಸ್ತೆ ಅಧ್ಯಕ್ಷ ಅಲ್ಲ. ದೇವೇಗೌಡರು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನನ್ನ ಮೇಲೆ ನಯಾ ಪೈಸೆ ಆಪಾದನೆ ಇಲ್ಲ. ಜೆಡಿಎಸ್ ನನ್ನ ಪಾಲಿಗೆ ಫ್ಯಾಮಿಲಿ ಇದ್ದಂತೆ. ಕುಮಾರಸ್ವಾಮಿ ನನಗೆ ತಮ್ಮ ಇದ್ದಂತೆ.
ಕಾಂಗ್ರೆಸ್ ಬಗ್ಗೆ ಇಷ್ಟೊಂದು ಕೋಪ ಇರಲು ಕಾರಣ ಏನು?
ನಾನೂ ಹೇಳಿದಂಗೆ ಎಲ್ಲ ಮಾಡಿ, ನನಗೂ ಏನು ಮಾಡಿಲ್ಲ. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ 7 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಕೊಟ್ಟರೆ, ಅನುದಾನ ಕಟ್ ಮಾಡಿದರು. ನಾನು ಕಾಂಗ್ರೆಸ್ ನಿಂದ ಏನೂ ಇಟ್ಟುಕೊಂಡು ಬಂದಿಲ್ಲ, ಇದ್ದ ಎಂಎಲ್ಸಿ ಸ್ಥಾನವನ್ನು ಬಿಟ್ಟು ಬಂದಿದ್ದೇನೆ. ನನಗೆ ಬೇಕಾಗಿದ್ದು ಸ್ಥಾನ ಅಲ್ಲ, ಮಾನ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರಿಗೆ ಏನು ಮಾಡಿದರು? ಟಿಪ್ಪು ಜಯಂತಿ ತಂದು ಹೊಡೆದಾಟಕ್ಕೆ ಹಚ್ಚಿದರು. ಈಗಲೂ ಅನೇಕ ಅಮಾಯಕ ಯುವಕರು ಜೈಲುಗಳಲ್ಲಿದ್ದಾರೆ. ಹಿಜಾಬ್ ಬಗ್ಗೆ ಮಾತನಾಡಬಾರದೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ. ಹಲಾಲ್ ಕಟ್ ವಿಚಾರ ಬಂದಾಗ ಬಾಯಿ ಮುಚ್ಚಿಕೊಂಡಿದ್ದರು. ಈಗ ಇಫ್ತಾರ್ ಕೂಟದಲ್ಲಿ ಸಾಬ್ರು ಟೋಪಿ ಹಾಕಿಕೊಂಡು ಕೂತಿದ್ದಾರೆ.
ಇಬ್ರಾಹಿಂಗೆ ಸ್ಥಾನ ಸಿಕ್ಕಿಲ್ಲ ಅಂದ ಮಾತ್ರಕ್ಕೆ ಮುಸ್ಲಿಮರಿಗೆ ಅನ್ಯಾಯ ಆಗಿದೆ ಅಂತಾನ?
70 ವರ್ಷಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಏನು ಮಾಡಿದೆ. ಯಾವುದಾದರೂ ಒಳ್ಳೆಯ ಖಾತೆಗಳನ್ನು ಕೊಟ್ಟಿದ್ದಾರಾ? ಪರಮೇಶ್ವರ ಸೋತರೂ ಎಂಎಲ್ಸಿ ಮಾಡಿ ಸಚಿವ ಸ್ಥಾನ ಕೊಡುತ್ತೀರಿ, ಇದೇ ಸೂತ್ರ ನನಗೆ ಯಾಕೆ ಅನ್ವಯ ಆಗಲ್ಲ. ಪರಿಷತ್ತಿನಲ್ಲಿ 21 ಜನ ಸದಸ್ಯರು ನನ್ನ ಪರ ಇದ್ದರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಯಾವುದೇ ಹುದ್ದೆ ಕೇಳಬಾರದು ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ, ಯಾಕೆ? ಶೇ.21ರಷ್ಟು ಇರುವ ಮುಸ್ಲಿಮರು ಬರೀ ಓಟ್ ಹಾಕ್ಲಿಕ್ಕೆ ಇರುವುದಾ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಗಳನ್ನು ಅಲ್ಪಸಂಖ್ಯಾತರಿಗೆ ಬಿಟ್ಟು ಕೊಡಲಿ.
ಅಂದರೆ, ಮುಂದಿನ ಚುನಾವಣೆ ಅಜೆಂಡಾ ಹಿಂದೂ -ಮುಸ್ಲಿಮ್ಮಾ?
ಯಾವುದೇ ಕಾರಣಕ್ಕೂ ಇಲ್ಲಿ ಹಿಂದೂ-ಮುಸ್ಲಿಮರ ಹೆಸರಲ್ಲಿ ಚುನಾವಣೆ ಆಗಲ್ಲ. ಯಾಕೆಂದರೆ ಇದು ಉತ್ತರ ಪ್ರದೇಶ ಅಲ್ಲ. ಅದಕ್ಕೇನೆ ಕಾಂಗ್ರೆಸ್‌ನವರಿಗೆ ಮುಸ್ಲಿಮರ ಹೆಸರು ಹೇಳುವುದಕ್ಕೆ ಹೆದರಿಕೆ, ಯಾಕೆಂದರೆ ಹಿಂದೂ ಓಟ್‌ಗಳು ಹೊರಟು ಹೋಗುತ್ತವೆ ಎಂಬ ಭಯ. ಆದರೆ, ಕುಮಾರಸ್ವಾಮಿ ಗೌಡನ ಮಗ. ಧೈರ್ಯವಾಗಿ ಮಾತನಾಡಿದ. ಕಾಂಗ್ರೆಸ್‌ನವರಿಗೆ ಮಾತನಾಡಲು ಧೈರ್ಯ ಇದೆಯಾ? ಬಿಜೆಪಿಯದ್ದು ಹಾರ್ಡ್ ಹಿಂದುತ್ವ; ಕಾಂಗ್ರೆಸ್ ನವರದ್ದು ಸಾಫ್ಟ್ ಹಿಂದುತ್ವ. ಕಾಂಗ್ರೆಸ್‌ನಿಂದ ಮುಸ್ಲಿಮರು ದೂರ ಹೋಗಿಯಾಗಿದೆ.
ಮುಸ್ಲಿಮರ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತೆ ಆಗಿದೆಯಾ?
ಹಾಗೇನೂ ಇಲ್ಲ. ಯಾವ ಗೊಂದಲವೂ ಇಲ್ಲ. ಇಕ್ಕಟ್ಟು-ಬಿಕ್ಕಟ್ಟು ಎಂತಹದ್ದೂ ಇಲ್ಲ. 1995ರಲ್ಲಿ ಮುಸ್ಲಿಮರು ಜೆಡಿಎಸ್ ಪರ ನಿಂತಿದ್ದಕ್ಕೆ 16 ಎಂಪಿಗಳು, 112 ಶಾಸಕರು ಗೆದ್ದು ಬಂದಿದ್ದರು. ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ದು, ಅಲ್ಪಸಂಖ್ಯಾತರಿಗೆ ವಸತಿ ಶಾಲೆ ಕೊಟ್ಟಿದ್ದು, ಇಂಜಿನಿಯರಿಂಗ್ ಮತ್ತು ಮೆಡಿಕಲ್‌ನಲ್ಲಿ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಉಸಿರು ಕಟ್ಟಿದಂತಾಗಿದೆ.
ನೀವು ಮುಂದಿನ ಸಿಎಂ ಕುಮಾರಸ್ವಾಮಿ ಅಂತೀರಿ, ಆದ್ರೆ, ದಲಿತರನ್ನು ಸಿಎಂ ಮಾಡ್ತೇನೆ ಎಂದು ಕುಮಾರಸ್ವಾಮಿ ಹೇಳ್ತಾರೆ…
ಎಚ್.ಡಿ. ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ.
2023ರ ಚುನಾವಣೆಗೆ ನಿಮ್ಮ ಮುಂದಿರುವ ವಿಷಯ ಏನು?
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ಆಗುತ್ತದೆ. ನಾಡಿನ ಬಗ್ಗೆ ಅಭಿಮಾನ ಇರುವ ಎಲ್ಲರೂ ನಮ್ಮ ಮತದಾರರು. ನಾಡಿನ ಸಾರ್ವಭೌಮತ್ವ ಉಳಿಯಬೇಕು. ಕೋಮು ವಿಷಯಗಳಿಗೆ ಆಸ್ಪದ ನೀಡುವುದಿಲ್ಲ. ಜನತಾದಳ ಸ್ಟ್ರಾಂಗ್ ಆದರೆ, ಕಾಂಗ್ರೆಸ್-ಬಿಜೆಪಿ ಸೊಂಟ ಮುರಿಯುತ್ತದೆ.
-ರಫೀಕ್ ಅಹ್ಮದ್