Advertisement

ಸಂದರ್ಶನ:ಕಡಬ ಕೃಷ್ಣ ಶೆಟ್ಟಿ,ಪುತ್ತೂರು ಕ್ಷೇತ್ರ ಉಸ್ತುವಾರಿ (ಬಿಜೆಪಿ)

01:54 PM Mar 11, 2018 | |

ಪುತ್ತೂರಿನಲ್ಲಿ ಬಿಜೆಪಿ ಸಿದ್ಧತೆ ಹೇಗಿದೆ?
ಸುಮಾರು 8 ತಿಂಗಳ ಹಿಂದೆಯೇ ಚುನಾವಣೆ ತಯಾರಿ ಆರಂಭವಾಗಿದೆ. ಇದು ಇತಿಹಾಸದಲ್ಲೇ ಪ್ರಥಮ. 1994 ರಿಂದ ಪುತ್ತೂರು, ಸುಳ್ಯದಲ್ಲಿ ಬಿಜೆಪಿ ಗೆಲುವು ದಾಖಲಿಸುತ್ತಾ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಅತಿ ಆತ್ಮ ವಿಶ್ವಾಸದಿಂದ ಸೋಲುವಂತಾಯಿತು. ಇದೀಗ ಬಿಜೆಪಿ ಪರ ಅಲೆಯಿದೆ. ಹಿಂದಿನ ದಿನಗಳ ಹೋರಾಟವನ್ನು ಜಿಲ್ಲೆ ನೆನಪಿಸುವಂತಾಗಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲೂ ಜಯ ಸಾಧಿಸುತ್ತೇವೆ. ಯಾರೇ ಅಭ್ಯರ್ಥಿಯಾದರೂ ಗೆಲುವು ನಮ್ಮದೇ.

Advertisement

ಬಿಜೆಪಿ ಗೆಲ್ಲುತ್ತದೆ ಎಂದು ಹೇಗೆ ನಿಖರವಾಗಿ ಹೇಳಬಲ್ಲಿರಿ?
ಈ ಬಾರಿಯ ಚುನಾವಣೆ ದೇಶದ್ರೋಹಿ ಮತ್ತು ಹಿಂದುತ್ವ ನಡುವೆ. ರಾಜ್ಯ ಕಾಂಗ್ರೆಸ್‌ ಸರಕಾರವು ಕೆಡಿಎಫ್‌, ಪಿಎಫ್‌ಐ ಪರವಾಗಿ ನಿಂತಿದ್ದು, ಇಷ್ಟು ನಿಕೃಷ್ಟ ಸ್ಥಿತಿಗೆ ಹಿಂದಿನ ಯಾವ ಕಾಂಗ್ರೆಸ್‌ ಸರಕಾರಗಳು ಇಳಿದಿರಲಿಲ್ಲ. ಇಂತಹ ಕಾಂಗ್ರೆಸ್‌ ವಿರೋಧಿ ಅಲೆ ಬಿಜೆಪಿ ಗೆಲುವಿಗೆ ಕಾರಣವಾಗಲಿವೆ. ಲೋಕಸಭಾ ಚುನಾವಣೆಯಲ್ಲಿ 30,000 ಕಾಂಗ್ರೆಸ್‌ ಮತಗಳು ಬಿಜೆಪಿಗೆ ಸಿಕ್ಕಿವೆ.

ಕಳೆದ ಬಾರಿ ಸೋಲುಂಡರೂ ಈಗ ಇಷ್ಟು ಆತ್ಮವಿಶ್ವಾಸವೇ?
ಹಿಂದಿನ ಚುನಾವಣೆಯಲ್ಲಿ 4,000 ಮತಗಳ ಅಂತರದಿಂದಷ್ಟೇ ಸೋತಿದ್ದೇವೆ. ಆ ಸಂದರ್ಭ ಹಿರಿಯ ಬಿಜೆಪಿ ನಾಯಕರು ಶಕುಂತಳಾ ಶೆಟ್ಟಿ ಪರ ನಿಂತಿದ್ದು, ಅವರ ಪರ ಅನುಕಂಪದ ಅಲೆಯಿತ್ತು. ಬಿಜೆಪಿ ಆಡಳಿತ ವಿರೋಧಿ ಅಲೆಯೂ ಕೆಲಸ ಮಾಡಿತು. ಈ ಬಾರಿ ಕಾಂಗ್ರೆಸ್‌ ವಿರೋಧಿ ಅಲೆಯಿದೆ. ಸರ್ವಸಮ್ಮತ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡುತ್ತದೆ, ಗೊಂದಲಕ್ಕೆ ಅವಕಾಶ ಇಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಖಡಕ್‌ ಸೂಚನೆ ನೀಡಿದ್ದಾರೆ. 

ತಯಾರಿ ಹೇಗಿದೆ?
– ಪುತ್ತೂರಿನ 217 ಬೂತ್‌ನಲ್ಲಿ ಬೂತ್‌ ಸಶಕ್ತಿಕರಣ ಮಾಡುತ್ತಿದ್ದೇವೆ. ಪ್ರತಿ ಬೂತ್‌ನಲ್ಲಿ 25 ಕಾರ್ಯಕರ್ತರನ್ನು ನೇಮಿಸಿದ್ದು, ಕೆಲಸ ನಡೆಯುತ್ತಿದೆ. ಅನುಭವಿಗಳಿಗೆ ಜವಾಬ್ದಾರಿ ನೀಡಿದ್ದೇವೆ. ಶೇ. 100ರಷ್ಟು ಮನೆ ಭೇಟಿಯಿಂದಲೇ ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಉತ್ತಮ ಸ್ಪಂದನೆ ಇದೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ?
ಆಕಾಂಕ್ಷಿಗಳಿದ್ದಾರೆ, ತಪ್ಪೇನಿಲ್ಲ. ಅಭ್ಯರ್ಥಿ ಆಯ್ಕೆ ಬಳಿಕ ಎಲ್ಲರೂ ಒಗ್ಗಟ್ಟಾಗಿರುತ್ತಾರೆ. ಎಲ್ಲ ಆಕಾಂಕ್ಷಿಗಳ ಉದ್ದೇಶ ಬಿಜೆಪಿ ಗೆಲುವಷ್ಟೇ.

Advertisement

ಎತ್ತಿನಹೊಳೆ ಯೋಜನೆ ಚುನಾವಣಾ ವಸ್ತುವೇ?
ಖಂಡಿತ ಹೌದು. ಆದರೆ ಇದು ಕಾಂಗ್ರೆಸ್‌ಗೆ ಹೊಡೆತ ನೀಡುತ್ತದೆ. ಸಂಸದ ನಳಿನ್‌ ನೇತೃತ್ವದಲ್ಲಿ ಜಾಗೃತಿ ಹೋರಾಟ ನಡೆಸಿದ್ದೇವೆ. ಆದರೆ ಕಾಂಗ್ರೆಸ್‌ ಟಿಕೇಟ್‌ ಆಕಾಂಕ್ಷಿಗಳಾದ ಮೂವರೂ ಇದರ ಬಗ್ಗೆ ಚಕಾರ ಎತ್ತಿಲ್ಲ. ಮತದಾರರು ಖಂಡಿತ ಇದಕ್ಕೆ ಉತ್ತರ ನೀಡುತ್ತಾರೆ.

„ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next