Advertisement

ಲೋಕಸೇವಾ ಆಯೋಗದಿಂದ 29ಕ್ಕೆ ಸಂದರ್ಶನ

12:49 AM Jul 04, 2019 | Team Udayavani |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಅಭ್ಯರ್ಥಿಗಳ ಸಂದರ್ಶನ ದಿನಾಂಕ ಪ್ರಕಟಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದಂತೆ ಎಚ್ಚೆತ್ತ ಆಯೋಗವು ಇದೇ 29ರಂದು ಸಂದರ್ಶನ ನಡೆಸುವುದಾಗಿ ಪ್ರಕಟಿಸಿದೆ.

Advertisement

2015ರ ಬ್ಯಾಚ್‌ನ ಕೆಎಎಸ್‌ ಅಧಿಕಾರಿಗಳ ಆಯ್ಕೆಗೆ 2017ರ ಮೇ 12ರಂದು ಅಧಿಸೂಚನೆ ಹೊರಡಿಸಿ 2017ರ ಆ.20ಕ್ಕೆ ಪೂರ್ವಭಾವಿ ಪರೀಕ್ಷೆ ಕೂಡ ನಡೆದಿತ್ತು. ಬಳಿಕ 2017ರ ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿದ್ದು, ವರ್ಷ ಕಳೆದರೂ ಫ‌ಲಿತಾಂಶ ಪ್ರಕಟಿಸಿರಲಿಲ್ಲ. ಫ‌ಲಿತಾಂಶ ಪ್ರಕಟಿಸುವಂತೆ ಸುರೇಶ್‌ ಕುಮಾರ್‌ ಅವರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಬಳಿಕ 2019ರ ಜ.28ರಂದು ಫ‌ಲಿತಾಂಶ ಪ್ರಕಟವಾಗಿತ್ತು. ಬಳಿಕ, ಸುರೇಶ್‌ ಕುಮಾರ್‌ ಅವರು ಒತ್ತಾಯ ಮಾಡಿದರೂ ಸಂದರ್ಶನದ ದಿನಾಂಕ ಪ್ರಕಟಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬುಧವಾರ ಕೆಪಿಎಸ್‌ಸಿ ಕಚೇರಿ ಎದುರು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದರು. ತಕ್ಷಣವೇ ಆಯೋಗದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಜು.29ರಂದು ಸಂದರ್ಶನ ನಡೆಸುವುದಾಗಿ ಭರವಸೆ ನೀಡಿದರು. ಇದನ್ನು ಒಪ್ಪದ ಸುರೇಶ್‌ ಕುಮಾರ್‌ ಲಿಖೀತ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಬಳಿಕ, ಕೆಪಿಎಸ್‌ಸಿ ಕಾರ್ಯದರ್ಶಿ ಜನ್ನು, ಜು.29ರಂದು ಸಂದರ್ಶನ ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಲಿಖೀತ ರೂಪದಲ್ಲಿ ತಿಳಿಸಿದರು. ಬಳಿಕ, ಅವರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ಬೆಂಬಲಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಇತರರು ಪಾಲ್ಗೊಂಡಿದ್ದರು. ಜು.29ರಿಂದ ಪ್ರಾರಂಭವಾಗುವ ಸಂದರ್ಶನ ಹೋಟಾ ಸಮಿತಿಯ ಶಿಫಾರಸಿನಂತೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅನ್ಯಾಯಕ್ಕೆ ಅವಕಾಶ ನೀಡಬಾರದು ಎಂದು ಸುರೇಶ್‌ ಕುಮಾರ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next