Advertisement

ಮಾತಿನ ಮತ, ಸಂದರ್ಶನ

03:18 PM Mar 28, 2018 | Team Udayavani |

ಅವಕಾಶ ನೀಡಿದರೆ ಪುತ್ತೂರು ಬಿಜೆಪಿಯಿಂದ ಸ್ಪರ್ಧೆ

Advertisement

ದಿನೇಶ್‌ ಬಿ.ಎನ್‌. ಹುಟ್ಟು ಬಿಜೆಪಿಗ. ಆದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ. ಬಿಜೆಪಿ ನಾಯಕರ ತಾಕಲಾಟದಿಂದ ಬೇಸತ್ತು ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ 7,856 ಮತ ಪಡೆದರು. ಈ ಮತ ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ನಿರ್ಣಾಯಕವೂ ಆಯಿತು. ಪರಿಣಾಮ ಚುನಾವಣೆ ಮುಗಿದ ತತ್‌ಕ್ಷಣ ಬಿಜೆಪಿ ಮುಖಂಡರು ದಿನೇಶ್‌ ಬಳಿ ಬಂದು ಮಾತುಕತೆ ನಡೆಸಿ, ಪಕ್ಷದೊಳಗೆ ಸೇರಿಸಿಕೊಂಡರು. ಇದೀಗ ದಿನೇಶ್‌ ಅವರು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ.

ಈ ಬಾರಿಯ ಚುನಾವಣೆಯಲ್ಲಿ ನೀವು ಆಕಾಂಕ್ಷಿಯೇ?
ಖಂಡಿತಾ ಹೌದು. ಆದರೆ ಲಾಬಿ ಮಾಡುವುದಿಲ್ಲ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ನೀಡಿದರೆ ಮಾತ್ರ ಬಿಜೆಪಿಯಿಂದ ಸ್ಪರ್ಧೆಗೆ ಇಳಿಯುತ್ತೇನೆ. ನನ್ನ ರಕ್ತದಲ್ಲೇ ಹಿಂದುತ್ವ ಇದೆ. ಬಿಜೆಪಿ ಪಕ್ಷದಲ್ಲೇ ಬೆಳೆದವನು.

ಹಿಂದಿನ ಸಲ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು ಯಾಕೆ?
ಬಿಜೆಪಿ ನಾಯಕರು ಅವಗಣಿಸಿದ ಕಾರಣ, ಜೆಡಿಎಸ್‌ ಸೇರಬೇಕಾಯಿತು. ಕಾರ್ಯಕರ್ತರ ನೋವನ್ನು ಅವರಿಗೆ ತಿಳಿಸುವ ಕೆಲಸ ಮಾಡಬೇಕಾಗಿತ್ತು. ಅದರಲ್ಲಿ ಯಶಸ್ವಿಯೂ ಆಗಿದ್ದೇನೆ. ಜೆಡಿಎಸ್‌ನಿಂದ ಸ್ಪರ್ಧಿಸಿ 7,856 ಮತ ಪಡೆದಿದ್ದೇನೆ. ಇದು ದಿನೇಶ್‌ಗೆ ಸಿಕ್ಕಿದ ಮತ. ಹಾಗೆಂದು ಜೆಡಿಎಸ್‌ ನಿಂದ ನನಗೆ ಯಾವುದೇ ಆಮಿಷ ಇರಲಿಲ್ಲ.

ಸ್ಪರ್ಧೆಗೆ ಪುತ್ತೂರೇ ಬೇಕು ಎಂಬ ಬೇಡಿಕೆ ಏಕೆ?
ಮೊದಲನೆಯದಾಗಿ ಪುತ್ತೂರಿನ ಎಲ್ಲ ಸ್ಥಳಗಳ ಪರಿಚಯ ನನಗಿದೆ. ಎರಡನೆಯದಾಗಿ ಪುತ್ತೂರಿನಲ್ಲಿ ಗೌಡ ಸಮುದಾಯದ ಮತ ಹೆಚ್ಚಿರುವುದು. ಹಾಗೆಂದು ನಾನು ಮೂಲತಃ ಸುಳ್ಯದವನು. ಪುತ್ತೂರು ಬಿಟ್ಟು ಇತರ ಕಡೆಗಳಲ್ಲಿ
ಆಸಕ್ತಿ ಇಲ್ಲ. ವರಿಷ್ಠರು ನೀಡಿದರೆ ಮಾತ್ರ ಸ್ಪರ್ಧೆ. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತೇನೆ.

Advertisement

ಬಿಜೆಪಿ ಸೇರಿದ ಬಳಿಕ ನಿಮ್ಮ ಸಾಧನೆ?
ಹಿಂದಿನ ಹತ್ತು ವರ್ಷ ಸುಬ್ರಹ್ಮಣ್ಯ ಗ್ರಾ.ಪಂ. ಕಾಂಗ್ರೆಸ್‌ ಆಡಳಿತದಲ್ಲಿತ್ತು. ಇದೀಗ 18 ಸ್ಥಾನಗಳ ಪೈಕಿ 12 ಬಿಜೆಪಿ ಸದಸ್ಯರು. ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಸರಕಾರದ ಅನುದಾನಕ್ಕೆ ಮಾತ್ರ ಕಾಯದೇ ಸ್ವಂತ ಹಣವನ್ನು ಹಾಕಿಯೂ ಕೆಲಸ ಮಾಡಿದ್ದೇನೆ. ಮಾಡಿದ ಕೆಲಸದಲ್ಲಿ ತೃಪ್ತಿ ಇದೆ.

ಬಿಜೆಪಿ ಅಲೆ ಹೇಗಿದೆ?
ಈ ಬಾರಿ ಶೇ. 100ರಷ್ಟು ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತದೆ. ತಪ್ಪಿದರೆ ಮುಂದೆ ಯಾವತ್ತೂ ಅಧಿಕಾರ ಕನಸಿನ ಗಂಟು. ಹಿಂದೂ ವಿರೋಧಿ ನೀತಿ, ಅಲ್ಪಸಂಖ್ಯಾಕ ಮತಗಳ ಓಲೈಕೆ ಇತ್ಯಾದಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ.

 ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next