Advertisement
“ಈ ಸಲ ಮೇಲ್ಮನೆಯ ಮಟ್ಟಿಗಂತೂ ಅಂತಹ ಆರೋಪಗಳಿಗೆ ಅವಕಾಶ ನೀಡುವುದಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳು ಅಧಿವೇಶನದ ಆದ್ಯತೆ ಆಗಿರಲಿವೆ. ಕೊನೆಯಲ್ಲಿ ಚರ್ಚೆ ಇಲ್ಲ. ಆರಂಭದಲ್ಲೇ ಮೊದಲೆರಡು ದಿನಗಳು ಆ ಭಾಗದ ಬದುಕು-ಬವಣೆ ಕುರಿತ ಗಂಭೀರ ಚರ್ಚೆಗಳಿಗೆ ಅಧಿವೇಶನ ವೇದಿಕೆ ಆಗಲಿದೆ. ಅದರಲ್ಲೂ ಬರ, ಅದರ ಪರಿಣಾಮಗಳು, ಪರಿಹಾರೋಪಾಯಗಳ ಮೇಲೆ ಮೇಲ್ಮನೆ ಬೆಳಕು ಚೆಲ್ಲಲಿದೆ’.
– ಎಂದಿನಂತೆ ಅಧಿವೇಶನಕ್ಕೆ ಕಾರ್ಯಕಲಾಪ ಪಟ್ಟಿಯ ಸಿದ್ಧತೆ ನಡೆದಿದೆ. ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು? ಎಷ್ಟು ಅವಧಿ ಮೀಸಲಿಡಬೇಕು? ಉತ್ತರ ಕರ್ನಾಟಕದಲ್ಲಿ ನಡೆಯುವುದರಿಂದ ಆ ಭಾಗಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು, ಸಮಸ್ಯೆಗಳನ್ನು ಹೊತ್ತುತರುವ ಸದಸ್ಯರಿಗೆ ಸಾಧ್ಯವಾದಷ್ಟು ಅವಕಾಶ ಕಲ್ಪಿಸಬೇಕು. ಲಭ್ಯವಿರುವ ಅಲ್ಪಾವಧಿಯಲ್ಲಿ ಎಲ್ಲವನ್ನೂ ಹೊಂದಾಣಿಕೆ ಮಾಡಬೇಕಿದೆ.
Related Articles
– ರಾಜ್ಯಾದ್ಯಂತ ಬರ ಇದೆ. ಇದರ ಬಿಸಿ ಮಳೆಯಾಶ್ರಿತ ಪ್ರದೇಶ ಹೆಚ್ಚಾಗಿರುವ ಉತ್ತರ ಕರ್ನಾಟಕಕ್ಕೆ ತುಸು ಜೋರಾಗಿಯೇ ತಟ್ಟಿದೆ. ದನಕರುಗಳಿಗೂ ನೀರಿಲ್ಲ. 1.20 ಲಕ್ಷ ಬೆಲೆಬಾಳುವ ಎತ್ತುಗಳನ್ನು ರೈತರು ಸಾಲ ಮತ್ತಿತರ ಕಾರಣಗಳಿಂದ ಬರೀ 50 ಸಾವಿರ ರೂ.ಗಳಿಗೆ ರೈತರು ಮಾರಾಟ ಮಾಡಿದ್ದಿದೆ. ಇಂತಹ ಹತ್ತಾರು ಸಮಸ್ಯೆಗಳು ಆ ಭಾಗವನ್ನು ಕಾಡುತ್ತಿವೆ. ಇದರ ಜತೆಗೆ ರಾಜ್ಯದ ಗಂಭೀರ ವಿಷಯಗಳಿಗೆ ಆದ್ಯತೆ ಇರಲಿದೆ.
Advertisement
* ಹೆಸರಿಗೆ ಮಾತ್ರ ಬೆಳಗಾವಿ ಅಧಿವೇಶನ. ಆದರೆ, ಅಲ್ಲಿ ನಡೆಯುವ ಚರ್ಚೆಗಳು ಬಹುತೇಕ ಉತ್ತರ ಕರ್ನಾಟಕಕ್ಕೆ ಹೊರತಾಗಿಯೇ ಇರುತ್ತವೆ ಎಂಬ ಬೇಸರ ಆ ಭಾಗದ ಜನರದ್ದಾಗಿದೆ. ಇದಕ್ಕೆ ಏನು ಹೇಳುತ್ತೀರಿ?– ಜನರ ಆ ಬೇಸರಕ್ಕೂ ಅರ್ಥ ಇದೆ. ಪ್ರತಿ ಬಾರಿ ಉತ್ತರ ಕರ್ನಾಟಕದ ಚರ್ಚೆಗಳಿಗೆ ಕೊನೆಯ ಎರಡು ದಿನಗಳು ಮೀಸಲಿರುತ್ತಿದ್ದವು. ಅಷ್ಟೊತ್ತಿಗೆ ಉತ್ಸಾಹವೂ ಕುಗ್ಗಿರುತ್ತದೆ. ಸದಸ್ಯರು ಊರುಗಳ ಕಡೆಗೆ ಹೋಗುವ ಧಾವಂತದಲ್ಲಿ ಇರುತ್ತಾರೆ ಅಥವಾ ಗಲಾಟೆಯಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗಿಬಿಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಲ ಅಧಿವೇಶನದ ಆರಂಭದಲ್ಲೇ ಅಂದರೆ ಎರಡು ಮತ್ತು ಮೂರನೇ ದಿನ (ಡಿ. 5 ಮತ್ತು 6)ವನ್ನು ಆ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು. ಪ್ರಶ್ನೋತ್ತರ ಮುಗಿಯುತ್ತಿದ್ದಂತೆ ಚರ್ಚೆಗೆ ಎತ್ತಿಕೊಳ್ಳಲಾಗುವುದು. ಅಷ್ಟೇ ಅಲ್ಲ, ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ಕರ್ನಾಟಕವಲ್ಲದ ಸದಸ್ಯರು ಯಾರಾದರೂ ಆ ಭಾಗಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದರೆ, ಅದಕ್ಕೆ ಆದ್ಯತೆ ನೀಡಲಾಗುವುದು. * ಬೆಳಗಾವಿ ಸುವರ್ಣಸೌಧ ಬರೀ ಅಧಿವೇಶನಕ್ಕೆ ಸೀಮಿತವಾಗಿದೆ. ಇಲಾಖೆಗಳ ಸ್ಥಳಾಂತರಕ್ಕೆ ಆದೇಶವಾದರೂ ಪಾಲನೆ ಮಾತ್ರ ಆಗುತ್ತಿಲ್ಲವಲ್ಲಾ?
– ಹೌದು, ಸ್ವತಃ ನಾನೇ ಭರವಸೆಗಳ ಸಮಿತಿಯಲ್ಲಿದ್ದಾಗ ಶಿಫಾರಸು ಮಾಡಿದ್ದೆ. 13 ಇಲಾಖೆಗಳನ್ನು ಸ್ಥಳಾಂತರ ಮಾಡಬೇಕು ಎಂದರೂ ಆ ನಿಟ್ಟಿನಲ್ಲಿ ಕ್ರಮ ಆಗುತ್ತಿಲ್ಲ. ಇಲಾಖೆಗಳ ಸ್ಥಳಾಂತರದ ಜತೆಗೆ ಆಗಾಗ್ಗೆ ಸಚಿವ ಸಂಪುಟ ಸಭೆಗಳು ಕೂಡ ಬೆಳಗಾವಿಯಲ್ಲಿ ನಡೆಯುವಂತಾಗಬೇಕು. ಇದೆಲ್ಲಾ ಐಎಎಸ್ ಅಧಿಕಾರಿಗಳ ಕೈಯಲ್ಲಿದೆ. ಸ್ಥಳಾಂತರದ ಅಗತ್ಯತೆಯನ್ನು ಮನಗಂಡು ಸರ್ಕಾರ ಇದಕ್ಕೆ ಮನಸ್ಸು ಮಾಡಬೇಕು. ಅಲ್ಲಿಯವರೆಗೆ ಏನೂ ಮಾಡಲಾಗದು. * ವರ್ಷದಲ್ಲಿ 60 ದಿನ ಅಧಿವೇಶನ ಕಡ್ಡಾಯವಾಗಿ ನಡೆಸಬೇಕು. ಈ ಬಗ್ಗೆ ಏನು ಹೇಳುತ್ತೀರಿ?
– ನಾವು 60 ದಿನ ಅಂದ್ರೂ ನಡೆಸುತ್ತೇವೆ; ಹತ್ತೇ ದಿನ ನಡೆಸಿ ಅಂದ್ರೂ ನಡೆಸುತ್ತೇವೆ. ಶಾಲೆ ನಡೆಸುವುದು ಅಥವಾ ಸೂಟಿ (ರಜೆ) ಕೊಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಈ ಬಗ್ಗೆ ಖಡಕ್ ನಿರ್ಧಾರ ಕೈಗೊಂಡರೆ, ನಾವೂ 60 ದಿನ ನಡೆಸಲು ಸಿದ್ಧ. ಅದು ಸಾಧ್ಯವಾದರೆ, ಜನರ ಕಷ್ಟಗಳೂ ಪರಿಹಾರ ಆಗುತ್ತವೆ. ಆದರೆ ವಾಸ್ತವವಾಗಿ ಹೇಳುವುದಾದರೆ, ಆ ಉತ್ಸಾಹ ಕಂಡುಬರುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ವಿಜಯಕುಮಾರ ಚಂದರಗಿ