Advertisement

ಅಂತಾರಾಜ್ಯ ಕಳ್ಳರ ತಂಡ ಪೊಲೀಸ್‌ ಬಲೆಗೆ

10:40 AM Oct 09, 2018 | |

ಪಡುಬಿದ್ರಿ: ಸರಕು ಸಾಗಾಟ ಲಾರಿಯಲ್ಲಿ ಬಂದು ಹೊಂಚು ಹಾಕಿ ಕದಿಯುವ ಅಂತಾರಾಜ್ಯ ಚೋರರ ತಂಡವನ್ನು ಕಾಪು ಸಿಪಿಐ ಹಾಲಮೂರ್ತಿ ರಾವ್‌ ನೇತೃತ್ವದ ವಿಶೇಷ ಪೊಲೀಸ್‌ ತಂಡವು ಮಹಾರಾಷ್ಟ್ರದಲ್ಲಿ ಬಂಧಿಸಿದೆ.

Advertisement

ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆ ಕಲಾಂಬ್‌ ತಾಲೂಕಿನ ಅಂದೋರಾ ನಿವಾಸಿಗಳಾದ ಸುಭಾಷ್‌ ಭೀಮ ರಾವ್‌ ಕಾಳೆ (26), ಶಂಕರ್‌ ಲಗಮನ್‌ ಕಾಳೆ (27), ಸುಭಾಷ್‌ ಭಾಸ್ಕರ್‌ ಕಾಳೆ (27), ಕನ್ನೇರ್‌ವಾಡಿ ನಿವಾಸಿ ಕಾಳಿದಾಸ್‌ ಭಾಸ್ಕರ ಕಾಳೆ (31) ಹಾಗೂ ಮಸ್ಸಾ ಖಂಡೇಶ್ವರಿ ನಿವಾಸಿ ಸುನೀಲ್‌ ನಾನಾ ಕಾಳೆ (27) ಬಂಧಿತರು. ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಡುಬಿದ್ರಿಯಲ್ಲಿ ಸೆ. 2ರಂದು ನಡೆದ ದರೋಡೆ, ಕಳವು ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದ್ದು, ಕಳವುಗೈದಿದ್ದ 6 ಮೊಬೈಲ್‌ ಫೋನ್‌ ಮತ್ತು ಚೂರಿಯೊಂದನ್ನು ವಶಪಡಿಸಿಕೊಂಡು ಅ. 7ರಂದು ಪಡುಬಿದ್ರಿಗೆ ಕರೆತರಲಾಗಿದೆ.

ಕೆಳಗಿನ ಪೇಟೆಯ ಕರ್ಣಾಟಕ ಬ್ಯಾಂಕ್‌ ಎಟಿಎಂ ಕಾವಲುಗಾರ ಪಾದೆಬೆಟ್ಟಿನ ಲಕ್ಷ್ಮಣ ಪೂಜಾರಿ ಅವರನ್ನು ಸೆ. 2ರ ರಾತ್ರಿ ಬಾಯಿ, ಕೈ, ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಪಕ್ಕದ ಪೊದೆಗೆಸೆದು ಅವರಲ್ಲಿದ್ದ ಮೊಬೈಲ್‌ ಮತ್ತು 400 ರೂ.ಗಳನ್ನು ದರೋಡೆಗೈಯಲಾಗಿತ್ತು. ಬಳಿಕ ಸಮೀಪದ ಧನಲಕ್ಷಿ ಯ ಜ್ಯುವೆಲರಿ ಬೀಗ ಮುರಿದು ಏನೂ ಸಿಗದಾಗ ಎವರ್‌ ಗ್ರೀನ್‌ ಮೊಬೈಲ್‌ ಅಂಗಡಿಯ ಒಳ ಹೊಕ್ಕು ಸುಮಾರು ಒಂದು ಲಕ್ಷ ರೂ. ಮೌಲ್ಯದ ಸುಮಾರು 20 ಹೊಸ ಮೊಬೈಲ್‌ ಸೆಟ್‌ಗಳನ್ನು ಕಳವುಗೈದು ತಂಡವು ಪರಾರಿಯಾಗಿತ್ತು.

ಈ ತಂಡವು ಸರಕು ಸಾಗಿಸುವ ಲಾರಿಗಳನ್ನು ಹೊಂದಿದ್ದು ಮಂಗಳೂರಿಗೆ ಸರಕನ್ನು ತಂದು ವಾಪಸಾಗುವ ವೇಳೆ ಪಡುಬಿದ್ರಿಯಲ್ಲಿ ದರೋಡೆ ನಡೆಸಿತ್ತು. ಅಂದು ರಾತ್ರಿ 8 ಗಂಟೆ ಸುಮಾರಿಗೆ ಪಡುಬಿದ್ರಿಯ ಕರ್ಣಾಟಕ ಬ್ಯಾಂಕ್‌ ಎಟಿಎಂಗೆ ಈ ಗ್ಯಾಂಗ್‌ನ ಸದಸ್ಯರು ಬಂದು ಪರಿಸರವನ್ನು ಪರಿಶೀಲಿಸಿ ಬಳಿಕ ತಮ್ಮ ಲಾರಿಯೊಂದಿಗೆ ಟೋಲ್‌ಗೇಟ್‌
ಪ್ರದೇಶಕ್ಕೆ ಮರಳಿ ನಡುರಾತ್ರಿಯ ಅನಂತರ ಮಹಾರಾಷ್ಟ್ರಕ್ಕೆ ವಾಪಸು ತೆರಳುವಾಗ ಈ ಕೃತ್ಯ ಎಸಗಿದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪದವೀಧರ ಕಳ್ಳ !
ತಂಡದ ನಾಯಕ ವಿಭೀಷಣ್‌ ಕಾಳೆ ಸಹಿತ ನಾಲ್ವರು ಸದಸ್ಯರನ್ನು ಪೊಲೀಸರು ಇನ್ನಷ್ಟೇ ಬಂಧಿಸಬೇಕಿದೆ. ವಿಭೀಷಣ್‌ ಕಾಳೆ ಲಾರಿಹೊಂದಿದ್ದು ಸರಕು ಸಾಗಾಟ ವ್ಯವಹಾರ ನಡೆಸುತ್ತಿದ್ದನು. ಕೃತ್ಯಕ್ಕೆ ಬಳಸಿರುವ ಎರಡು ಲಾರಿಗಳು, ಮಿಕ್ಕುಳಿದ ಮೊಬೈಲ್‌ಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ. ಬಂಧಿತರೆಲ್ಲರೂ ತಾಂಡಾಗಳಲ್ಲಿ ವಾಸಿಸುವವರಾಗಿದ್ದು ಸುಭಾಷ್‌ ಕಾಳೆ ಪದವೀಧರನಾಗಿದ್ದಾನೆ. ಮಿಕ್ಕವರೆಲ್ಲರೂ ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದಿದ್ದಾರೆ. ಇವರೆಲ್ಲರೂ ಪಾರ್ದಿ ಜನಾಂಗದವರಾಗಿದ್ದು ಅಪರಾಧ  ಪ್ರಪಂಚದ ಸುತ್ತಮುತ್ತಲೇ ಇವರ ಜೀವನವು ಗಿರಕಿ ಹೊಡೆಯುತ್ತಿರುತ್ತದೆ. ಕಲಾಂಬ್‌ ವೃತ್ತದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿ ಕರ್ನಾಟಕ ಪೊಲೀಸರಿಗೆ ಈ ಕಾರ್ಯಾಚರಣೆ ವೇಳೆ ಉತ್ತಮ ಸಹಕಾರ ನೀಡಿದ್ದರು. ಹಾಗಾಗಿ ತುಂಬಾ ಪ್ರತಿರೋಧ ವ್ಯಕ್ತವಾದರೂ ತಾಂಡಾವನ್ನು ಪ್ರವೇಶಿಸಿ ಬಂಧಿಸಲು ಸಾಧ್ಯವಾಯಿತು ಎಂದು ಪಿಎಸ್‌ಐ ಸತೀಶ್‌ ಹೇಳಿದ್ದಾರೆ.

ಬಂಧಿತ ಶಂಕರ್‌ ಲಗಮನ್‌ ಕಾಳೆ ವಿರುದ್ಧ ಬೆಳಗಾವಿ ಜಿಲ್ಲೆಯ ಬಸವೇಶ್ವರ ಚೌಕಿ ಠಾಣೆಯಲ್ಲಿ ಹಾಗೂ ಹುಬ್ಬಳ್ಳಿ ಪೊಲೀಸ್‌ ಠಾಣೆಗಳಲ್ಲಿ ಕಳವು ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಈತ ಕೈಕೋಳ ಸಹಿತ ಪರಾರಿಯಾದ ದಾಖ ಲೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಂತೆ ಮಹಾರಾಷ್ಟ್ರಕ್ಕೆ ತೆರಳಿದ್ದ ಕಾಪು ಸಿಪಿಐ ಹಾಲಮೂರ್ತಿ ರಾವ್‌, ಪಡುಬಿದ್ರಿ ಪಿಎಸ್‌ಐ ಸತೀಶ್‌, ಸಿಬಂದಿ ಸುಧಾಕರ್‌, ರಾಜೇಶ್‌, ಪ್ರವೀಣ್‌ ಕುಮಾರ್‌, ಸಂದೀಪ್‌, ಪ್ರಕಾಶ್‌ ಕಾರ್ಯಾಚರಣೆಯಲ್ಲಿದ್ದರು.

ಮೊಬೈಲ್‌ ಜಾಡು ಹಿಡಿದು…
ಆರೋಪಿಗಳು ಕಳವುಗೈದ ಮೊಬೈಲ್‌ ಫೋನ್‌ಗಳನ್ನು ಮಹಾರಾಷ್ಟ್ರದಲ್ಲಿ ಬಳಸಲು ಯತ್ನಿಸಿದ್ದು, ಅದರ ಜಾಡನ್ನು ಹಿಡಿದು ಪೊಲೀಸರು ಅವರ ಬೆನ್ನುಹತ್ತಿದ್ದರು. ಪಡುಬಿದ್ರಿ ಪರಿಸರದ ಸಿಸಿ ಕೆಮರಾಗಳಲ್ಲಿ ದಾಖಲಾದ ದೃಶ್ಯಗಳೂ ಕಾರ್ಯಾಚರಣೆಗೆ ನೆರವಾದವು. ಎಟಿಎಂ ಭದ್ರತಾ ಸಿಬಂದಿ ಲಕ್ಷ್ಮಣ ಪೂಜಾರಿ ಅವರಿಂದ ದೋಚಿದ ಮೊಬೈಲ್‌ ಫೋನನ್ನು ಆರೋಪಿಗಳು ದಾರಿಯಲ್ಲೆಲ್ಲೋ ಎಸೆದು ಹೋಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next