ಬೀಳಗಿ: ದೈಹಿಕವಾಗಿ ಸದೃಢವಾಗಿರುವ ಯುವ ಜನಾಂಗವೇ ದೇಶದ ಅಮೂಲ್ಯ ಸಂಪತ್ತು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು. ಮರಗಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ದಸರಾ ಉತ್ಸವ ನಿಮಿತ್ತ ನ್ಯೂ ಡೈಮಂಡ್ ಕ್ರೀಡಾ ಅಮೇಚೂರ್ ಅಸೋಸಿಯೇಶನ್ ಹಾಗೂ ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ಎಂಪಿಎಸ್ ಶಾಲಾ ಮೈದಾನದ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ 65 ಕೆ.ಜಿ ಅಂತಾರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ದುಶ್ಚಟಮುಕ್ತ ಮತ್ತು ಸದೃಢ ಆರೋಗ್ಯಕ್ಕಾಗಿ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಗೆದ್ದರೆ ಹಿಗ್ಗಬಾರದು, ಸೋತರೆ ಕುಗ್ಗಬಾರದು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಕ್ರೀಡೆಯಲ್ಲಿ ನಿರ್ಣಾಯಕರ ನಿರ್ಣಯಕ್ಕೆ ಕ್ರೀಡಾ ಪಟುಗಳು ಬದ್ಧರಾಗಬೇಕು ಎಂದರು.
ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಬೀಳಗಿ ನಾಗರಿಕರು ಗ್ರಾಮೀಣ ಕ್ರೀಡೆ ಏರ್ಪಡಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬುತ್ತಿರುವುದು ಶ್ಲಾಘನೀಯ ಎಂದರು. ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ರಾಜ್ಯದ ಮಂಡ್ಯ, ಶಿರಸಿ, ಧಾರವಾಡ ಸೇರಿದಂತೆ ಇತರ ಭಾಗಗಳಿಂದ ಕಬಡ್ಡಿ ಪಂದ್ಯಾವಳಿಯಲ್ಲಿ 30 ತಂಡಗಳು ಭಾಗವಹಿಸಿದ್ದವು.
ಹುಚ್ಚಪ್ಪಯ್ಯನ ಮಠದ ಫಕ್ಕೀರಯ್ಯ ಸ್ವಾಮೀಜಿ, ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಎಸ್.ಎನ್. ಪಾಟೀಲ, ವಿ.ಜಿ. ರೇವಡಿಗಾರ, ಸಿಪಿಐ ರವಿಚಂದ್ರ ಡಿ.ಬಿ.,ಶ್ರೀಶೈಲ ದಳವಾಯಿ, ಸಿದ್ದು ಸಾರಾವರಿ, ಎ.ಎಂ. ಸೋಲಾಪುರ, ಸಿದ್ದು ಮಳಗಾಂವಿ, ಬಸನಗೌಡ ನಾಗನಗೌಡ್ರ, ನಾಗರಾಜ ಅಣ್ಣಿಗೇರಿ, ಶಿವಪ್ಪ ಗಾಳಿ, ಪ್ರವೀಣ ನರಿ, ರಮೇಶ ಹಡಪದ, ಸಿದರಾಮಪ್ಪ ಮುರನಾಳ, ಶಿವಪ್ಪ ಅವಟಿ, ಈರಯ್ಯ ವಸ್ತ್ರದ, ಉಮೇಶ ತೇಲಿ, ಶಂಕರ ಮೇಲ್ಗಡೆ ಇತರರು ಇದ್ದರು.