ಗದಗ: ಕೋವಿಡ್ 3 ನೇ ಅಲೆ ಹಾಗೂ ಒಮಿಕ್ರಾನ್ ಆತಂಕದಿಂದಾಗಿ ವೀಕೆಂಡ್ ಕರ್ಫ್ಯೂ ಮಧ್ಯೆಯೇ ನಗರದ ಜ.ತೋಂಟದಾರ್ಯ ಮಠದ ಅನುಭವ ಮಂಟಪ ಅಂತರ್ಜಾತಿ ಹಾಗೂ ಆದರ್ಶ ವಿವಾಹವೊಂದಕ್ಕೆ ಸಾಕ್ಷಿಯಾಯಿತು.
ನಗರದ ಈರಣ್ಣ ವಿರೂಪಾಕ್ಷಪ್ಪ ಬಡಿಗಣ್ಣವರ ಹಾಗೂ ಶಿಲ್ಪಾ ಭರಮಪ್ಪ ಅಂಕಲಿ ಎಂಬುವರರು ಕಳೆದ ಏಳೆಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವಕ, ಯುವತಿ ಅನ್ಯಜ್ಯಾತಿಗೆ ಸೇರಿದ್ದರಿಂದ ಅವರ ಪ್ರೇಮ ವಿವಾಹಕ್ಕೆ ಜಾತಿಯೇ ಅಡ್ಡಿಯಾಗಿತ್ತು. ಈರಣ್ಣ ಬಡಿಗಣ್ಣವರ ಅವರ ಕೋರಿಕೆ ಮೇರೆಗೆ ಲಿಂಗಾಯತ ಪ್ರಗತಿಶೀಲ ಸಂಘದ ಹಿರಿಯರು ಉಭಯ ಕುಟುಂಬಸ್ಥರನ್ನು ಒಪ್ಪಿಸಿ, ವಿವಾಹಕ್ಕೆ ಮುನ್ನುಡಿ ಬರೆದರು. ಅದರಂತೆ ಶನಿವಾರ ಜ|ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವ ಪರಂಪರೆಯ ವಚನ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಯಾವುದೇ ಮಂಗಳವಾದ್ಯ, ಮಂತ್ರ ಘೋಷಗಳ ಸದ್ದುಗದ್ದಲವಿಲ್ಲದೇ, ಕೇವಲ ಬಸವಾದಿ ಶರಣರ ವಚನಗಳ ಪಠಣದೊಂದಿಗೆ ನವ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಬಳಿಕ ಆಶೀರ್ವಚನ ನೀಡಿದ ಜ.ತೋಂಟದ ಸಿದ್ಧರಾಮ ಸ್ವಾಮೀಜಿ, ಸತಿ- ಪತಿಗಳು ಜೀವನದಲ್ಲಿ ಯಾವುದೇ ರೀತಿಯ ಸಂದೇಹಗಳಿಗೆ ಅವಕಾಶ ನೀಡದೇ, ಪರಸ್ಪರ ವಿಶ್ವಾಸ, ಪ್ರೀತಿಯಿಂದ ಸಾಗಬೇಕು. ಬಸವಾದಿ ಶಿವಶರಣರ ಆದರ್ಶದಂತೆ ಜೀವನ ಕಟ್ಟಿಕೊಳ್ಳಬೇಕು. ವಿವಾಹದ ದುಂದು ವೆಚ್ಚಗಳಿಗೆ ಕಾರಣವಾಗುವ ವೈದಿಕ ಆಚರಣೆಗಳನ್ನು ಬದಿಗೊತ್ತಿ, ಶರಣ ಸಂಸ್ಕೃತಿಯಂತೆ ಸರಳ ವಿವಾಹಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ದಂಪತಿಗಳ ಪಾಲಕರು, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳದ ಪ್ರಮುಖರು ಆದರ್ಶ ವಿವಾಹದಲ್ಲಿ ಪಾಲ್ಗೊಂಡು, ನೂತನ ವಧು-ವರರಿಗೆ ಶುಭಕೋರಿ, ಆರ್ಶೀವದಿಸಿದರು.