Advertisement

ರಾಜ್ಯದ 16 ಪಾತಕಿಗಳತ್ತ ಇಂಟರ್‌ಪೋಲ್‌ ಕಣ್ಣು

06:00 AM Jun 25, 2018 | |

ಬೆಂಗಳೂರು: ಭಯೋತ್ಪಾದನೆ, ಭೂಗತ ಚಟುವಟಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿ ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳು ಮತ್ತಿತರ ಕಡೆ ನೆಲೆಸಿ ಸಮಾಜಘಾತುಕ ಕಾರ್ಯ ಮುಂದುವರಿಸುತ್ತಿರುವ ರಾಜ್ಯದ 16 ಮಂದಿಯ ಮೇಲೆ ಇಂಟರ್‌ಪೋಲ್‌ ಕೆಂಗಣ್ಣು ಬೀರಿದ್ದು, ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಕರ್ನಾಟಕ ಸೇರಿದಂತೆ, ದೇಶಾದ್ಯಂತ ಭಯೋತ್ಪಾದನೆ  ಮತ್ತು ಭೂಗತ ಚಟುವಟಿಕೆಯನ್ನು ದೂರದ ದೇಶದಿಂದಲೇ ನಿಯಂತ್ರಿಸುತ್ತಿರುವ ಈ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಿಬಿಐ ಪಣತೊಟ್ಟಿದೆ. ಭಟ್ಕಳದ ಆರು ಮಂದಿ ಭಯೋತ್ಪಾದಕರ ಪಟ್ಟಿಯಲ್ಲಿದ್ದರೂ, ತಾಂತ್ರಿಕ ಕಾರಣಗಳಿಗಾಗಿ ಭಾರತಕ್ಕೆ ಬೇಕಾಗಿರುವ ಉಗ್ರ, ಬಾಂಬ್‌ ಸ್ಫೋಟ ಮತ್ತಿತರ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ರಿಯಾಜ್‌ ಭಟ್ಕಳ ಇಂಟರ್‌ಪೋಲ್‌ ಪಟ್ಟಿಯಲ್ಲಿಲ್ಲ. ಆದರೆ, ಆತನ ಸೋದರ ಇಕ್ಬಾಲ್‌ ಭಟ್ಕಳ ಹೆಸರು ಪಟ್ಟಿಯಲ್ಲಿದೆ. ಈ ಆರು ಮಂದಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಅವರ ಪತ್ತೆಗೆ ಸಿಬಿಐನ ಇಂಟರ್‌ಪೋಲ್‌ ವಿಭಾಗ ಅಂತಾರಾಷ್ಟ್ರೀಯ ಪೊಲೀಸರ ಸಹಾಯ ಯಾಚಿಸಿದೆ.

ರಿಯಾಜ್‌ ಭಟ್ಕಳ ವಿರುದ್ಧ ಪ್ರಕಣಗಳನ್ನು, ದೋಷಾರೋಪಗಳನ್ನು ಸರಿಯಾಗಿ ಆಂಗ್ಲ ಭಾಷೆಗೆ ತರ್ಜುಮೆ ಮಾಡಲಾಗದಿರುವುದು ಮತ್ತು ದೇಶಾದ್ಯಂತ ಇರುವ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯದಲ್ಲಿ ಕೊರತೆ ಇರುವುದು ಆತನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡಲು ಆಗದಿರುವುದಕ್ಕೆ ಕಾರಣ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲಾ 6 ಆರೋಪಿಗಳು ಇಂಡಿಯನ್‌ ಮುಜಾಹಿದ್ದೀನ್‌, ಲಷ್ಕರೆ ಇ ತೊಯ್ಬಾ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಐಸಿಸ್‌ ಉಗ್ರ ಸಂಘಟನೆಯತ್ತಲೂ ಒಲವು ಹೊಂದಿದ್ದಾರೆ. ದೆಹಲಿ, ಬೆಂಗಳೂರು, ಹೈದರಾಬಾದ್‌, ಮುಂಬೈ ಮೊದಲಾದ ನಗರಗಳಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಗಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಜತೆಗೆ ಅಂತಹ ಪ್ರಕರಣಗಳನ್ನು ಇನ್ನೂ ನಡೆಸಲು ಸಂಚು ರೂಪಿಸುತ್ತಿರುವುದು ಗುಪ್ತಚರ ಮಾಹಿತಿಗಳಿಂದ ದೃಢಪಟ್ಟಿದೆ ಎಂದು ಅಂತರಿಕ ಭದ್ರತಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಪ್ರಮುಖವಾಗಿ ರಾಜ್ಯ ಕರಾವಳಿ ಮತ್ತಿತರ ಕಡೆಯ ನಿವಾಸಿಗಳಾಗಿರುವ ಈ 15 ಮಂದಿ ವಿರುದ್ಧ ಭಾರತ ಸರಕಾರದ ಗೃಹ ಸಚಿವಾಲಯ ರೆಡ್‌ಕಾರ್ನರ್‌ ನೊಟೀಸ್‌ ಜಾರಿಗೊಳಿಸಿದೆ. ಅಕ್ರಮ ಶಸ್ತ್ರ, ಖೋಟಾನೋಟು, ಸುಪಾರಿ ಕೊಲೆ ಸೇರಿದಂತೆ ಭೂಗತ ಚಟುವಟಿಕೆಗಳಲ್ಲಿ ತೊಡಗಿರುವ 10 ಮಂದಿಯೂ ಈ ಪಟ್ಟಿಯಲ್ಲಿದ್ದು, ಕೆಲವರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು ಎಂದು ಸಿಬಿಐ ಇಂಟರ್‌ಪೋಲ್‌ ಮೂಲಗಳು ತಿಳಿಸಿವೆ.

ಉಗ್ರ ಚಟುವಟಿಕೆ:
ಭಾರತದಲ್ಲಿ ಉತ್ತರಪ್ರದೇಶದ ಆಝಂಗಡ ಬಳಿಕ ಕರ್ನಾಟಕದ ಭಟ್ಕಳ ಪ್ರದೇಶ ಹೆಚ್ಚು ಭಯೋತ್ಪಾದಕರನ್ನು ಸೃಷ್ಟಿಸಿದೆ ಎಂದೇ ಹೇಳಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು, ಇಲ್ಲಿನ ಮುಸ್ಲಿಂ ಯುವಕರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ, ಉಗ್ರ ಸಂಘಟನೆಗಳಿಗೆ ಭಾರತ ಮತ್ತು ಪಾಕಿಸ್ತಾನದಲ್ಲಿ ತರಬೇತಿಗೆ ನೇಮಿಸುವುದು ಮತ್ತಿತರ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಇಂಟರ್‌ಪೋಲ್‌ ಪರಿಧಿಗೆ ಬಂದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ  ಅಬ್ದುಲ್‌ ಖಾದರ್‌ ಸುಲ್ತಾನ್‌ ಅರ್ಮಾರ್‌ (42), ಸಲೀಮ್‌ ಇಷಾಖೀ (40), ಮೊಹಮ್ಮದ ಶಫಿ ಅರ್ಮಾರ್‌ (30), ಹುಸೇನ್‌ ಫ‌ರ್ಹಾನ್‌ (32), ಇಕ್ಬಾಲ್‌ ಭಟ್ಕಳ (49) ಹಾಗೂ ಆಫೀಫ್ ಜಿಲಾನಿ (44).

ಭೂಗತ ಲೋಕ:
ದಕ್ಷಿಣ ಕನ್ನಡದ ಬಾಲಕೃಷ್ಣ ಶೆಟ್ಟಿ (45), ಮಂಗಳೂರಿನ ಯೋಗೀಶ್‌ (46),   ಕಿನ್ನಿಗೋಳಿಯ ಅಲ್ಪಾಫ್ ಬಾವಾ (45), ತೆಕ್ಕಟ್ಟೆಯ ಅಬು ಮೊಹಮ್ಮದ್‌ (65), ಉಡುಪಿಯ ಮೊಯಿದಿನಬ್ಬ ಬ್ಯಾರಿ (45), ಉಡುಪಿ ಉಪ್ಪೂರಿನ ಯೋಗೇಶ್‌ ಬಂಗೇರ ಅಲಿಯಾಸ್‌ ಕಳಿ ಯೋಗೇಶ್‌ (45) ಅಕ್ರಮ ಶಸ್ತ್ರಾಸ್ತ್ರ, ಕಳ್ಳಸಾಗಣಿಕೆ, ಖೋಟಾನೋಟು, ಅಪಹರಣ, ಬೆದರಿಸಿ ಸುಲಿಗೆ ಮತ್ತಿತರ ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಡ್ಯದ ಸಯ್ಯದ್‌ ಆಜಾಜ್‌ ಪಾಷ,  ಶಿವಮೊಗ್ಗ ಮೂಲದ ಬೆಂಗಳೂರು ಭೂಗತ ಲೋಕದ ಹೆಬ್ಬೆಟ್ಟು ಮಂಜ (38), ಬೆಂಗಳೂರಿನ ಮೊಹಮ್ಮದ್‌ ಯಾಹ್ಯಾ(46) ಮತ್ತು ಹಸನ್‌ ಲುಕ್ಮನ್‌ ಶೇಖ್‌ (36) ಕೂಡಾ ರೆಡ್‌ಕಾರ್ನರ್‌ ನೋಟಿಸ್‌ ಪಟ್ಟಿಯಲ್ಲಿದ್ದಾರೆ.

ಭಟ್ಕಳಿಗರು/ ಭಯೋತ್ಪಾದನಾ ಚಟುವಟಿಕೆ
ಹುಸೇನ್‌ ಫ‌ರ್ಹಾನ್‌ ಮೊಹಮ್ಮದ್‌ (32)
-ಭಯೋತ್ಪಾದನಾ ಚಟುವಟಿಕೆ, ಅದಕ್ಕಾಗಿ ಹಣ ಸಂಗ್ರಹ, ಯುವಕರ ನೇಮಕಾತಿ
ಮೊಹಮ್ಮದ್‌ ಶಫಿ ಆರ್ಮಾರ್‌ (30)
-ಭಯೋತ್ಪಾದನಾ ಸಂಚು ಮತ್ತು ಕೃತ್ಯಗಳು,  ಭಯೋತ್ಪಾದನಾ ಸಂಘಟನೆಗಳಿಗೆ ಯುವಕರ ನೇಮಕ, ಮತ್ತು ತರಬೇತಿ.
ಸಲೀಮ್‌ ಇಶಾಖೀ- (40)
-ಭಯೋತ್ಪಾದನೆ,  ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಇತ್ಯಾದಿ.
ಅಬ್ದುಲ್‌ ಖಾದರ್‌ ಸುಲ್ತಾನ್‌ ಆರ್ಮಾರ್‌ (42)
– ಭಯೋತ್ಪಾದನೆ, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ
ಇಕ್ಬಾಲ್‌ ಭಟ್ಕಳ (49)
– ಭಯೋತ್ಪಾದನೆ, ಕೊಲೆ, ಸ್ಫೋಟಕಗಳ ಬಳಕೆ
ಜಿಲಾನಿ ಅಫೀಫ್ (44)
-ಭಯೋತ್ಪಾದನೆ, ಕೊಲೆ, ಸ್ಫೋಟಕಗಳು ಮತ್ತು ಮಾರಕಾಸ್ತ್ರಗಳ ಪೂರೈಕೆ
ಭೂಗತ ಚಟುವಟಿಕೆ/ಖೋಟಾನೋಟು/ಅಕ್ರಮ ಶಸ್ತ್ರಾಸ್ತ್ರ
ಯೋಗೇಶ್‌ ಬಂಗೇರ(45)- ಉಪ್ಪೂರು-ಉಡುಪಿ
ಭೂಗತ ಚಟುವಟಿಕೆ, ಬೆದರಿಸಿ ಸುಲಿಗೆ, ಕೊಲೆಯತ್ನ
ಯೋಗೀಶ್‌ (46)- ಮಂಗಳೂರು
-ಗುಂಪುಘರ್ಷಣೆ, ದೊಂಬಿ, ಕೊಲೆಗೆ ಯತ್ನ, ಮಾರಕಾಸ್ತ್ರಗಳ ಸಂಗ್ರಹ , ಅಕ್ರಮ ಬಂದೂಕು ಸಾಗಾಟ
ಅಲ್ತಾಫ್ ಬಾವಾ (45)- ಕಿನ್ನಿಗೋಳಿ, ಮಂಗಳೂರು
ಅಲ್ತಾಫ್, ರಾಕೇಶ್‌ ಎಂಬ ಹೆಸರುಗಳಿಂದಲೂ ವ್ಯವಹಾರ
-ಭೂಗತ ಚಟುವಟಿಕೆ, ಬೆದರಿಸಿ ಸುಲಿಗೆ, ಬಂದೂಕು ಮತ್ತಿತರ ಮಾರಕಾಸ್ತ್ರಗಳ ಸಂಗ್ರಹ ಇತ್ಯಾದಿ.
ಸೈಯ್ಯದ್‌ ಅಜಾಜ್‌ ಪಾಷಾ (49)- ಮಂಡ್ಯ
– ಭೂಗತ ಚಟುವಟಿಕೆ
ಹಸನ್‌ ಲುಕ್ಮನ್‌ ಶೇಖ್‌ (36)- ಕರ್ನಾಟಕ
-ಖೋಟಾನೋಟು ಸರಬರಾಜು, ಅಪರಾಧ ಸಂಚು, ಭೂಗತ ಚಟುವಟಿಕೆ
ಮೊಯಿದಿನಬ್ಬ ಬ್ಯಾರಿ (45)- ಉಡುಪಿ
– ಖೋಟಾನೋಟು ಸರಬರಾಜು, ವಂಚನೆ, ಅಪರಾಧ ಸಂಚು
ಹೆಬ್ಬೆಟ್ಟು ಮಂಜ (38): ಊರು: ಶಿವಮೊಗ್ಗ.
-ಭೂಗತ ಚಟುವಟಿಕೆ, ಲಂಬು ನಟರಾಜ್‌, ಸ್ಲಮ್‌ ಬಾಲಾ ಮತ್ತು ಸೋಮಶೇಖರ ಎಂಬವರ ಕೊಲೆ ಸಂಚು.
ಬಾಲಕೃಷ್ಣ ಶೆಟ್ಟಿ (45): ಊರು- ದಕ್ಷಿಣ ಕನ್ನಡ.
– ಅಕ್ರಮವಾಗಿ ಮತ್ತು ಪರವಾನಿಗೆಯಿಲ್ಲದ ಹೊರದೇಶದ ಪಿಸ್ತೂಲ್‌/ರಿವಾಲ್ವರ್‌ಗಳ ಸಾಗಾಟ
ವಂಚನೆ/ ಫೋರ್ಜರಿ:
ಮೊಹಮ್ಮದ್‌ ಯಾಹ್ಯಾ (46): ಬೆಂಗಳೂರು
-ವಂಚನೆ, ಫೋರ್ಜರಿ, ಅಪರಾಧ ಸಂಚು
ಅಬು ಮೊಹಮ್ಮದ್‌ (65): ಊರು- ತೆಕ್ಕಟ್ಟೆ.
ದೋಷಾರೋಪ: ಅಪರಾಧ ಸಂಚು, ವಂಚನೆ, ಕಳ್ಳತನ ವಸ್ತುಗಳ ವಿಲೇವಾರಿ, ಫೋರ್ಜರಿ, ನಕಲಿ ಬ್ಯಾಂಕ್‌ ಖಾತೆ

– ನವೀನ್‌ ಅಮ್ಮೆಂಬಳ
 

Advertisement

Udayavani is now on Telegram. Click here to join our channel and stay updated with the latest news.

Next