Advertisement

ಉತ್ತಮ ಭವಿಷ್ಯಕ್ಕೆ ಪೂರಕ ಇಂಟರ್ನ್ ಶಿಪ್ 

07:12 AM Feb 27, 2019 | |

ವಿದ್ಯಾರ್ಥಿಗಳಲ್ಲಿ ಕೆಲಸದ ತಿಳಿವಳಿಕೆ, ಕೌಶಲ ರೂಢಿಸಿಕೊಳ್ಳಲು ಇಂಟರ್ನ್ ಶಿಪ್‌ ಅತ್ಯುತ್ತಮ ವೇದಿಕೆ. ಹಾಗಾಗಿ ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳು ಇಂಟರ್ನ್ ಶಿಪ್‌ ಮಾಡುವ ಕಡ್ಡಾಯ ಮಾರ್ಗಸೂಚಿ ಸಿದ್ಧಗೊಳಿಸುತ್ತಿವೆ. ಕಲಿಯುವಾಗಲೇ ಕೆಲಸದ ಬಗೆಗಿನ ಜ್ಞಾನ ರೂಢಿಸಿಕೊಂಡು ಮುಂದೆ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ಇದು ಸಹಕಾರಿ.

Advertisement

.ಸಾಧ್ಯವಾದಷ್ಟು ಕೆಲಸವನ್ನು ಕಲಿಯಿರಿ. ನೀವು ಮಾಡುವ ತಪ್ಪುಗಳಿಗೆ ಹಿರಿಯರು ಬೈದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ತಪ್ಪಾಗದಂತೆ ನಿಗಾವಹಿಸಿ.

ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜತೆಗೆ ಇತರ ಕೌಶಲ ರೂಢಿಸಿಕೊಳ್ಳುವುದು ಇಂದಿನ ಅವಶ್ಯ. ಕಾರ್ಪೊರೇಟ್‌ ವಲಯದಲ್ಲಿ ಕೌಶಲದ ಜತೆಗೆ ಅನುಭವಕ್ಕೆ ಮನ್ನಣೆ ನೀಡುವುದರಿಂದ ಕಾಲೇಜು ಹಂತದಲ್ಲೇ ಕೆಲಸದ ಅನುಭವದಿಂದ ತಮ್ಮನ್ನು ತಾವೇ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್‌ ನೆರವಾಗುತ್ತದೆ.

ಈಗೀಗ ಬಹುತೇಕ ಶೈಕ್ಷಣಿಕ ಕೋರ್ಸ್‌ಗಳ ಅಂತಿಮ ವರ್ಷದಲ್ಲಿ ಇಂಟರ್ನ್ ಶಿಪ್‌ ಅನ್ನುವುದು ಕಡ್ಡಾಯವಾಗುತ್ತಿದೆ. ವಿದ್ಯಾರ್ಥಿಗಳು ಕನಿಷ್ಠ ಎರಡು ತಿಂಗಳಾದರೂ ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಳ್ಳಲೇಬೇಕು ಎಂಬ ಕಡ್ಡಾಯ ಮಾರ್ಗಸೂಚಿಯನ್ನು ಕಾಲೇಜು ಸಿದ್ಧಗೊಳಿಸುತ್ತಿದೆ. ವಿದೇಶದಲ್ಲಿ ಕಲಿಕೆಯ ಜತೆಗೆ ಗಳಿಕೆ ಎಂಬ ಪರಿಕಲ್ಪನೆ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಅಂದರೆ ಕಲಿಯುವಾಗಲೇ ಉದ್ಯೋಗ ಮಾಡಲು ಅವಕಾಶ ಇದೆ. ಆದರೆ ನಮ್ಮ ದೇಶದಲ್ಲಿ ಪದವಿ ಬಳಿಕ ಉದ್ಯೋಗ ಎಂಬುದು ಅಚ್ಚೊತ್ತಲಾಗಿದೆ. ತಾಂತ್ರಿಕತೆ, ಆಧುನಿಕತೆಯ ಮುಂದುವರಿದ ಭಾಗವಾಗಿ ಕಾರ್ಪೊರೇಟ್‌ ಸಂಸ್ಥೆಗಳು ವೃತ್ತಿಪರ ಶಿಕ್ಷಣದ ಜತೆಗೆ ಕೆಲಸದ ಅನುಭವ ಕೇಳುವುದರಿಂದ ಇಂಟೆರ್ ಶಿಪ್ ಗೆ ಕಾಲೇಜುಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಅನುಭವ, ಕೌಶಲ ವೃದ್ಧಿ
ನಾಲ್ಕು ಗೋಡೆಗಳ ನಡುವೆ ವೃತ್ತಿಪರ ಶಿಕ್ಷಣವನ್ನು ಪಡೆದರೂ ಉದ್ಯೋಗಕ್ಕೆ ಕಚೇರಿಗಳಿಗೆ ಹೋದಾಗ ಅನುಭವದ ಕುರಿತಾದ ಪ್ರಶ್ನೆ ಕೇಳುವುದು ಸಹಜ. ಒಂದು ವಾಕ್ಯ ಮಾಡಲು ಪದಗಳ ಜ್ಞಾನಗಳಾದರೂ ಇರಬೇಕು ಎಂಬುದುಇಂಟೆರ್ ಶಿಪ್ ಮಾಡುವುದರ ತಾತ್ಪರ್ಯ. ಕೆಲಸಕ್ಕೆ ಹೋದಾಗ ಕೆಲಸ ಕುರಿತಾದ ಹೆಚ್ಚಿನ ಮಾಹಿತಿ ಇರಬೇಕು ಎನ್ನುವ ಕಾರಣಕ್ಕಾಗಿ ಕಲಿಯುತ್ತಿರುವಾಗಲೇ ಇಂಟೆರ್ ಶಿಪ್ ಗೆ ಮಹತ್ವ ನೀಡಲಾಗುತ್ತದೆ. ಥಿಯರಿ ಜತೆಗೆ ಕಂಪೆನಿಗಳಿಗೆ ಬೇಕಾದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ಇಂಟೆರ್ ಶಿಪ್ ಸಹಕರಿಸುತ್ತದೆ. ಪಾಠ ಕಲಿಯುವುದರ ಜತೆಗೆ ಕೆಲಸದ ಅನುಭವವನ್ನೂ ಶಿಕ್ಷಣ ಪಡೆಯುತ್ತಿರುವ ಅವಧಿಯಲ್ಲೇ ಪಡೆಯಲು ನೆರವಾಗುತ್ತದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿತ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂಟರ್ನ್ಶಿಪ್‌ ನೆರವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಕೌಶಲ ಬೆಳೆಸಿಕೊಂಡು, ಕಲಿಕೆಯೊಂದಿಗೆ ಉದ್ಯೋಗದ ಕುರಿತಾದ ಜ್ಞಾನ ಇಂಟೆರ್ ಶಿಪ್ ನಿಂದ ಸಿಗುತ್ತದೆ. ಹಾಗಾಗಿ ಬಹುತೇಕ ಕಂಪೆನಿಗಳು ವಿದ್ಯಾರ್ಥಿಗಳಿಗೆ ಇಂಟೆರ್ ಶಿಪ್ ಮಾಡಲು ಅವಕಾಶ ಕಲ್ಪಿಸುತ್ತಿವೆ.

Advertisement

ಗಮನಹರಿಸಬೇಕಾದ ವಿಷಯಗಳು
ಇಂಟೆರ್ ಶಿಪ್  ಟೈಂಪಾಸ್‌ ಅವಧಿಯಾಗದೇ, ಅದು ತರಬೇತಿ ಪಡೆಯುವ, ವೃತ್ತಿ ಬದುಕಿನ ಕುರಿತು ಜ್ಞಾನ ಹೆಚ್ಚಿಸಿಕೊಳ್ಳುವ ಅವಧಿಯಾಗಬೇಕು. ಕಾಲೇಜಿನಲ್ಲಿ ಕಲಿತದ್ದಕ್ಕೂ ಇಂಟರ್ನ್ಶಿಪ್‌ನಲ್ಲಿ ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಹೀಗಾಗಿ ಇಂಟರ್ನ್ಶಿಪ್‌ ಅನ್ನುವುದು ವೃತ್ತಿ ಬದುಕಿನತ್ತ ನೀಡುವ ಮೊದಲ ಹೆಜ್ಜೆಯಾಗಿದೆ.

· ಇಂಟರ್ನಿಗಳನ್ನು ಯಾವುದೇ ಕಚೇರಿಯಲ್ಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ತಪ್ಪು ಮಾಡಿದಾಗ ಜೋರು ಮಾಡಿ ತಿದ್ದಿ ಸರಿಮಾಡುತ್ತಾರೆ. ಇದನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೇ ಭವಿಷ್ಯದ ಕುರಿತಾಗಿ ಚಿಂತಿಸಬೇಕು.

· ಇಂಟೆರ್ ಶಿಪ್  ನಲ್ಲಿ ಯಾರೂ ಕರೆದು ಕೆಲಸ ಕೊಡುವುದಿಲ್ಲ. ಎಷ್ಟೋ ಬಾರಿ ನೀವೇ ಅವಕಾಶ
ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ನಿಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಕೆಲಸವನ್ನು ಶ್ರದ್ಧೆ, ಉತ್ಸಾಹದಿಂದ ಕಲಿಯಿರಿ.

· ಇಂಟರ್ನಿ ಆಗಿ ಸೇರಿದ ಕಂಪೆನಿಯ ಸಹೋದ್ಯೋಗಿಗಳೊಂದಿಗೆ ಫ್ರೆಂಡ್ಲಿ ಆಗಿರುವುದು ಒಳ್ಳೆಯದೆ. ಆದರೆ, ಸಹೋದ್ಯೋಗಿಗಳು ನಿಮ್ಮ ಸಹೋದರರು ಅಥವಾ ಗೆಳೆಯರು ಅಲ್ಲ ಎನ್ನುವುದು ನೆನಪಿರಲಿ. ಹಾಗಾಗಿ ಕಚೇರಿಯಲ್ಲಿ ವರ್ತನೆ ಮೇಲೆ ನಿಯಂತ್ರಣವಿರಲಿ. ಕಚೇರಿ ನಿಯಮಗಳನ್ನು ಪಾಲಿಸಿ.

· ಇಂಟರ್ನಿಯಾಗಿ ಕಂಪೆನಿಗೆ ತೆರಳಿದರೆ ಆ ಕಂಪೆನಿ ನಿಮಗೆ ಕೆಲಸ ಕೊಡುತ್ತದೆ ಎಂಬ ನಂಬಿಕೆ ಇಡಬೇಡಿ. ಹಾಗಾಗಿ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜತೆ ನಿಮ್ಮ ವರ್ತನೆ ಗೌರವಯುತವಾಗಿರಲಿ. 

ಇಂಟರ್ನ್ ಶಿಪ್‌ ಸದ್ಬಳಕೆ ಮಾಡಿಕೊಳ್ಳಿ 
ಕಲಿಕೆ ಅವಧಿಯಲ್ಲಿ ಇಂಟರ್ನ್ ಶಿಪ್‌ ಕಡ್ಡಾಯ ಎಂಬ ಕಾರಣಕ್ಕಾಗಿ ಇಂಟರ್ನ್ ಶಿಪ್‌ ಮಾಡಬೇಡಿ. ನೀವು ಇಡುವ ಮೊದಲ ಹೆಜ್ಜೆ ನಿಮ್ಮ ಜೀವನದ ಪಥವನ್ನೇ ಬದಲಾಯಿಸಬಹುದು. ಆ ಕಾರಣಕ್ಕಾಗಿ ಇಂಟರ್ನ್ ಶಿಪ್‌ಗೆ ಹೋದಾಗ ತರಗತಿಗಳಲ್ಲಿ ಪಾಠ ಕೇಳುವುದಕ್ಕಿಂತಲೂ ಹೆಚ್ಚು ತಾಳ್ಮೆ, ಸಂಯಮ ಬೆಳೆಸಿಕೊಳ್ಳಿ. ವೇಗವಾಗಿ ಚುರುಕಾಗಿ ಕೆಲಸ ಕಲಿತುಕೊಳ್ಳಿ. ನಿಮ್ಮ ಕೆಲಸದ ವೈಖರಿ ಕಂಡು ಆ ಕಂಪೆನಿಯೇ ಉದ್ಯೋಗ ನೀಡಬಹುದು.

ಕಂಪೆನಿ ಆಯ್ಕೆ  ಸರಿಯಾಗಿರಲಿ 
ಉತ್ತಮ ಸಂಸ್ಥೆಯೊಂದರಲ್ಲಿ ಇಂಟರ್ನ್ ಶಿಪ್‌ ಪೂರೈಸಬೇಕು ಎನ್ನುವುದು ಎಲ್ಲ ವಿದ್ಯಾರ್ಥಿಗಳ ಬಯಕೆ. ಕೆಲವು ಕಾಲೇಜುಗಳೇ ಇಂಟರ್ನ್ ಶಿಪ್‌ ಗೆ ವ್ಯವಸ್ಥೆ ಮಾಡುತ್ತವೆ. ಇನ್ನೂ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳೇ ಸ್ವತಃ ಉತ್ತಮ ಸಂಸ್ಥೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಆ ಸಂದರ್ಭ ಹಿರಿಯರ, ಶಿಕ್ಷಕರ ಸಲಹೆ ಪಡೆದು ಮುಂದುವರಿಯುವುದು ಉತ್ತಮ. ಮಾಡುತ್ತಿರುವ ಕೋರ್ಸ್‌ಗೆ ಸಂಬಂಧಿಸಿದ ಕಂಪೆನಿಗಳು ಎಲ್ಲಿವೆ? ಆ ಕಂಪೆನಿಯ ಸದ್ಯದ ಸ್ಥಿತಿ, ಅಲ್ಲಿ ಇಂಟರ್ನಿಗಳಿಗೆ ಕೆಲಸ ತಿಳಿಸಿಕೊಡಲು ಅವಕಾಶವಿದೆಯೇ ಎಂಬುದರ ಕುರಿತು ಮೊದಲೇ ತಿಳಿದುಕೊಂಡಿರಬೇಕು. ಇದ್ಯಾವುದರ ಮಾಹಿತಿ ಪಡೆಯದೇ ಕಂಪೆನಿ ಸೇರಿಕೊಂಡರೆ ತಮ್ಮ ಜೀವನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಂಡಂತಾಗುತ್ತದೆ.

ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next