Advertisement

ಕಲಾ, ವಾಣಿಜ್ಯ ಪದವಿಗೂ ಇಂಟರ್ನ್ ಶಿಪ್‌ !

01:01 AM Jul 08, 2022 | Team Udayavani |

ಬೆಂಗಳೂರು: ಇಲ್ಲಿಯ ವರೆಗೆ ತಾಂತ್ರಿಕ ಕೋರ್ಸ್‌ಗಳಿಗೆ ಮಾತ್ರ ಇದ್ದ ಇಂಟರ್ನ್ ಶಿಪ್‌ ಮತ್ತು ಅಪ್ರಂಟ್‌ಶಿಪ್‌ ತರಬೇತಿಯನ್ನು ಇನ್ನು ಮುಂದೆ ತಾಂತ್ರಿಕೇತರ ಕೋರ್ಸ್‌ಗಳಿಗೂ ವಿಸ್ತರಿಸಲಾಗುತ್ತಿದೆ.

Advertisement

ಎಂಜಿನಿಯರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಕೊನೆಯ ಸೆಮಿಸ್ಟರ್‌ನಲ್ಲಿ ವಿವಿಧ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್‌ ಮೂಲಕ ಉದ್ಯೋಗ ಹುಡುಕಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಈವರೆಗೆ ಈ ಸೌಲಭ್ಯ ಇರಲಿಲ್ಲ.

ಉನ್ನತ ಶಿಕ್ಷಣ ಇಲಾಖೆಯು ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಲಾಜಿಸ್ಟಿಕ್‌ ಕಂಪೆನಿಗಳಲ್ಲಿ ತರಬೇತಿಗೆ ಕಳುಹಿಸಲು ನಿರ್ಧರಿಸಿದೆ. ಈ ಸಂಬಂಧ ನೃಪತುಂಗ, ಮಹಾರಾಣಿ ಮತ್ತು ಮಂಡ್ಯ ಕ್ಲಸ್ಟರ್‌ ವಿಶ್ವವಿದ್ಯಾಲಯಗಳು ಲಾಜಿಸ್ಟಿಕ್‌ ಕ್ಷೇತ್ರದ ಕೌಶಲ ಪರಿಷತ್ತಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ.

ಒಂದು ವರ್ಷ ತರಬೇತಿ :

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020) ಅಡಿ ಈ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಲಾಜಿಸ್ಟಿಕ್‌ ಕ್ಷೇತ್ರದ ಆವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿಯೇ ರೂಪಿಸಲಾಗುತ್ತದೆ. ಲಾಜಿಸ್ಟಿಕ್‌ ಕ್ಷೇತ್ರದ ವತಿಯಿಂದಲೂ ಉಪನ್ಯಾಸಕರಿಗೆ ತರಬೇತಿ ಮತ್ತು ಪಠ್ಯಕ್ರಮ ರೂಪಿಸಿಕೊಡಲಾಗುತ್ತದೆ.

Advertisement

ಮೂರು ವರ್ಷಗಳ ಪದವಿಯಲ್ಲಿ ಮೊದಲ ಎರಡು ವರ್ಷ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ. 3ನೇ ವರ್ಷ ಅಪ್ರಂಟಿಸ್‌ಶಿಪ್‌ ತರಬೇತಿ ನೀಡಲಾಗುತ್ತದೆ. 12 ತಿಂಗಳ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕ 7,500 ಗೌರವಧನ ಕೂಡ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ನೃಪತುಂಗದಲ್ಲಿ  60 ವಿದ್ಯಾರ್ಥಿಗಳಿಗೆ ಅವಕಾಶ :

ಏವಿಯೇಶನ್‌ ಮತ್ತು ಏರ್‌ ಕಾರ್ಗೋದ ಚೆನ್ನೈ ಕಂಪೆನಿಯೊಂದರ ಜತೆ ನೃಪತುಂಗ ವಿ.ವಿ. ಒಡಂಬಡಿಕೆ ಮಾಡಿಕೊಂಡಿದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನದಲ್ಲಿ ಪಿಯು ಮುಗಿಸಿದ ವಿದ್ಯಾರ್ಥಿಗಳು ಅರ್ಹತೆ ಹೊಂದಿರುತ್ತಾರೆ.

ಇವರು ಮೊದಲ ನಾಲ್ಕು ಸೆಮಿಸ್ಟರ್‌ ಕಾಲೇಜಿನಲ್ಲಿ ಮತ್ತು 5, 6ನೇ ಸೆಮಿಸ್ಟರನ್ನು ಕಂಪೆನಿಯಲ್ಲಿ ಕಲಿಯಲಿದ್ದಾರೆ. 1 ವರ್ಷ ಸಂಸ್ಥೆಯಲ್ಲಿ ಕಲಿತ ಬಳಿಕ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು 3 ವರ್ಷ ಮುಗಿದ ಅನಂತರ ಅಂತಿಮವಾಗಿ ಬಿಬಿಎ ಲಾಜಿಸ್ಟಿಕ್‌ ಪದವಿ ನೀಡಲಾಗುತ್ತದೆ. ಆರಂಭಿಕ ವರ್ಷದಲ್ಲಿ  60 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ನೃಪತುಂಗ ವಿ.ವಿ. ಕುಲಪತಿ ಪ್ರೊ| ಶ್ರೀನಿವಾಸ ಎಸ್‌. ಬಳ್ಳಿ.

ಸರಕು ಸಾಗಣೆ ಕ್ಷೇತ್ರದಲ್ಲಿ  ಸಾಕಷ್ಟು ಉದ್ಯೋಗ ಅವಕಾಶಗಳು ಇವೆ. ತಾಂತ್ರಿಕೇತರ ಕೋರ್ಸ್‌ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು  ಕಂಪನಿಗಳ ಬೇಡಿಕೆ ತಕ್ಕಂತೆ ಕಾಲೇಜಿನಲ್ಲಿ ರೂಪಿಸಿ ಉದ್ಯೋಗ ಪಡೆಯುವಂತೆ ಮಾಡುವುದು ನಮ್ಮ  ಗುರಿಯಾಗಿದೆ. ಡಾ| ಸಿ.ಎನ್‌. ಅಶ್ವತ್ಥ ನಾರಾಯಣ,ಉನ್ನತ ಶಿಕ್ಷಣ ಸಚಿವ

- ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next