Advertisement

ಹಳ್ಳಿಗಳಲ್ಲಿ ಎಟುಕದ ಇಂಟರ್ನೆಟ್‌ ಸಂಪರ್ಕ

12:04 AM May 26, 2020 | Sriram |

ಮುಂಡಾಜೆ: ಜಗತ್ತು 5ಜಿಯತ್ತ ಹೊರಗಳುತ್ತಿದ್ದರೂ, ಹಳ್ಳಿಗಳಲ್ಲಿ ಮಾತ್ರ ಇಂಟರ್ನೆಟ್‌ ಸಂಪರ್ಕ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ.

Advertisement

ಸ್ಥಿರ ದೂರವಾಣಿ ಮೂಲಕ, ಬಳಿಕ ಮೊಬೈಲ್‌ ಇಂಟರ್ನೆಟ್‌ ಯುಗಕ್ಕೆ ಬಂದರೂ ಅದು ನಗರಕ್ಕೆ ಮಾತ್ರ ಸೀಮಿತವಾಗಿದೆ.

ಸ್ಪೀಡ್‌, ಸಂಪರ್ಕ ಸಮಸ್ಯೆ
ಹಳ್ಳಿಗಳಲ್ಲಿ ಸ್ಥಿರ ದೂರವಾಣಿ ಮೂಲಕ ಬ್ರಾಡ್‌ಬ್ಯಾಂಡ್‌, ಮೊಬೈಲ್‌ ಇಂಟರ್ನೆಟ್‌ ಸಂಪರ್ಕಗಳಿವೆ. ಆದರೆ ಇವುಗಳಲ್ಲಿ ಸಂಪರ್ಕ ಸಮಸ್ಯೆ, ವೇಗದ ಸಮಸ್ಯೆ ಸಾಮಾನ್ಯವಾಗಿದೆ. ಡೋಂಗಲ್‌ಗ‌ಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂಡಾಜೆ, ಕಕ್ಕಿಂಜೆ, ದಿಡುಪೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮೊದಲಾದ ಪ್ರದೇಶಗಳಲ್ಲಿ, ಟವರ್‌ಗಳಿದ್ದರೂ ಇಂಟರ್ನೆಟ್‌ ಸಂಪರ್ಕ ಲಭ್ಯತೆ ಇಲ್ಲ. ಒಳಪ್ರದೇಶಗಳ ಮನೆಗಳಾದರೆ ಸಂಪರ್ಕ ಗಗನ ಕುಸುಮವಾಗಿದೆ.

ಬಿಎಸ್‌ಎನ್‌ಎಲ್‌ ಅಲಭ್ಯ
ಕಳೆದ 3 ತಿಂಗಳಿಂದ ನೆರಿಯ, ಕಕ್ಕಿಂಜೆ, ಮುಂಡಾಜೆ ದೂರವಾಣಿ ವಿನಿಮಯ ಕೇಂದ್ರಗಳ ಬಾಗಿಲು ತೆರೆದಿಲ್ಲ. ಹಾಳಾದ ದೂರವಾಣಿಗಳ ದುರಸ್ತಿಯೂ ಆಗಿಲ್ಲ. ಇದರಿಂದ ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನಂತೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಬೆಳ್ತಂಗಡಿಯಲ್ಲಿರುವ ಕಿರಿಯ ದೂರವಾಣಿ ಅಧಿಕಾರಿಗೆ 11 ದೂರ ವಾಣಿ ವಿನಿಮಯ ಕೇಂದ್ರಗಳ ಜವಾಬ್ದಾರಿ ಇರುವುದರಿಂದ ಅವರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಲೈನ್‌ಮ್ಯಾನ್‌ ಇಲ್ಲದ ಕಾರಣ ಅವರೇ ಲೈನ್‌ ಮ್ಯಾನ್‌ ಕೆಲಸವನ್ನು ನಿರ್ವಹಿಸಬೇಕಾದ ಪ್ರಮೇಯವೂ ಉಂಟಾಗಿದೆ.

ಅಧಿಕಾರಿಗಳ ಬಳಿ ಉತ್ತರ ಇಲ್ಲ!
ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ದೂರವಾಣಿ ಉಪ ಕೇಂದ್ರಗಳಲ್ಲಿ ಸುಮಾರು 200 ಜನ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 33ಮಂದಿ ಮಾತ್ರ ಸೇವೆಗೆ ಲಭ್ಯ ಇದ್ದಾರೆ. ಇಷ್ಟೊಂದು ಕಡಿಮೆ ಸಂಖ್ಯೆಯ ಸಿಬಂದಿಯಿಂದ ಸೇವೆ ಅಸಾಧ್ಯವಾಗಿದೆ. ಜತೆಗೆ ಸಂಬಳವೂ ಇಲ್ಲದೆ ನೌಕರರೂ ಸಮಸ್ಯೆ ಎದುರಿಸುವಂತಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ವರ್ಕ್‌ ಫ್ರಮ್ ಹೋಂ ತಲೆ ಬಿಸಿ
ಕೋವಿಡ್-19 ಕಾರಣ ಊರು ಸೇರಿ ವರ್ಕ್‌ಫ್ರಮ್ ಹೋಂ, ಆನ್‌ಲೈನ್‌ ತರಗತಿ ಇತ್ಯಾದಿಗಳಲ್ಲಿರುವ ಹಳ್ಳಿ ಭಾಗದವರಿಗೆ ಇಂಟರ್‌ ನೆಟ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.ಇವರಿಗೆ ನೆಟ್‌ವರ್ಕ್‌ ಸಮಸ್ಯೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದೇ ಇರುವ ಕಾರಣ ಮೇಲಧಿಕಾರಿಗಳು ತರಾಟೆಗೆ ತೆಗೆದು ಕೊಳ್ಳುತ್ತಿದ್ದಾರೆ. ಕೆಲವರ ಸಂಬಳವನ್ನು ತಡೆ ಹಿಡಿದಿದ್ದಾರೆ. ಆನ್‌ ಲೈನ್‌ ತರಗತಿ ಇರುವವರು ಕೂಡ ಹಲವಾರು ತೊಂದರೆಗಳಿಗೆ ಒಳಗಾಗಿದ್ದಾರೆ. ಬ್ಯಾಂಕ್‌, ಪಂಚಾಯತ್‌ಗಳಲ್ಲೂ ಸಮಸ್ಯೆ ಎದುರಾಗಿದೆ.

 ಸಾಮರ್ಥ್ಯ ಹೆಚ್ಚಿಸುವ ಯೋಜನೆ
ಹಳ್ಳಿ ಪ್ರದೇಶದ ಕೆಲವು ಟವರ್‌ಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಕಂಡುಬಂದಿತ್ತು. ಅದನ್ನು ಈಗಾಗಲೇ ಸರಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಕಂಡು ಬಂದರೆ ಕೂಡಲೇ ಸರಿ ಪಡಿಸಿ ಕೊಡಲಾಗುವುದು ಹಾಗೂ ನೆಟ್‌ವರ್ಕ್‌ ಇಲ್ಲದ ಕಡೆಗೆ, ಈಗಾಗಲೇ ಇರುವ ಟವರ್‌ ಗಳ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಇದೆ.
 -ಕಿರಣ್‌ ಶೆಟ್ಟಿ, ಏರಿಯಾ ಮ್ಯಾನೇಜರ್‌, ಖಾಸಗಿ ನೆಟ್‌ವರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next