Advertisement

“ಬಾಂಧವ್ಯ’ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಗರಿ

10:35 PM Oct 21, 2019 | mahesh |

ಉಪ್ಪಿನಂಗಡಿ: ಹದಿನೇಳು ನಿಮಿಷಗಳ ಕಿರು ಚಿತ್ರವನ್ನು ನಿರ್ಮಿಸಿ ಜಗತ್ತಿನಾದ್ಯಂತ ವೀಕ್ಷಕರನ್ನು ಹೊಂದಿರುವುದಲ್ಲದೆ, ಚಿತ್ರದಲ್ಲಡಗಿದ ಸಾಮಾಜಿಕ ಜಾಗೃತಿಯ ನೆಲೆಯಲ್ಲಿ ಪ್ರತಿಷ್ಠಿತ 6ನೇ ಪಿಂಕ್‌ ಸಿಟಿ ಇಂಟರ್‌ನ್ಯಾಶನಲ್‌ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌-2019ರಲ್ಲಿ ಅಂತಾರಾಷ್ಟ್ರೀಯ ಬೆಸ್ಟ್‌ ಸೋಷಿಯಲ್‌ ಅವಾರ್ನೆಸ್‌ ಫಿಲ್ಮ್ ಅವಾರ್ಡ್‌ಗೆ ಭಾಜನರಾಗುವ ಮೂಲಕ ಬಾಂಧವ್ಯ ಚಿತ್ರದ ನಿರ್ದೇಶಕ ರಂಜಿತ್‌ ಅಡ್ಯನಡ್ಕ ಗಮನ ಸೆಳೆದಿದ್ದಾರೆ.

Advertisement

ಇಂದು ಜಗತ್ತನ್ನು ಹತ್ತಿರಕ್ಕೆ ತಂದಿರುವ ಮೊಬೈಲ್‌ ತನ್ನವರನ್ನು ದೂರವಿರಿಸಲು ಕಾರಣವಾಗುತ್ತಿರುವ ಕಹಿ ಸತ್ಯವನ್ನು ಮನಃಸ್ಪರ್ಶಿಯಾಗಿ ನಿರ್ದೇಶಿಸಿ “ಬಾಂಧವ್ಯ’ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಹೆತ್ತವರ ಮತ್ತು ಮಕ್ಕಳ ನಡುವಿನ ಭಾಂಧವ್ಯದಲ್ಲಿ ಮೊಬೈಲ್‌ನ ಪಾತ್ರ, ಪರಿಚಯ ಯಾವ ರೀತಿ ಋಣಾತ್ಮಕವಾಗಿ ಪ್ರಭಾವ ಬೀರುತ್ತದೆ ಎನ್ನುವುದನ್ನು ತನ್ನ ಚಿತ್ರಕಥೆಯಲ್ಲಿ ಅವರು ಅನಾವರಣಗೊಳಿಸಿದ್ದಾರೆ.

ಪಿಂಕ್‌ ಸಿಟಿ ಇಂಟರ್‌ನ್ಯಾಶನಲ್‌ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌-2019ರ ಸ್ಪರ್ಧಾ ಕಣದಲ್ಲಿ 2,000ಕ್ಕೂ ಹೆಚ್ಚು ಕಿರು ಚಿತ್ರಗಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ ವಿದೇಶಿ ವಿಭಾಗದಲ್ಲಿ 16 ಚಿತ್ರಗಳು, ಭಾರತೀಯ ವಿಭಾಗದಲ್ಲಿ 35 ಚಿತ್ರಗಳು ಪ್ರವೇಶ ಪಡೆದಿದ್ದವು. ಈ ಪೈಕಿ “ಬಾಂಧವ್ಯ’ ಪ್ರಶಸ್ತಿಗೆ ಆಯ್ಕೆಯಾಗಿದೆ.

ನಿರ್ದೇಶಕ ರಂಜಿತ್‌ (26) ಬಿಎಸ್‌ಡಬ್ಲೂ ಪಧವೀಧರನಾಗಿದ್ದು, ವಾಚನ ಹಾಗೂ ಕ್ರಿಕೆಟ್‌ ಆಟದ ಹವ್ಯಾಸಗಳ ನಡುವೆ ಚಲನಚಿತ್ರ ನಿರ್ಮಾಣದಲ್ಲೂ ಆಸಕ್ತಿ ತಾಳಿದ್ದರು. ಕಾಲೇಜು ವಿದ್ಯಾರ್ಥಿಯಾಗಿ ದ್ದಾಗಲೇ “ಇಂಡಿಯನ್‌ ಆರ್ಮಿ’ ಚಿತ್ರ ನಿರ್ದೇಶಿಸಿದ್ದರು. “ಪೆನ್ಸಿಲ್‌ ಬಾಕ್ಸ್‌’ ಚಿತ್ರದ ಕೆಮರಾಮನ್‌ ಆಗಿ ಕೆಲಸ ಮಾಡಿದ್ದಾರೆ.

ಸದ್ದಿಲ್ಲದ ಸಾಧಕಿ ಕೃತಿ ಕೈಲಾರ್‌
ಕನ್ನಡದ ಚಲನಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾ ಕಣಕ್ಕೆ ಒಯ್ಯಬೇಕಾದರೆ ಕನ್ನಡ ಸಂಭಾಷಣೆಯನ್ನು ಆಂಗ್ಲಕ್ಕೆ ಭಾಷಾಂತರಿಸಬೇಕಾಗುತ್ತದೆ. ಇದನ್ನು ಉಪ್ಪಿನಂಗಡಿಯ ಕೃತಿ ಕೈಲಾರ್‌ ಮಾಡಿದ್ದಾರೆ. ಪೆನ್ಸಿಲ್‌ ಬಾಕ್ಸ್‌ ಮೂಲಕ ಚಿತ್ರ ರಂಗಕ್ಕೆ ಆಕೆ ಪರಿಚಿತರಾಗಿದ್ದರು. ಪ್ರಸಕ್ತ ಉಪ್ಪಿನಂಗಡಿ ಇಂದ್ರಪ್ರಸ್ಥ ಪಿ.ಯು. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕೃತಿ ಕೈಲಾರ್‌ ಕಳೆದ ವರ್ಷ ಎಸೆಸೆಲ್ಸಿ ಪರೀಕ್ಷೆಯ ಒತ್ತಡದ ಮಧ್ಯೆ ಬಾಂಧ್ಯವದ ಇಂಗ್ಲಿಷ್‌ ಸಬ್‌ಟೈಟಲ್‌ ಬರೆದುಕೊಟ್ಟಿದ್ದರು.

Advertisement

ಉದ್ದೇಶ ಫ‌ಲಿಸಿತು
ಬಾಂಧವ್ಯ ಚಿತ್ರವನ್ನು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಸಮಾಜದಲ್ಲಿ ಕಿಂಚಿತ್ತಾದರೂ ಬದಲಾವಣೆ ತರುವ ಉದ್ದೇಶ ಫ‌ಲಿಸಿದೆ. ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿ ಸಂತಸವನ್ನು ಇಮ್ಮಡಿಗೊಳಿಸಿದೆ. ಬೆಳ್ಳಿ ತೆರೆಯ ಚಲನಚಿತ್ರವನ್ನು ನಿರ್ದೇಶಿಸುವ ಕನಸು ನನ್ನದು. ಅದು ತುಳು ಅಥವಾ ಕನ್ನಡ ಸಿನಿಮಾ ಆಗಬಹುದು. ಒಟ್ಟಾರೆ ಸಿನಿಮಾ ಕ್ಷೇತ್ರದಲ್ಲೇ ಸಾಧನೆ ಮಾಡುವ ಹಂಬಲ ನನ್ನದು ಎಂದು ರಂಜಿತ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next