ಚಿತ್ರದುರ್ಗ: ಯೋಗವನ್ನು ಕೆಲವರು ಶಾರೀರಿಕ ತಾಲೀಮಾಗಿ ಬಳಸುತ್ತ ಅದಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ಆದರೆ ಬಸವಾದಿ ಶರಣರು ಶರೀರ, ಇಂದ್ರಿಯ, ಬುದ್ಧಿಯ ನಡುವೆ ಸಾಮರಸ್ಯದ ಪರಿಕಲ್ಪನೆ ತರಲು ಶಿವಯೋಗವನ್ನಾಗಿಸಿದರು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ “ಇಂದು ಯೋಗ ದಿನ-ಶಿವಯೋಗ ದರ್ಶನ’ ಫೇಸ್‌ಬುಕ್ ಮತ್ತು ಯುಟ್ಯೂಬ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಿವಯೋಗದ ಪ್ರಕ್ರಿಯೆಯಿಂದ ಬದುಕಿಗೆ ಬೇಕಾದ ಸಮತೋಲನವನ್ನು ಬರುತ್ತದೆ. ಅದು ಬಸವ ಧರ್ಮದಲ್ಲಿದೆ. ಜಗತ್ತಿಗೆ ಶಿವಯೋಗದ ಪರಿಕಲ್ಪನೆಯನ್ನು ಬಸವ ಅಲ್ಲಮಾದಿ ಶರಣರು 900 ವರ್ಷಗಳ ಹಿಂದೆಯೇ ತೋರಿಸಿದ್ದಾರೆ.
ಯೋಗದ ಆಚೆಗೆ ಶಿವಯೋಗ ಇದೆ. ವ್ಯಾಯಾಮ ಯೋಗವಾಗಬೇಕು ಹಾಗೂ ಬದುಕಿನ ಆಯಾಮವಾಗಬೇಕು. ದಿನವೂ ನಾವು ಲವಲವಿಕೆಯಿಂದ ಜೀವನವನ್ನು ಆಸ್ವಾದಿಸಬೇಕು. ವಿಶ್ವ ಯೋಗ ದಿನ ನಮಗೆ ಶಿವಯೋಗ ದರ್ಶನವಾಗಬೇಕು. ಇಲ್ಲಿ ಪ್ರದರ್ಶನ ಇರುವುದಿಲ್ಲ ಎಂದರು.
ಯಾರು ದುರಾಲೋಚನೆ ಜೊತೆಗೆ ಸಾಗುತ್ತಾರೋ ಅವರು ಧನಾತ್ಮಕ ಆಲೋಚನೆಗಳನ್ನು ಕಳೆದುಕೊಳ್ಳುತ್ತಾರೆ. ನಮಗೆ ಧನಾತ್ಮಕ ಆಲೋಚನೆ ಬೇಕು. ಆಲೋಚನೆಗಳ ಪರಿಷ್ಕರಣೆ ಆಗಬೇಕು. ಬದುಕನ್ನು ಕೆಲವರು ಪರಿಣಾಮಕಾರಿಯಾಗಿ ಆಸ್ವಾದಿಸುವುದಿಲ್ಲ. ಬದುಕು ಎಂದರೆ ಯಾಂತ್ರಿಕ ಬದುಕು ಎಂದುಕೊಂಡಿದ್ದಾರೆ. ಇದು ಕ್ಷಣಿಕವಾಗಿರುವ ಬದುಕು. ಅಂಥವರಿಗೆ ಆಲೋಚನೆಗಳ ಶುದ್ಧೀಕರಣವಾಗಿರುವುದಿಲ್ಲ. ಆಲೋಚನೆಗಳ ಶುದ್ಧೀಕರಣ ಎಂದರೆ ಶಿವಯೋಗ ಎಂದು ಹೇಳಿದರು.
ಆಧ್ಯಾತ್ಮಿಕವಾದ ಶಿವಯೋಗಕ್ಕೆ ವೈಜ್ಞಾನಿಕ ಸ್ಪರ್ಶ ಕೊಡಬೇಕು. ಜೀವನದ ಅತಿಯಾದ ಆತಂಕವನ್ನು ನಿಯಂತ್ರಿಸುವಲ್ಲಿ ಶಿವಯೋಗ ಮುಖ್ಯ ಪಾತ್ರ ವಹಿಸುತ್ತದೆ. ದಿನವೂ ನಾವು ಶಿವಯೋಗವನ್ನು ಸಾಧಿಸಬೇಕು. ಜೀವನಕ್ಕೆ ಹೊಸತನದ ಸ್ಪರ್ಶ ಬೇಕು. ಶಿವಯೋಗ ಹೊಸತನ ನೀಡುತ್ತದೆ. ಆಂತರ್ಯದಲ್ಲಿ ಕೆಟ್ಟ ಆಲೋಚನೆ ಇಟ್ಟುಕೊಳ್ಳದೆ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಜೀವನ ಸಾಗಿಸಬೇಕು. ವಾಸ್ತವಿಕತೆ ಅರ್ಥ ಮಾಡಿಕೊಂಡವರಲ್ಲಿ ಸಮತೋಲನ ಸ್ಥಿತಿ ಉಂಟಾಗುತ್ತದೆ. ಶಿವಯೋಗ ಬದುಕಿಗೆ ಮಾರ್ಗೋಪಾಯಗಳನ್ನು ನೀಡುತ್ತದೆ ಎಂದು ತಿಳಿಸಿದರು.