ದಾವಣಗೆರೆ: ಯೋಗ ನಮ್ಮ ಪುರಾತನ ತತ್ವಶಾಸ್ತ್ರ. ಯೋಗ ಒಂದು ಜೀವನ ಶೈಲಿ ಹಾಗೂ ಕಲೆ ಪ್ರತಿಯೊಬ್ಬರ ಸರ್ವೋನ್ನತ ಏಳಿಗೆಗೆ ತುಂಬಾ ಸಹಕಾರಿ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಮತ್ತು ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ಖ್ಯಾತ ಪ್ರಕೃತಿ ಚಿಕಿತ್ಸಾ ತಜ್ಞ ಡಾ| ಬಿ.ಆರ್. ಗಂಗಾಧರ ವರ್ಮ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 7 ದಿನಗಳ ಆನ್‌ಲೈನ್ ಯೋಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ (ಯೋಗ ಸಪ್ತಾಹ) ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯೋಗ ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲಾ ಪಂಥದ ಜನರೂ ಒಂದಲ್ಲ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗದ ಎಲ್ಲ ಎಂಟು ಅಂಗಗಳು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರಥ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ) ಮನುಷ್ಯನ ಆರೋಗ್ಯ ಮತ್ತು ಜೀವನಕ್ರಮದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ ಎಂದರು.
ಕಾರ್ಯಕ್ರಮದ ರೂವಾರಿ ಡಾ| ಬಿ.ಆರ್. ಗಂಗಾಧರ ವರ್ಮ ಮಾತನಾಡಿ, ಎಲ್ಲ ರೀತಿಯ ಏರುಪೇರುಗಳನ್ನು ತಡೆಯಲು ಯೋಗಾಭ್ಯಾಸ ಉಪಯುಕ್ತ. ಯೋಗ ಸಾಧನೆಯ ಮುಖ್ಯ ಹಾಗೂ ಅಂತಿಮ ಗುರಿಯೇ ಆಧ್ಯಾತ್ಮ. ಅದನ್ನೇ ಮೋಕ್ಷ ಎಂದು ಕೂಡ ಕರೆಯುತ್ತಾರೆ ಎಂದರು.
ಡಾ| ವಿಂಧ್ಯ ಗಂಗಾಧರ ವರ್ಮ ಮಾತನಾಡಿ, ಯೋಗಾಭ್ಯಾಸ ಒಬ್ಬ ಮನುಷ್ಯನನ್ನು ಉನ್ನತ ಶ್ರೇಣಿಗೆ ಕರೆದೊಯ್ಯುವುದರಿಂದ ಸರ್ವಾಂಗೀಣ, ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತದೆ ಎಂದು ತಿಳಿಸಿದರು. ಪತ್ರಕರ್ತೆ ಶಾಂತಲಾ ಧರ್ಮರಾಜ್, ಡಾ| ಶಿವಲಿಂಗಪ್ಪ, ಸೈಯದ್ ಅಹಮದ್. ಜಿಲ್ಲಾ ಆಯುಷ್ ಅಧಿಕಾರಿ ಡಾ| ಶಂಕರಗೌಡ ಇದ್ದರು.