ಕಾಸರಗೋಡು : ಯೋಗ ಜೀವನದ ಭಾಗ ಮಾತ್ರವಲ್ಲ ಜೀವನ ಮಾರ್ಗವೂ ಹೌದು ಎಂದು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ರವಿಗಣೇಶ್ ಮೊಗ್ರ ಅಭಿಪ್ರಾಯ ಪಟ್ಟರು.
ಅವರು ಯೋಗ ಫೋರ್ ಕಿಡ್ಸ್ ಎಕ್ಸ್ಟ್ರಾ ಫ್ಲೆಕ್ಸಿಬಿಲಿಟಿ ಕೇಂದ್ರ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಗೂಗಲ್ ಮೀಟ್ ಮೂಲಕ ಜರಗಿದ ಯೋಗ ದಿನಾಚಾರಣಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದು ಯೋಗ ಆರೋಗ್ಯವಂತ ಜೀವನಕ್ಕೆ ಅತೀ ಅಗತ್ಯ. ಯೋಗ ಕಲಿಸುವುದು ಕೂಡಾ ಒಂದು ಪ್ರೊಫೆಷನ್ ಆಗಿ ಬೆಳೆಯುತ್ತಿದೆ. ಯೋಗ ಒಂದು ದಿನದ ಆಚರಣೆಗೆ ಸೀಮಿತವಾಗಿರದೆ ಜೀವನದುದ್ದಕ್ಕೂ ನಮ್ಮ ಆರೋಗ್ಯದ ಗುಟ್ಟಾಗಿ ಜತೆಗಿರಬೇಕು. ಪ್ರಪಂಚದ ಮೂಲೆ ಮೂಲೆಗೂ ಯೋಗ ಹರಡಬೇಕು ಎಂದು ಅವರು ಹೇಳಿದರು.
ಜ್ಯೋತಿಷಿ ಸಿ ವಿ ಪೊದುವಾಳ್ ಕಾರ್ಯಕ್ರಮ ಉದ್ಘಾಟಿಸಿ ಯೋಗ ಕೇಂದ್ರದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲಿ ಎಂದು ಹಾರೈಸಿದರು.
ದೇವದಾಸ್ ಕಾಮತ್ ನುಳ್ಳಿಪ್ಪಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಸದಸ್ಯೆ ಪುಷ್ಪಾವತಿ ನೆಟ್ಟಣಿಗೆ, ಮಮತಾ ಆಚಾರ್ಯ ಶುಭಾಶಂಸನೆಗೈದರು. ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ ಉಪಸ್ಥಿತರಿದ್ದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧಕಿ ಯೋಗರತ್ನ ಅಭಿಜ್ಞಾಹರೀಶ್ ಅವರಿಂದ ಯೋಗ ಪ್ರದರ್ಶನ ನಡೆಯಿತು. ಕೇಂದ್ರದ ವಿದ್ಯಾರ್ಥಿಗಳು ಹಾಗೂ ರಕ್ಷಕರು ಭಾಗವಹಿಸಿದರು. ಕು.ಅನ್ವಿತಾ ಕಾಮತ್ ಪ್ರಾರ್ಥನೆ ಹಾಡಿದರು. ಶಿಕ್ಷಕಿ ತೇಜಕುಮಾರಿ ಧನ್ಯವಾದ ಸಮರ್ಪಿಸಿದರು. ವಿದ್ಯಾಗಣೇಶ್ ಕಾರ್ಯಕ್ರಮ ನಡೆಸಿಕೊಟ್ಟರು.