ಮೈಸೂರು: ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮುಂದುವರಿದ ಭಾಗವಾಗಿ ಯೋಗ ಪದ್ಧತಿಯಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮೈಸೂರಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸಿರುವುದಾಗಿ ಕೇಂದ್ರ ಆಯುಷ್ ಇಲಾಖೆ ನಿರ್ದೇಶಕ ಡಾ.ವಿಕ್ರಮ್ ಸಿಂಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೃದಯದ ಆರೈಕೆಗಾಗಿ ಯೋಗ-2019 ಎಂಬ ಘೋಷ ವಾಕ್ಯದೊಂದಿಗೆ ನ.15 ಮತ್ತು 16ರಂದು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತ ಗಂಗೋತ್ರಿ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸಲಾಗಿದ್ದು, ನ.15ರಂದು ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಯಶೋ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಪತಂಜಲಿ ಯೋಗ ಪೀಠದ ಸಂಸ್ಥಾಪಕರಾದ ಬಾಬಾ ರಾಮದೇವ್ ಪ್ರಧಾನ ಭಾಷಣ ಮಾಡಲಿದ್ದಾರೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ನ.16ರಂದು ಸಂಜೆ 4ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಯಶೋ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಯೋಗದ ಕುರಿತ ಸಂಶೋಧನೆಗಳನ್ನು ಉತ್ತೇಜಿಸುವುದು, ಜಾಗತಿಕ ಮಟ್ಟದಲ್ಲಿ ಯೋಗದ ಕುರಿತು ನಡೆಯುತ್ತಿರುವ ಸಂಶೋಧನೆಗಳ ಮಾಹಿತಿಯನ್ನು ಕಾಲಕಾಲಕ್ಕೆ ಯೋಗಾಸಕ್ತರಿಗೆ ಒದಗಿಸುವುದೇ ಈ ಸಮ್ಮೇಳನದ ಮುಖ್ಯ ಉದ್ದೇಶ. ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸುತ್ತಿದ್ದು, ಐದನೇ ಸಮ್ಮೇಳನವನ್ನು ಯೋಗ ನಗರಿ ಮೈಸೂರಿನಲ್ಲಿ ಆಯೋಜಿಸ ಲಾಗಿದೆ ಎಂದು ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ ತಿಳಿಸಿದರು.