Advertisement
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ಸಂಪಾದಕೀಯ ಸಿಬಂದಿಯೊಂದಿಗೆ ಹಂಚಿಕೊಳ್ಳುತ್ತಾ, ಉನ್ನತ ಸ್ಥಾನ ದಲ್ಲಿದ್ದು ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿ ದವರು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು.ಇಷ್ಟು ಮಾತ್ರ ಸಶಕ್ತೀಕರಣವಲ್ಲ
ಸಂವಾದಕ್ಕೆ ಚಾಲನೆ ದೊರೆತಿದ್ದು ಮಹಿಳೆಯರು ಸಮಾಜದಿಂದ ನಿರೀಕ್ಷಿಸುವುದೇನು ಎಂಬ ಪ್ರಶ್ನೆಯ ಮೂಲಕ. ಇದಕ್ಕೆ ಪ್ರತಿಕ್ರಿಯಿಸಿದ ನಿಶಾ ಜೇಮ್ಸ್, “ನಾನು ಎಸ್‌ಪಿಯಾಗಿ ಇಲ್ಲಿಗೆ ನೇಮಕಗೊಂಡಾಗ (ಆಗಲೇ ಡಿಸಿ, ಜಿಪಂ ಸಿಇಒ, ಎಡಿಸಿಯಲ್ಲಿ ನನ್ನ ಮಹಿಳಾ ಸಹೋದ್ಯೋಗಿಗಳಿದ್ದರು) ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯಲ್ಲಿ ಮಹಿಳಾ ಸಶಕ್ತೀಕರಣ ವಾಯಿತೆಂಬ ಅರ್ಥದಲ್ಲಿ ಸುದ್ದಿಗಳು ಹರಿದಾಡಿದವು. ಆ ಕ್ಷಣದಲ್ಲಿ ಖುಷಿ ಎನಿಸಿದರೂ ಅಷ್ಟಕ್ಕೇ ಮಹಿಳಾ ಸಶಕ್ತೀಕರಣ ಎಂದು ಅರ್ಥೈಸುವುದು ಸೂಕ್ತವಲ್ಲ ಎಂಬುದು ವಾಸ್ತವ. ಆರೋಗ್ಯ, ಅವಕಾಶ, ಅಸಮಾ ನತೆಯ ಅನೇಕ ಸವಾಲುಗಳನ್ನು ಅಪಾರ ಸಂಖ್ಯೆಯ ಮಹಿಳೆಯರು ಇನ್ನೂ ಎದುರಿಸುತ್ತಿದ್ದಾರೆ’ ಎಂದರು.
“ಹಳ್ಳಿಗಳಲ್ಲಿನ ಚಿತ್ರಣವೇ ಬೇರೆ’ ಎಂದು ಮಾತು ಆರಂಭಿಸಿದವರು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ. “ನಾನು ಕಲಬುರಗಿ, ಚಾಮರಾಜನಗರ, ವಿಜಯ ಪುರ ಜಿ.ಪಂ. ಸಿಇಒ ಆಗಿದ್ದಾಗ ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಮನೆಯಿಂದ ಹೊರಬರಲೂ ಮಹಿಳೆಯರು ಹಿಂಜ ರಿಯುತ್ತಿದ್ದುದು ಕಂಡು ಬಂತು. ಇಂಥ ಪರಿಸ್ಥಿತಿಯನ್ನು ಎದುರಿಸುವಲ್ಲಿ ಮಾಧ್ಯಮಗಳ ಸಹಕಾರ ತೀರಾ ಅವಶ್ಯ. ಮಹಿಳೆಯರಿಗೆ ಅವರ ಹಕ್ಕುಗಳ ಕುರಿತು ಅರಿವು ಮೂಡಿಸಬೇಕು. ಆದರ್ಶ ವ್ಯಕ್ತಿಗಳ ಕುರಿತು ಜನರಿಗೆ ತಿಳಿಸಿ ಸ್ಫೂರ್ತಿ ತುಂಬಬೇಕು.ಅದರಲ್ಲೂ ಮಹಿಳೆಯರ ಕುರಿತು ಬರೆಯುವಾಗ ಅತ್ಯಂತ ಸಂಯಮ ಹಾಗೂ ಜಾಗ್ರತೆ ವಹಿಸಬೇಕು’ ಎಂಬುದು ಅವರ ಮಾತಿನ ಸಾರ. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿಯವರು, ಇಡೀ ವಿಷಯವನ್ನು ಒಂದು ಗಂಭೀರ ನೆಲೆಗೆ ಕೊಂಡೊಯ್ದು ನಿತ್ಯ ಬದುಕಿನ ಸ್ತರದತ್ತ ಸಾಗಿದರು. “ನನ್ನನ್ನು ಅಪರ ಜಿಲ್ಲಾಧಿಕಾರಿಯಾಗಿ ಗೌರವಿಸುವು ದಕ್ಕಿಂತ ಸಾಮಾನ್ಯ ಮಹಿಳೆಯಾಗಿ ಗೌರವಿಸುವುದು ಮುಖ್ಯ. ಅದೇ ನಿಜವಾದ ಗೌರವ. ಈ ಗೌರವ ನಾವು ತರುವ ಸಂಬಳಕ್ಕೆ ಸಿಕ್ಕಂತಾದರೆ ಯಾವ ಅರ್ಥವಿದೆ? ಇಂದು ಹಳ್ಳಿಗಳಲ್ಲಿ ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ದುಡಿಯುವ ಮಹಿಳೆಯರಿದ್ದಾರೆ. ಆದರೆ ಮನೆಯ ಕೆಲಸವಾದ್ದರಿಂದ ವೇತನವಿಲ್ಲ. ಬರೀ ಚಾಕರಿ. ಕನಿಷ್ಠ ಗೌರವವೂ ಸಿಗುತ್ತಿಲ್ಲ. ಪ್ರತಿ ಮಹಿಳೆಗೂ ಗೌರವ ಸಿಕ್ಕರಷ್ಟೇ ಸಶಕ್ತೀಕರಣಕ್ಕೆ ಅರ್ಥ ಎಂದಾಗ ಹೌದೆಂದು ಮಾತು ಬೆಳೆಸಿದವರು ನಿಶಾ ಜೇಮ್ಸ್.
Related Articles
ಏಳು ದಶಕಗಳಲ್ಲಿ ಚಿತ್ರಣ ಬದಲು
ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈಯವರು ಸಂವಾದವನ್ನು ಮತ್ತೂಂದು ಮಜಲಿಗೆ ಕೊಂಡೊಯ್ದು, ಸುಮಾರು 70 ವರ್ಷಗಳ ಹಿಂದೆ ಮಹಿಳೆಯೊಬ್ಬರ ನಡವಳಿಕೆ ಸರಿ ಇದ್ದರೂ ಸಂಬಂಧಿತ ಪುರುಷರು ತಪ್ಪೆಂದು ಹೇಳಿದರೆ ಮುಗಿಯಿತು. ತನ್ನ ನಡವಳಿಕೆಯನ್ನು ಸರಿ ಎಂದು ಸಮರ್ಥಿಸುವ ಛಾತಿ, ಅವಕಾಶ ಮಹಿಳೆಗೆ ಇರಲಿಲ್ಲ. “ಗಂಡನ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವವಳಿಗೆ ಓದು ಏಕೆ?’ ಎಂದು ಪ್ರಶ್ನಿಸಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇದೊಂದು ಸೀಮೋಲ್ಲಂಘನದಂತಹ ಪರಿವರ್ತನೆ. ನೀವು ನಾಲ್ವರೂ ಬಹಳಷ್ಟು ಮಂದಿಗೆ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಮುದ್ರಣಾಲಯಕ್ಕೆ ಭೇಟಿಇದೇ ಸಂದರ್ಭದಲ್ಲಿ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಇರಿಸಲಾಗಿದ್ದ ಶುಭಾಶಯ ಭಿತ್ತಿಪತ್ರದಲ್ಲಿ ನಾಲ್ವರು ಅಧಿಕಾರಿಗಳು ಶುಭಾಶಯ ಬರೆದು ಸಹಿ ಹಾಕಿದರು. ಬಳಿಕ ಉದಯವಾಣಿಯ ಮುದ್ರಣಾಲಯಕ್ಕೆ ಭೇಟಿ ನೀಡಿ ಮುದ್ರಣ ತಂತ್ರ ಜ್ಞಾನದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಸಿಇಒ ವಿನೋದ್ ಕುಮಾರ್, ಸಂಪಾದಕ ಮಂಡಳಿ ಸದಸ್ಯರು, ಮುದ್ರಣ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಸಂಪಾದಕೀಯ ಬಳಗದ ಮಹಿಳಾ ಸಿಬಂದಿಯೇ ನಿರ್ವಹಿಸಿದ್ದು ವಿಶೇಷ. ವಿದ್ಯಾ ಇರ್ವತ್ತೂರು ಪ್ರಾಸ್ತಾವಿಕ ಮಾತು ಗಳನ್ನಾಡಿದರೆ, ಸುಶ್ಮಿತಾ ಶೆಟ್ಟಿ ಸ್ವಾಗತಿಸಿದರು. ರಮ್ಯಾ ವಂದಿಸಿದರೆ, ಭುವನ ಬಾಬು ನಿರೂಪಿಸಿದರು. ಪ್ರೀತಿ ಭಟ್, ಧನ್ಯಶ್ರೀ ಬೋಳಿಯಾರ್, ರಂಜಿನಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ರಾಜಕೀಯ ಕ್ಷೇತ್ರದ ಚರ್ಚೆ
ರಾಜಕೀಯ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶಿಸಿದರೆ ಭ್ರಷ್ಟಾಚಾರ ಮುಕ್ತವಾದೀತೆಂಬ ಆಶಯಕ್ಕೆ ಚರ್ಚೆ ಹೊರಳಿದಾಗ, “ಇದನ್ನು ಒಪ್ಪಲಾಗದು. ಪತ್ನಿಯ ಒತ್ತಾಯದಿಂದ ಪತಿ ಭ್ರಷ್ಟಾಚಾರ ಮಾಡುವುದೂ ಇದೆ’ ಎಂದರು ಡಾ| ಸಂಧ್ಯಾ ಪೈ. ಇದನ್ನು ಒಪ್ಪಿಕೊಳ್ಳುತ್ತಲೇ, ನೀತಿ ನಿರೂಪಣೆಯಲ್ಲಿ ಸುಧಾರಣೆ ತರಲು ರಾಜಕೀಯ ಅಧಿಕಾರ ಬೇಕು. ಮಹಿಳೆಯರು ಅಧಿಕಾರಕ್ಕೆ ಬಂದಾಗ ಕುಡಿಯುವ ನೀರು, ಶಿಕ್ಷಣ, ಶಾಲೆಗಳಿಗೆ ಆದ್ಯತೆ ನೀಡಿದರೆ, ಪುರುಷರ ಗಮನ ನಿರ್ಮಾಣದಂತಹ ಕ್ಷೇತ್ರಗಳತ್ತಲೇ ಇರುತ್ತದೆ ಎಂದವರು ವಿದ್ಯಾಕುಮಾರಿ. ರಾಜಕೀಯವೆಂದರೆ ಪುರುಷ ರದ್ದು ಎಂಬ ಭಾವನೆ ಬದಲಾಯಿಸಬೇಕು ಎಂದರು ಹೆಪ್ಸಿಬಾ ರಾಣಿ. ಅನೇಕ ಮಹಿಳಾ ರಾಜಕಾರಣಿಗಳು ಪುರುಷರಿಗಿಂತ ಹೆಚ್ಚು ಸಾಧಿಸಿದ್ದಾರೆ ಎಂದರು “ತರಂಗ’ ಕಾರ್ಯನಿರ್ವಾಹಕ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ. ಸಂವಾದದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ ಸಶಕ್ತೀ ಕರಣ, ಸಮಾಜ, ಮಾಧ್ಯಮಗಳ ಪಾಲುದಾರಿಕೆ ಇತ್ಯಾದಿ ಸಂಗತಿ ಚರ್ಚೆಗೆ ಬಂದವು. ಬದಲಾವಣೆಯ ಗಾಳಿ ಎಲ್ಲ ದಿಕ್ಕುಗಳಿಂದ ಬೀಸುತ್ತಿರುವಾಗ ಭಾರತೀಯ ಮಹಿಳೆಯೂ ಅದರಿಂದ ಹೊರತಾಗಿರುವುದು ಅಸಾಧ್ಯ. ಪುರುಷರಿಗೆಂದೇ ಮೀಸಲಾದ ಹಲವು ಕ್ಷೇತ್ರಗಳಲ್ಲೂ ಈಗ ಭಾರತೀಯ ಮಹಿಳೆ ಪ್ರವೇಶಿಸಿದ್ದಾಳೆ. ಗಡಿ ಕಾಯುವುದರಿಂದ ಹಿಡಿದು ಕ್ಷಿಪಣಿ ಉಡಾಯಿಸುವ ತನಕ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಟ್ಟಿದ್ದಾಳೆ. ಸ್ಥಳೀಯಾಡಳಿತದಿಂದ ಕೇಂದ್ರ ಸರಕಾರದವರೆಗೂ ಮಹಿಳೆ ತನಗೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ನೂರಾರು ಉದಾಹರಣೆಗಳಿವೆ. ಉಡುಪಿಯಂಥ ಒಂದು ಜಿಲ್ಲೆಯ ಎಲ್ಲ ಉನ್ನತ ಅಧಿಕಾರ ಸ್ಥಾನದಲ್ಲಿ ಮಹಿಳಾ ಅಧಿಕಾರಿಗಳೇ ರಾರಾಜಿಸಿರುವುದೂ ಇದಕ್ಕೊಂದು ನಿದರ್ಶನ. ಜತೆಗೆ ಸಂಸದೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಮಹಿಳೆಯರೇ ಎಂಬುದು ಹರ್ಷದ ಸಂಗತಿಯೇ. ಸಾಮಾಜಿಕ ಮಾಧ್ಯಮಗಳ ಆವಿಷ್ಕಾರವೂ ಮಹಿಳೆಯ ಹಕ್ಕಿನ ಹೋರಾಟಕ್ಕೆ ಇನ್ನಷ್ಟು ಬಲತುಂಬಿದೆ. ಮಾರ್ಚ್ 8 ನ್ನು ಮಹಿಳೆಯ ಹಕ್ಕು ಮತ್ತು ಸ್ಥಾನಮಾನವನ್ನು ಗುರುತಿಸುವ ದಿನವೆಂದು ಆಚರಿಸಲಾಗುತ್ತಿದೆ. ಆದರೆ ಈ ದಿನ ಮಹಿಳೆಗೆ ತನ್ನನ್ನು ತಾನು ಅನಾವರಣಗೊಳಿಸಿಕೊಳ್ಳಲು, ತನ್ನ ಹೆಜ್ಜೆಯನ್ನು ಗುರುತಿಸಲು ಸಿಗುತ್ತಿರುವ ಅವಕಾಶವೂ ಹೌದು. ಮಹಿಳೆಯ ನೈಜ ಸಶಕ್ತೀಕರಣವೆಂದರೆ ಅವಳ ಪ್ರಗತಿಯನ್ನು ಒಪ್ಪಿಕೊಂಡು ಸಹಕರಿಸುವಂಥ ಸಮಾಜದ ನಿರ್ಮಾಣವಾಗುವುದು. ಮಾದರಿ ವ್ಯಕ್ತಿಗಳ ಮೇಲೆ ಬೆಳಕು ಚೆಲ್ಲಿ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶೇ.10ಕ್ಕಿಂತ ಕಡಿಮೆ ಮಹಿಳೆಯರು ಉತ್ತೀರ್ಣರಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರಲಾರದ ಜೀವನ ಕ್ರಮವಿದೆ ಎಂಬುದನ್ನು ಕಲಬುರಗಿ, ಚಾಮರಾಜನಗರ, ವಿಜಯಪುರ ಜಿ.ಪಂ. ಸಿಇಒ ಆಗಿದ್ದಾಗ ನೋಡಿದ್ದೇನೆ. ನನ್ನ ತಾಯಿ ಆಂಧ್ರ ಪ್ರದೇಶದ ನಕ್ಸಲ್‌ಪೀಡಿತ ಗ್ರಾಮದಲ್ಲಿದ್ದವರು. ಆ ಸ್ಥಿತಿಯಲ್ಲೂ ಪಿಯುಸಿವರೆಗೆ ಕಲಿತಿದ್ದರು. ಎಲ್ಲರಿಗೂ ಇಂಥ ಅವಕಾಶ ಸಿಕ್ಕಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ. ನಮ್ಮ ನಿತ್ಯದ ಬದುಕಿನಲ್ಲೂ ಆದರ್ಶಗಳಿಗೆ ಸ್ಥಾನ ಕಲ್ಪಿಸಬೇಕು. ನಾನು ಮತ್ತು ಉಜ್ವಲ್ ಮದುವೆಯಾಗು ವಾಗಲೂ ಅರ್ಥಪೂರ್ಣ ದಿನವನ್ನು ಆಯ್ದುಕೊಂಡೆವು. ಮದುವೆಗೆ ಅರ್ಜಿ ಸಲ್ಲಿಸಿದ್ದು ರಾಷ್ಟ್ರೀಯ ಹೆಣ್ಣು ಮಗುವಿನ ದಿನ (ಜ.23) ದಂದು. ಮದುವೆಯಾದದ್ದು ಆರೆಂಜ್ ಡೇ (ಫೆ. 25) ದಿನ. ವಿಶ್ವಸಂಸ್ಥೆಯು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಪ್ರತಿ ತಿಂಗಳ 25 ರಂದು ಆರೆಂಜ್ ಡೇ ಆಚರಿಸುತ್ತಿದೆ. ಇಬ್ಬರೂ ಪರಸ್ಪರ ಗೌರವಿಸಲು ಬದ್ಧರಾಗಬೇಕೆಂಬುದು ಈ ನಿರ್ಧಾರದ ಹಿಂದಿನ ಆಶಯ. ನಮ್ಮ ನಿತ್ಯ ಜೀವನದ ಸಂದರ್ಭಗಳನ್ನೂ ಮತ್ತೂಬ್ಬರಿಗೆ ಸ್ಫೂರ್ತಿಯಾಗುವಂತೆ ಮಾರ್ಪಡಿಸಿಕೊಂಡರೆ ಹೆಚ್ಚು ಅರ್ಥಪೂರ್ಣ. ಮಾಧ್ಯಮಗಳು ಆದರ್ಶ ವ್ಯಕ್ತಿಗಳ ಕುರಿತು ಬೆಳಕು ಚೆಲ್ಲಿದರೆ ಹಲವರಿಗೆ ಪ್ರೇರಣೆಯಾಗ ಬಹುದು. ಆ ಆದರ್ಶ ವ್ಯಕ್ತಿ ಒಬ್ಬ ತಾಯಾಗಿರಬಹುದು, ಲೇಖಕ ಇರಬಹುದು, ಮನೆಗೆಲಸದವರೂ ಆಗಿರಬಹುದು.
– ಹೆಪ್ಸಿಬಾ ರಾಣಿ ಕೊರ್ಲಪಾಟಿ
ಜಿಲ್ಲಾಧಿಕಾರಿ, ಉಡುಪಿ ಭಯ ಬಿಟ್ಟು ಆತ್ಮಸ್ಥೆ „ರ್ಯ ಬೆಳೆಸಿಕೊಳ್ಳಿ
ಸಾಕಷ್ಟು ಕಾನೂನುಗಳಿದ್ದರೂ ಮಹಿಳೆ ಶಿಕ್ಷಣ, ಆರೋಗ್ಯ, ಸುರಕ್ಷೆ ಮೊದಲಾದ ವಿಷಯಗಳಲ್ಲಿ ಇಂದಿಗೂ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಇದಕ್ಕೆ ಆಕೆಗೆ ಆತ್ಮಸ್ಥೈರ್ಯ, ಸ್ವಯಂ ರಕ್ಷಣೆಯ ತಂತ್ರ ಮತ್ತು ಕಾನೂನು ಶಿಕ್ಷಣ ಅಗತ್ಯ. ಸರಕಾರ/ ಪೊಲೀಸ್ ಇಲಾಖೆ ಮಹಿಳೆಯ ಸುರಕ್ಷೆಗಾಗಿ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ಮಹಿಳೆಯರೂ ತಿಳಿದಿರಬೇಕು.ಮಹಿಳೆ ಭಯದಿಂದಾಗಿ ತನಗಾಗುತ್ತಿರುವ ಕಿರುಕುಳದ ಬಗ್ಗೆ ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಈ ಭಯವನ್ನು ಹೋಗಲಾಡಿಸಬೇಕು. ನಾನು ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಓಬವ್ವ ಪಡೆ ಮೂಲಕ ಮಹಿಳೆಯರ ಸುರಕ್ಷೆಗಾಗಿ ಮಹಿಳಾ ಅಧಿಕಾರಿ, ಸಿಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಿದ್ದೆ. ಆ ತಂಡ ಮಹಿಳೆಯರಿಗೆ ಸ್ವಯಂ ರಕ್ಷಣೆಯ ಬಗ್ಗೆಯೂ ತಿಳಿಸಿ ಆತ್ಮಸ್ಥೈರ್ಯ ತುಂಬಿಸುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಗೆ ಕಿರುಕುಳ ಆಗುತ್ತಿದ್ದರೂ ಆಕೆಯ ರಕ್ಷಣೆಗೆ ಮುಂದಾಗುವವರು ಕಡಿಮೆ. ಈ ಪರಿಸ್ಥಿತಿ ಬದಲಾಗಿ ಅವಳಿಗೆ ಸಹಾಯ ಮಾಡುವವರು ಹೆಚ್ಚಾಗಬೇಕು. ಸಿನೆಮಾ ಸೇರಿದಂತೆ ಕೆಲವು ಮಾಧ್ಯಮಗಳು ಮಹಿಳೆಯರ ಆತ್ಮ ಗೌರವಕ್ಕೆ ನೋವಾಗುವಂತೆ ವರ್ತಿಸುತ್ತವೆ. ಅದರ ಬದಲಾಗಿ ಆಕೆಯಲ್ಲಿರುವ ಪ್ರತಿಭೆ, ಚಿಂತನೆ, ಆಸಕ್ತಿಗಳ ಕಡೆಗೂ ಗಮನ ಹರಿಸಬೇಕು. ಇವೆಲ್ಲವೂ ಆದರೆ ಪರಿಸ್ಥಿತಿ ಒಂದಿಷ್ಟು ಬದಲಾಗಬಹುದು.
– ನಿಶಾ ಜೇಮ್ಸ್
ಪೊಲೀಸ್ ಅಧೀಕ್ಷಕಿ, ಉಡುಪಿ ಕಟ್ಟಕಡೆಯ ಹೆಣ್ಣು ಮಗುವಿಗೂ ಅವಕಾಶ ಸಿಕ್ಕರಷ್ಟೇ ಅರ್ಥ
ಪ್ರತಿ ಮಹಿಳೆಯೂ ಸಾಧಿಸುವ ಛಲ ಹೊಂದಿದಾಗ ಮಾತ್ರ ಮಹಿಳಾ ಸಶಕ್ತೀಕರಣಕ್ಕೆ ಅರ್ಥ ಬರುತ್ತದೆ. ದೇಶದಲ್ಲಿರುವ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶ ಇನ್ನೂ ಸಿಕ್ಕಿಲ್ಲ. ಎಷ್ಟೋ ಹೆಣ್ಣುಮಕ್ಕಳಿಗೆ ಮೂಲ ಸೌಕರ್ಯವೂ ಸಿಗುತ್ತಿಲ್ಲ. ನಾವೇನೋ ಮನೆಯಲ್ಲಿ ಪ್ರೋತ್ಸಾಹ ಸಿಕ್ಕ ಕಾರಣ ಈ ಮಟ್ಟಕ್ಕೆ ಬಂದೆವು. ಇದನ್ನು ತಲುಪಲು ಆಗದವರ ಸ್ಥಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕೊನೆಯ ಹೆಣ್ಣುಮಗುವಿನವರೆಗೆ ಅವಕಾಶ ಸಿಕ್ಕಿದರೆ ಮಾತ್ರ ಮಹಿಳಾ ಸಶಕ್ತೀಕರಣ. ಎಲ್ಲರೂ ತಮ್ಮ ತಮ್ಮ ಹುದ್ದೆಯ ನೆಲೆಯಲ್ಲೇ ಒಂದಿಷ್ಟು ಮಹಿಳೆ ಯರಿಗೆ ನೆರವಾದರೆ ಮಹಿಳಾ ಸಶಕ್ತೀಕರಣಕ್ಕೆ ಸಹಕಾರ ನೀಡಿದಂತೆಯೇ. ತಂದೆ-ತಾಯಂದಿರು ತಮ್ಮ ಗಂಡು ಮಕ್ಕಳಲ್ಲೂ ಸಮಾನತೆಯ ಚಿಂತನೆಯನ್ನು ಬಾಲ್ಯದಿಂದಲೇ ಬೆಳೆಸಬೇಕು. ತನ್ನೊಂದಿಗೆ ಬೆಳೆಯುವ ಮಗಳಿಗೂ ಸಮಾಜದಲ್ಲಿ ಸಮಾನ ಆವಕಾಶಗಳಿವೆ. ಅವಳಿಗೆ ಸಹಕಾರ ನೀಡಬೇಕು ಮತ್ತು ಅವಳ ಪ್ರಗತಿಯನ್ನು ಒಪ್ಪಿಕೊಳ್ಳಬೇಕು ಎಂಬ ಮನೋಸ್ಥಿತಿಯನ್ನು ಮೂಡಿಸಬೇಕು. ನಗರ ಪ್ರದೇಶ ಗಳಲ್ಲಿ ಈಗಾಗಲೇ ಇಂಥ ಸ್ಥಿತಿ ಸಣ್ಣಮಟ್ಟಿಗೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ವಿಸ್ತೃತವಾಗಿ ಆಗಬೇಕು. ವೈವಾಹಿಕ ಜೀವನದಲ್ಲಿ ತನ್ನ ಪತ್ನಿಯ ಸಾಧನೆಗೆ ಸಹಕರಿಸುವ ಪತಿ ಏನೋ ಉಪಕಾರ ಮಾಡಿದವನಂತೆ ಬಿಂಬಿಸಿಕೊಳ್ಳುತ್ತಾನೆ.ವಾಸ್ತವವಾಗಿ ಅದು ಸರಿಯಲ್ಲ. ಆದರ್ಶ ಸಮಾಜ ರೂಪಣೆಗೆ ಪುರುಷರನ್ನು ಮನೆಯಿಂದಲೇ ರೂಪಿಸಬೇಕು.
– ಸಿಂಧೂ ರೂಪೇಶ್
ಜಿಲ್ಲಾ ಪಂಚಾಯತ್ ಸಿಇಒ,ಉಡುಪಿ ಸಮಾನ ಗೌರವ ಸಿಗುವಂತಾಗಲಿ
ಸಮಾಜದಲ್ಲಿ ಸಾಮಾನ್ಯ ಮಹಿಳೆಯರು, ತಾಯಂದಿರಿಗೂ ಸಮಾನ ಗೌರವ ಸಿಗಬೇಕು. ಮಹಿಳೆಯರು ಮಾಡುವ ಕೆಲಸಕ್ಕೆ ಸೂಕ್ತ ಗೌರವ ಲಭಿಸಬೇಕು. ಸಂಬಳಕ್ಕೆ ಮಾತ್ರ ಗೌರವ ನೀಡುವ ಮನೋಭಾವ ಬದಲಾಗಬೇಕು. ಅದರ ಬದಲು ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವಂತಾಗಬೇಕು. ಇಂದು ಸಂಬಳ ತರುವ ಮಹಿಳೆಯರಿಗೆ ಮಾತ್ರ ಗೌರವ, ಮನೆಯಲ್ಲಿ ಕೆಲಸ ಮಾಡುವವರಿಗೆ ಚಾಕರಿ ಎನ್ನುವ ಭಾವನೆ ಇದೆ. ಇದು ಖಂಡಿತಾ ಸರಿಯಾದುದಲ್ಲ. ಗೃಹಕೃತ್ಯ ಮಾಡುವ ಮಹಿಳೆಯರಿಗೆ ಸಂಬಳ ಬಿಡಿ, ಕನಿಷ್ಠ ಗೌರವವನ್ನಾದರೂ ಕೊಡೋಣ. ಆ ವಾತಾವರಣವನ್ನು ಸೃಷ್ಟಿಸೋಣ. ಆದ ಕಾರಣ ಮಹಿಳೆಯರಿಗೆ ಆರ್ಥಿಕ ಸಶಕ್ತೀಕರಣವಿದ್ದರೆ ಮಾತ್ರ ಸಾಲದು. ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರು ಮೇಲುಗೈ ಸಾಧಿಸಬೇಕು. ಯಾಕೆಂದರೆ ನೀತಿ ನಿರೂಪಣೆ ಯಲ್ಲಿ ಪ್ರಧಾನ ಪಾತ್ರ ವಹಿಸಲು ಅವಕಾಶ ಸಿಗುವಂಥದ್ದು ಅದೊಂದು ಕ್ಷೇತ್ರದಲ್ಲಿ. ಮಹಿಳೆಯರು ಬಟ್ಟೆ ಬರೆ, ವೇಷ ಭೂಷಣಕ್ಕೆ ಹೆಚ್ಚು ಆದ್ಯತೆ, ಸಮಯವನ್ನು ಕೊಡುತ್ತಾರೆ. ಇದರ ಬದಲು ಇದೇ ಸಮಯವನ್ನು ಸ್ವಾವಲಂಬನೆ, ಅಭಿವೃದ್ಧಿ, ಸಮಾಜಮುಖೀ ಚಟುವಟಿಕೆಗಳಿಗೆ ಮೀಸಲಿರಿಸಿದರೆ ಸೂಕ್ತ. ಹೆಣ್ಣುಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ಒದಗಿಸುವ ಕೆಲಸವೂ ಆಗಬೇಕು.
– ವಿದ್ಯಾ ಕುಮಾರಿ
ಅಪರ ಜಿಲ್ಲಾಧಿಕಾರಿ, ಉಡುಪಿ ಶಿಕ್ಷಣದಲ್ಲಿ ಸಾಧಕರ ಕಥಾನಕ ಅಗತ್ಯ
ಸುಮಾರು 70 ವರ್ಷಗಳ ಹಿಂದೆ ಕುಟುಂಬದ ಪುರುಷರು ತಪ್ಪು ಮಾಡಿದರೂ ಮಹಿಳೆಯರಿಗೆ ಸತ್ಯ ಹೇಳುವ ಧೈರ್ಯ ಇದ್ದಿರಲಿಲ್ಲ. ಹೆಚ್ಚೆಂದರೆ ಹತ್ತನೆಯ ತರಗತಿಯವರೆಗೆ ಕಲಿಸುತ್ತಿದ್ದರು. ಗಂಡನ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿರುವವಳು ಹೆಚ್ಚು ಏಕೆ ಕಲಿಯಬೇಕು ಎಂದು ಪ್ರಶ್ನಿಸುತ್ತಿದ್ದರು. ಹೆಚ್ಚು ಓದಿ ಏನಾಗಬೇಕಿದೆ ಎಂದೂ ಕೇಳುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಮನೆಯಲ್ಲಿ ತಾಯಿಯಾದವರು ತಮ್ಮ ಮಗಳಿಗೂ “ನೀನು ಯಾರಿಗೂ ಕಡಿಮೆ ಇಲ್ಲ’ ಎಂದು ಧೈರ್ಯ ತುಂಬಬೇಕು. ಆತ್ಮವಿಶ್ವಾಸ ಬೆಳೆಸಬೇಕು. ಇಂತಹ ಆತ್ಮಸ್ಥೈರ್ಯ ಮೂಡಿದರೆ ಯಾರೂ ಮಹಿಳೆಯರನ್ನು ತಡೆಯಲಾರರು. ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು ಎನ್ನುವಂತೆ ಬಗ್ಗಿದಷ್ಟೂ ಹೊತ್ತು ಗುದ್ದುತ್ತಲೇ ಇರುತ್ತಾರೆ. ಒಮ್ಮೆ ಎದ್ದುನಿಂತರೆ ಗುದ್ದುವವನು ದೂರಕ್ಕೆ ಸರಿದು ನಿಲ್ಲುತ್ತಾನೆ. ಮಹಿಳೆಯೂ ಈ ದಿಸೆಯಲ್ಲಿ ಕಾರ್ಯ ಪ್ರವೃತ್ತಳಾಗಬೇಕು. ಆತ್ಮಸ್ಥೈರ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಇಚ್ಛಾಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಗಳಲ್ಲಿ ಇಚ್ಛಾಶಕ್ತಿಯನ್ನು ತೊಡಗಿಸಬೇಕು. ಅದಾದರೆ ಉಳಿದೆಲ್ಲವೂ ಈಡೇರಬಹುದು. ಶಿಕ್ಷಣ ಕ್ರಮದಲ್ಲಿ ರಾಣಿ ಅಬ್ಬಕ್ಕ ದೇವಿಯಂತಹ ಸಾಧಕ ಮಹಿಳೆಯರ ಪರಿಚಯವನ್ನು ಮಾಡಿಸಬೇಕು. ತಾಯಿ ನೀಡುವ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣವೂ ಅರ್ಥವತ್ತಾಗಿ ಸಿಗಬೇಕು. ಹೆಣ್ಣು ಮಕ್ಕಳು ತಲೆ ಎತ್ತಿ ಬದುಕುವಂತಹ ಪ್ರೇರಣೆ ಮನೆಯಿಂದಲೇ ಸಿಗಬೇಕಾದದ್ದು ಅತ್ಯವಶ್ಯ.
– ಡಾ| ಸಂಧ್ಯಾ ಎಸ್. ಪೈ
ವ್ಯವಸ್ಥಾಪಕ ಸಂಪಾದಕರು, ತರಂಗ