ರಾಮನಗರ: ಅನೇಕ ಕಾರಣಗಳಿಂದ ರಣಹದ್ದುಗಳ ಸಂತತಿ ಅಳಿವಿನ ಅಂಚು ತಲುಪಿದ್ದು ಅವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಸಾಹಿತಿ ಪ್ರೋ. ಶಿವನಂಜಯ್ಯ ತಿಳಿಸಿದರು.
ರಾಮನಗರ ಜಿಲ್ಲಾ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಸಂಯುಕ್ತವಾಗಿ ಶ್ರೀರಾಮ ದೇವರ ಬೆಟ್ಟ- ರಣ ಹದ್ದು ವನ್ಯಜೀವಿ ಧಾಮದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಉದ್ಘಾಟಿಸಿ ಮಾತನಾಡಿದರು. ಪರಿಸರ ಸಮತೋಲನಕ್ಕೆ ಸಕಲ ಚರಾಚರಗಳೂ ತಮ್ಮದೇ ಕೊಡುಗೆ ನೀಡುತ್ತವೆ. ಎಲ್ಲಾ ಪ್ರಾಣಿ ಪಕ್ಷಿಗಳು ಮಾನವನ ಸ್ನೇಹಿಗಳೇ. ಈ ನೆಲೆಯಲ್ಲಿ ಮಾನವನೂ ಪ್ರಾಣಿ ಪಕ್ಷಿ ಗಿಡಮರಗಳೊಡನೆ ಮಧುರ ಸಂಬಂಧ ಇರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಕೈಪಿಡಿ: ರಣಹದ್ದುಗಳು ಮತ್ತು ರಾಮದೇವರಬೆಟ್ಟ ರಣಹದ್ದು ವನ್ಯಜೀವಿ ಧಾಮದ ವಿವಿಧ ಪಕ್ಷಿಗಳು ರಣಹದ್ದುಗಳ ಕುರಿತ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದ ಜಾನಪದ ವಿದ್ವಾಂಸ ಹಾಗೂ ಪರಿಸರ ಪ್ರೇಮಿ ಡಾ.ಎಂ.ಬೈರೇಗೌಡ, ಕೇವಲ ಸತ್ತ ಪ್ರಾಣಿಗಳ ಮಾಂಸ ತಿಂದು, ನೀರು ಮತ್ತು ವಾಯುಮಾಲಿನ್ಯ ತಡೆದು ಮಾನವ ಆರೋಗ್ಯ ಕಾಪಾಡುವ, ನಿಸರ್ಗದ ಜಲಗಾರನಾಗಿ ಕೆಲಸ ಮಾಡುತ್ತಿರುವ ರಣಹದ್ದುಗಳನ್ನು ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು. ಈ ನಿಟ್ಟಿನಲ್ಲಿ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಅರಣ್ಯ ಇಲಾಖೆಯೂ ಸಂಪೂರ್ಣ ಸಹಕಾರ ನೀಡುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಎನ್.ಹೆಗಡೆ ಈಗಾಗಲೇ ರಣಹದ್ದುಗಳ ಸಂತತಿ ಕಡಿಮೆಯಾಗುತ್ತಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು. ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಕಾರ್ಯದರ್ಶಿ ಶಶಿಕುಮಾರ್, ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ಶನಿವಾರವನ್ನು ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವಾಗಿ ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ರಣಹದ್ದು ತಜ್ಞರು ಸೇರಿದಂತೆ ವಿಶೇಷವಾಗಿ ಆಚರಿಸುತ್ತಿದ್ದೆವು. ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದಲೂ ಜನ ಆಗಮಿಸುತ್ತಿದ್ದರು. ಕೋವಿಡ್-19 ಕಾರಣದಿಂದ ಸದರಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸ ಲಾಗುತ್ತಿದೆ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ರಾಮ ದೇವರ ಬೆಟ್ಟ ರಣಹದ್ದು ವನ್ಯಜೀವಿಧಾಮಕ್ಕೆ ಆಗಮಿಸಿದ ಪ್ರವಾಸಿಗರಿಗೆ ರಣಹದ್ದುಗಳ ಬಗೆಗೆ ಜಾಗೃತಿ, ಟೆಲಿಸ್ಕೋಪ್ ಮೂಲಕ ರಣಹದ್ದುಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವ ಜತೆಗೆ ಮಾಹಿತಿ ಕೈಪಿಡಿ ನೀಡಿ, ದಿನಪೂರ್ತಿ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು. ವಲಯ ಅರಣ್ಯಾಧಿಕಾರಿ ಎ.ಕಿರಣ್ ಕುಮಾರ್, ಕುಮಾರ್, ಕೆ.ರಾಜು, ವಾಸು, ವೆಂಕಟೇಶ್, ಶ್ರೀನಿವಾಸ್, ನಾರಾಯಣ, ನಾಗೇಂದ್ರ ಗುರುಲಿಂಗಯ್ಯ, ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ, ಖಜಾಂಚಿ ಗಂಗಾಧರ್ ಬಿ.ವಿ, ಸದಸ್ಯರಾದ ಚೇತನ್, ಶ್ರೇಯಸ್, ಸತ್ಯಪ್ರಮೋದ್, ದರ್ಶನ್ ಇದ್ದರು.