ಬೆಳ್ತಂಗಡಿ : ತಂತ್ರಜ್ಞಾನ, ವಿಜ್ಞಾನ, ಮನುಕುಲ, ಧರ್ಮ ಜತೆಯಾಗಿ ಸಾಗಿದಾಗ ಸಮಾಜದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಹೊಂದಲು ಸಾಧ್ಯ. ತಂತ್ರಜ್ಞಾನ ಅತ್ಯಂತ ವೇಗವಾಗಿ ಸಾಗುತ್ತಿದ್ದು, ಜನತೆಯೂ ಆ ವೇಗಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಂದು ಜಗತ್ತಿನಲ್ಲಿ ವಸ್ತುಗಳು ಸ್ಮಾರ್ಟ್ ಆಗುತ್ತಿವೆ. ಮನುಷ್ಯರೂ ಸ್ಮಾರ್ಟ್ ಆಗಬೇಕಿದೆ ಎಂದು ಶಿವಮೊಗ್ಗ ಶಂಕರ ಘಟ್ಟದ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ| ಚಿದಾನಂದ ಗೌಡ ಹೇಳಿದರು.
ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾ ವಿದ್ಯಾನಿಲಯದ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಮಾಹಿತಿ ವಿಜ್ಞಾನ ಹಾಗೂ ಎಂಜಿನಿಯರಿಂಗ್ ವಿಭಾಗದಿಂದ ಹಮ್ಮಿಕೊಂಡಿದ್ದ ‘ರೀಸೆಂಟ್ ಟ್ರೆಂಡ್ಸ್ ಇನ್ ಟೆಕ್ನಾಲಜಿ’ ಎಂಬ ಅಂತಾರಾಷ್ಟ್ರೀಯ ಸಂಶೋಧನ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅದ್ಭುತಗಳಲ್ಲಿ ಅಮೇರಿಕಾದ ನ್ಯೂಯಾರ್ಕ್ ನಲ್ಲಿದ್ದ ವಲ್ಡ್ ಟ್ರೇಡ್ ಸೆಂಟರ್‌ಗಳೂ ಸೇರಿದ್ದವು. ಆದರೆ ಅದನ್ನು ಮೆಕಾನಿಕಲ್ ಎಂಜಿಯರಿಂಗ್ ವಿಭಾಗದ ವಿಮಾನಗಳು ಹೊಡೆದುರುಳಿಸಿದವು. ಮನು ಕುಲಕ್ಕೆ ಎರವಾಗುವ ತಂತ್ರಜ್ಞಾನ ಗಳಿಂದ ಅಪಾಯವಿದೆ. ನಮ್ಮಲ್ಲಿರುವ ಶಕ್ತಿಯನ್ನು ಉತ್ತಮ ಕಾರ್ಯಕ್ಕೆ ಬಳಸಬೇಕೆಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿ, ಮನುಷ್ಯ ತಂತ್ರಜ್ಞಾನದ ದಾಸನಾಗುತ್ತಿದ್ದಾನೆ. ಉತ್ತಮ ಜೀವನ ನಡೆಸಲು, ಅಭಿವೃದ್ಧಿಗಾಗಿ ತಂತ್ರ ಜ್ಞಾನವನ್ನು ಬಳಸಲಾಯಿತು. ಆದರೆ ಸಮಯ ಉರುಳಿದಂತೆ ಯುದ್ಧಗಳು ಆರಂಭವಾದವು. ಸ್ವ-ಪ್ರತಿಷ್ಠೆಗಾಗಿ, ಪ್ರತಿ ದೇಶವೂ ತಮ್ಮನ್ನು ವೈಭವೀಕರಿಸುವ ಸಲುವಾಗಿ ತಂತ್ರಜ್ಞಾನವನ್ನು ಬಳಸಿ ಕೊಂಡವು. ಇದರಿಂದಾಗಿ ಅತ್ಯಂತ ವೇಗವಾಗಿ ತಂತ್ರಜ್ಞಾನ ಬೆಳೆಯುತ್ತಾ ಸಾಗಿತು. ಇಂದು ಮನುಷ್ಯ ಚಂದ್ರಲೋಕ, ಮಂಗಳ ಗ್ರಹಕ್ಕೆ ಹೋಗಲು ಪ್ರಯತ್ನಿಸುತ್ತಿ ದ್ದಾನೆ. ಆದರೆ ಮಂಗಳ ಗ್ರಹಕ್ಕೆ ಹೋಗಿ ವಾಪಸ್ ಆಗಮಿಸುವ ಸಮಯದಲ್ಲಿ ಭೂಮಿಯಲ್ಲಿ ತಂತ್ರಜ್ಞಾನದಲ್ಲಿ ವೇಗದ ಬದಲಾವಣೆ ಆಗುತ್ತಿರುವುದರಿಂದ ಮತ್ತೆ ಹೊಂದಾಣಿಕೆ ಮಾಡಿಕೊಳ್ಳಲು ಪರದಾಡ ಬೇಕಾಗಬಹುದು ಎಂದರು.
ಮನುಷ್ಯನನ್ನು ಆಳಲಿವೆ
2030ರ ಸುಮಾರಿಗೆ ಭೂಮಿಯಲ್ಲಿರುವ ಜನತೆಯನ್ನು ವಸ್ತುಗಳು ಆಳಲು ಆರಂಭಿಸಿರುತ್ತವೆ ಎಂದು ಸ್ವಾರಸ್ಯಕರವಾಗಿ ಡಾ| ಚಿದಾನಂದ ಗೌಡ ವಿವರಿಸಿದರು. ಎಲ್ಲ ವಸ್ತುಗಳಿಗೆ ತಂತ್ರಾಂಶವನ್ನು ಜೋಡಿಸಲಾಗುತ್ತದೆ. ಅವುಗಳು ತನ್ನಷ್ಟಕ್ಕೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಉದಾಹರಣೆಗೆ ಒಬ್ಬನ ಮನೆಯಲ್ಲಿರುವ ಫ್ರಿಡ್ಜ್ ನಲ್ಲಿ ಹಾಲು ಖಾಲಿಯಾದರೆ ಅದು ಆ ವ್ಯಕ್ತಿಯ ಕಾರಿಗೆ ಸಂದೇಶ ರವಾನಿಸುತ್ತದೆ. ಕೆಲಸದಿಂದ ಹಿಂದಿರುಗಿದ ವ್ಯಕ್ತಿ ಕಾರಿನಲ್ಲಿ ಬರುವ ವೇಳೆ ಹಾಲು ದೊರೆಯುವ ಸ್ಥಳದಲ್ಲಿ ತನ್ನಷ್ಟಕ್ಕೇ ನಿಂತು ಬಿಡುತ್ತದೆ. ಆ ವ್ಯಕ್ತಿ ಹಾಲಿನ ಅಗತ್ಯವಿಲ್ಲವೆಂದರೂ ತಿಳಿಯುವ ಕಾರ್ಯವನ್ನು ಕಾರು ಮಾಡುವುದಿಲ್ಲ. ಅನಿವಾರ್ಯವಾಗಿ ಅಗತ್ಯವಿಲ್ಲದಿದ್ದರೂ ಆತ ಹಾಲು ಖರೀದಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದರು.
ಹಳ್ಳಿಗಳತ್ತ ಸಾಗಲಿ
ತಂತ್ರಜ್ಞಾನದ ಹರಿವು ಹಳ್ಳಿಗಳತ್ತ ಸಾಗಬೇಕಿದೆ. ಆಗಲೇ ಮಹತ್ವದ ಬದಲಾವಣೆಗಳಾಗಲು ಸಾಧ್ಯ. ವಿದ್ಯುತ್ ಒಲೆಗಳನ್ನು ಗ್ರಾಮೀಣ ಮಹಿಳೆಯರೂ ಬಳಸುವಂತಾದರೆ ಆಗ ಅವರ ಶ್ರಮ, ಶಕ್ತಿಯ ಉಳಿಕೆಯಾಗಿ ಸಾರ್ಥಕತೆ ಸಾಧಿಸಲು ಸಾಧ್ಯ.
-
ಡಾ| ಡಿ. ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ