ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಮೈಸೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ (ಎಸ್‌ಡಿಎಂ ಐಎಂಡಿ) ನೀಡುತ್ತಿರುವ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ (ಪಿಜಿಡಿಎಂ) ಶಿಕ್ಷಣಕ್ಕೆ ಅಮೆರಿಕದ ಅಕ್ರೆಡಿಟೇಶನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಆ್ಯಂಡ್ ಪ್ರೋಗ್ರಾಮ್ಸ್ (ಎ.ಸಿ.ಬಿ.ಎಸ್.ಪಿ.) ಅಂತಾರಾಷ್ಟ್ರೀಯ ಮಾನ್ಯತೆ ನೀಡಿದೆ.
ಮಾನ್ಯತೆಯ ಪ್ರದಾನ ಸಮಾರಂಭವು ಜೂ. 26ರಂದು ಅಮೆರಿಕದ ಲಾಸ್ ಏಂಜಲೀಸ್ ಬಳಿ ಇರುವ ಅನಹೆಮ್‌ನಲ್ಲಿ ನಡೆಯಲಿದ್ದು, ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕರಾದ ಡಾ| ಎನ್.ಆರ್. ಪರಶುರಾಮನ್ ಕೂಡ ಸಮಾರಂಭದಲ್ಲಿ ಭಾಗವಹಿಸುವರು.
ಈ ಸಂಸ್ಥೆಯು ಜಾಗತಿಕ ಮನ್ನಣೆಗೆ ಪಾತ್ರವಾದ ಬಿ. ಸ್ಕೂಲ್ ಆಗಿದ್ದು, ವಿಶ್ವದ ಬಿ. ಸ್ಕೂಲ್‌ಗಳು ಮತ್ತು ವಿಶ್ವವಿದ್ಯಾನಿಲಯಗಳೊಂದಿಗೆ ವಿನಿಮಯ ಕಾರ್ಯಕ್ರಮಗಳು, ಸಂಶೋಧನಾ ಕಾರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಭಾಗಿತ್ವಕ್ಕೆ ಸಂಸ್ಥೆಗೆ ಅವಕಾಶ ದೊರಕಲಿದೆ. ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಾರೆ. ಸಂಸ್ಥೆಯ ಪ್ರಾಧ್ಯಾಪಕರು ಕೂಡ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹೊಂದಿದ ಇತರ ಸಂಸ್ಥೆಗಳ ಅಧ್ಯಾಪಕರೊಂದಿಗೆ ವಿಚಾರ ವಿನಿಮಯ ನಡೆಸಲು ಮುಕ್ತ ಅವಕಾಶವಿದೆ.
ಸಂಸ್ಥೆಯಲ್ಲಿ ನಾಯಕತ್ವ ಗುಣ, ಯೋಜನಾಬದ್ಧ ಬೋಧನಾ ವಿಧಾನ, ಪ್ರಾಧ್ಯಾಪಕರ ಶೈಕ್ಷಣಿಕ ಸಾಧನೆ, ವಿದ್ಯಾರ್ಥಿಗಳೊಂದಿಗೆ ಸೌಹಾರ್ದಯುತ ಸಂಬಂಧ, ಮಾನವೀಯ ಮೌಲ್ಯಗಳು – ಇತ್ಯಾದಿಗಳ ಪರಿಶೀಲನೆ ನಡೆಸಿ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎ.ಸಿ.ಬಿ.ಎಸ್.ಪಿ. ಯ ಪ್ರಧಾನ ಮೌಲ್ಯಮಾಪನಾಧಿಕಾರಿ ಡಾ| ಸ್ಟೆವೆ ಪಸ್ಕೆಲ್ ಹೇಳುವಂತೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉತ್ಕೃಷ್ಟ ಗುಣಮಟ್ಟದ ಉದ್ಯಮಾಡಳಿತ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಿ ಮಾನ್ಯತೆಯನ್ನು ನೀಡಲಾಗಿದೆ.
ಇ ಪಾಸ್ ಮಾನ್ಯತೆ: ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ (ಇಎಫ್‌ಎಂಡಿ) ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಸಮಾರಂಭದಲ್ಲಿ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಶಿಕ್ಷಣಕ್ಕೆ ಇ-ಪಾಸ್ (ಎಜುಕೇಶನ್ ಪಾಲಿಸಿ ಆ್ಯಂಡ್ ಆಕ್ರೆಡಿಟೇಶನ್ ಸ್ಟಾಂಡರ್ಡ್) ಮಾನ್ಯತೆ ನೀಡಲಾಯಿತು.ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಸಂಸ್ಥೆಯ ನಿರ್ದೇಶಕರಾದ ಡಾ| ಎನ್. ಆರ್. ಪರಶುರಾಮನ್ ಬರ್ಲಿನ್‌ನಲ್ಲಿ ಮಾನ್ಯತಾ ಪತ್ರವನ್ನು ಸ್ವೀಕರಿಸಿದರು.
2016ರ ಜುಲೈಯಲ್ಲಿ ಸಂಸ್ಥೆಯ ವತಿಯಿಂದ ಸ್ವಯಂ ಅಧ್ಯಯನ ವರದಿ ಸಲ್ಲಿಸಿದ ಬಳಿಕ ಅಕ್ಟೋಬರ್‌ನಲ್ಲಿ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್‌ನ (ಇಈಒಆ) ಶಿಕ್ಷಣ ತಜ್ಞರ ಸಮಿತಿಯು ಮೈಸೂರಿನಲ್ಲಿರುವ ಸಂಸ್ಥೆಗೆ ಭೇಟಿ ನೀಡಿತು. ಮಾನದಂಡಗಳಿಗೆ ಪೂರಕವಾದ ದಾಖಲೆಗಳು, ಸಂಸ್ಥೆಯ ಚಟುವಟಿಕೆಗಳ ವರದಿಗಳು ಮತ್ತು ಮೂಲಸೌಕರ್ಯಗಳನ್ನು ಸಮಿತಿಯವರು ಪರಿಶೀಲನೆ ನಡೆಸಿ ಅಂತಾರಾಷ್ಟ್ರೀಯ ಇ ಪಾಸ್ ಮಾನ್ಯತೆಗೆ ಅರ್ಹವೆಂದು ಅಂಗೀಕರಿಸಲಾಯಿತು.