Advertisement

ಜ್ಞಾನಂಗೆ ಅಂತಾರಾಷ್ಟ್ರೀಯ ಮನ್ನಣೆ

11:41 AM Jul 08, 2019 | Lakshmi GovindaRaj |

ಕನ್ನಡದಲ್ಲಿ ಈಗಾಗಲೇ ಬುದ್ಧಿಮಾಂದ್ಯ ಮಕ್ಕಳ ಕುರಿತು ಸಿನಿಮಾಗಳು ಬಂದಿವೆ. ಆದರೆ, ಇಲ್ಲೊಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದೆ. ಅಂದಹಾಗೆ, ಆ ಚಿತ್ರದ ಹೆಸರು “ಜ್ಞಾನಂ’. ಇದೊಂದು ಹೊಸತನ ಇರುವ ಚಿತ್ರ. ವರದರಾಜ್‌ ವೆಂಕಟಸ್ವಾಮಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Advertisement

ತಮ್ಮ ಮನೆಯ ಪಕ್ಕದಲ್ಲಿರುವ ಬುದ್ದಿಮಾಂದ್ಯ ಮಗುವೊಂದರ ಚಲನವಲನ ನೋಡಿ, ಅದರ ಪ್ರೇರಣೆಯಿಂದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮತ್ತು ಸಂಕಲನವನ್ನು ಮಾಡಿ ನಿರ್ದೇಶಿಸಿದ್ದಾರೆ. ಅವರ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಹಾಗಾದರೆ, ಚಿತ್ರದ ಕಥೆ ಏನು? ಈ ಕುರಿತು ಹೇಳುವ ನಿರ್ದೇಶಕರು, “ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ.

ಕಥೆ ಕುರಿತು ಹೇಳುವುದಾದರೆ, ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೂಬ್ಬ ಬುದ್ದಿಮಾಂದ್ಯ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ಶಕ್ತಿ ಹೇಗಿದೆ ಅನ್ನುವುದನ್ನು ತೋರಿಸುವ ಪ್ರಯತ್ನವಿದು. ಇಂತಹ ಗುಣವಿರುವ ಪಾತ್ರದಲ್ಲಿ ಮಾಸ್ಟರ್‌ ಧ್ಯಾನ್‌.

ಇದೇ ರೀತಿ ಮಕ್ಕಳು ಇರುವ ಸ್ಥಳಕ್ಕೆ ಭೇಟಿ ನೀಡಿ ಅವರ ಚಲನವಲನಗಳನ್ನು ಕಂಡು ನಟಿಸಿದ್ದಾನೆ. ಇನ್ನು, ಬುದ್ಧಿವಂತ ಹುಡುಗನಾಗಿ ಲೋಹಿತ್‌ ಐದು ಪುಟದ ಸಂಭಾಷಣೆಯನ್ನು ಒಂದೇ ಟೇಕ್‌ಗೆ ಓಕೆ ಮಾಡುವ ಮೂಲಕ ಮೆಚ್ಚುಗೆ ಪಡೆದಿದ್ದಾನೆ’ ಎಂಬುದು ನಿರ್ದೇಶಕರ ಮಾತು. ಬಹಳ ದಿನಗಳ ಬಳಿಕ ಹಿರಿಯ ಕಲಾವಿದೆ ಶೈಲಶ್ರೀ ಚಿತ್ರದಲ್ಲಿ ನಟಿಸಿದ್ದಾರೆ.

ಅವರಿಲ್ಲಿ ಮಕ್ಕಳು ಎಷ್ಟೇ ಪ್ರೀತಿ ತೋರಿಸಿದರೂ, ಅವರನ್ನು ನಿರ್ಲಕ್ಷಿಸುವ ಪಾತ್ರದಲ್ಲಿ ಶೈಲಶ್ರೀ ಕಾಣಿಸಿಕೊಂಡಿದ್ದಾರಂತೆ. ಉಳಿದಂತೆ ಸಿ.ವೇಣು ಭಾರದ್ವಾಜ್‌, ರಾಧಿಕಾ ಶೆಟ್ಟಿ, ಸಂತೋಷ್‌, ಜ್ಯೋತಿ ಮುರೂರು, ನವ್ಯಾ, ಕುಶಾಲ್‌ ನಾರಾಯಣ್‌ ಸೇರಿದಂತೆ ಹಲವರು ನಟಿಸಿದ್ದಾರೆ. ಇತ್ತೀಚೆಗೆ ಲಹರಿ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

Advertisement

ಈ ವೇಳೆ ಲಹರಿ ವೇಲು ಮಾತನಾಡಿ, “ಬುದ್ಧಿಮಾಂದ್ಯ ಮಕ್ಕಳು, ನಿಜವಾಗಿಯೂ ಬುದ್ಧಿವಂತರು. ಅವರು ದೇವರ ಮಕ್ಕಳು’ ಎಂದರು. ರೋಹಿತ್‌ ಸೋವರ್‌ ಸಂಗೀತವಿದ್ದು, ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಉಳಿದ ಹಾಡುಗಳನ್ನು ಸ್ಪರ್ಶ ಹಾಡಿದ್ದಾರೆ. ಸಿ.ವೇಣು ಭಾರದ್ವಾಜ್‌ ಮತ್ತು ಸಿ.ರಾಜ್‌ಭಾರದ್ವಾಜ್‌ ನಿರ್ಮಾಣ ಮಾಡಿರುವ “ಜ್ಞಾನಂ’. ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next