Advertisement
ಭರವಸೆಯ ಹೊಂಗಿರಣಶುಶ್ರೂಷಕಿಯರು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗ. ವೈದ್ಯರು ಮತ್ತು ರೋಗಿಗಳ ನಡುವೆ ಅವರು ರಾಯಭಾರಿ ಗಳಾಗಿ ಕೆಲಸ ಮಾಡುತ್ತಾರೆ. ರೋಗಿಯ ನಾಡಿಮಿಡಿತ, ಅವರ ಚೇತರಿಕೆಯ ಹಾದಿ ವೈದ್ಯರಿಗಿಂತಲೂ ಶುಶ್ರೂಷಕಿಯರಿಗೆ ಬೇಗ ತಿಳಿಯುತ್ತದೆ. ತಾಯಿ ಹೃದಯ ಇದ್ದರೆ ಮಾತ್ರ ನಿಸ್ವಾರ್ಥ ಸೇವೆ ಸಾಧ್ಯ. ರೋಗಿಗಳ ಜತೆಗೆ ವೈದ್ಯರಿಗಿಂತಲೂ ಹೆಚ್ಚು ಬಾಂಧವ್ಯ ಹೊಂದಿರುವವರು ಇವರು. ಅವರು ರೋಗಿಗಳ ಪಾಲಿನ ಭರವಸೆಯ ಹೊಂಗಿರಣವಾಗಿದ್ದಾರೆ.
– ಡಾ| ಸಿ.ಎನ್. ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ
Related Articles
ವೈದ್ಯರು ಆರೋಗ್ಯ ಸೇವೆಯ ಮೆದುಳಾದರೆ ಶುಶ್ರೂಷಕಿ ಯರು ಅದರ ಹೃದಯ ವಾಗಿರು ತ್ತಾರೆ. ಒಬ್ಬ ರೋಗಿ ಗುಣಮುಖರಾಗುವ ಹಿಂದೆ ಶುಶ್ರೂಷಕಿಯರ ಪರಿಶ್ರಮ ತ್ಯಾಗ ಹಾಗೂ ಸಹಾನುಭೂತಿ ಅಡಗಿರುತ್ತದೆ. ಹಗಲು -ರಾತ್ರಿ ರೋಗಿಯ ಜತೆಯಲ್ಲಿ ಇದ್ದು ಅವರ ಪ್ರತಿಯೊಂದು ಬೇಕು -ಬೇಡಗಳ ಬಗ್ಗೆ ಗಮನಹರಿಸಿ ಅವರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುವ ಶುಶ್ರೂಷಕಿಯರು ತಾಳ್ಮೆಯ ಪ್ರತೀಕವಾಗಿರುತ್ತಾರೆ.
– ಡಾ| ನಿಕಿನ್ ಶೆಟ್ಟಿ , ಫಿಸಿಷಿಯನ್, ಜಿಲ್ಲಾ ಆಸ್ಪತ್ರೆ, ಉಡುಪಿ
Advertisement
ಪ್ರಾಣ ಪಣಕ್ಕಿಟ್ಟು ಆರೈಕೆ ಮಾಡುವ ದೇವತೆಗಳುಶುಶ್ರೂಷಕಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಅವರಿಲ್ಲದೆ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ, ಆರೈಕೆ ಕಷ್ಟಸಾಧ್ಯ. ಒಬ್ಬ ವೈದ್ಯ ರೋಗಿಗೆ 5ರಿಂದ 10 ನಿಮಿಷ ಸಮಯ ನೀಡಬಹುದು. ಆದರೆ ಶುಶ್ರೂಷಕಿಯರು ದಿನಪೂರ್ತಿ ಆರೈಕೆ ಮಾಡುತ್ತಾರೆ. ರೋಗಿಯ ಚೇತರಿಕೆಯಲ್ಲಿ ವೈದ್ಯರಿಗಿಂತ ಹೆಚ್ಚಿನ ಕೊಡುಗೆ ಇವರದು. ಅದರಲ್ಲೂ ಕೊರೊನಾದಂತಹ ಸಂದರ್ಭದಲ್ಲಿ ತಮ್ಮ ಮತ್ತು ಕುಟುಂಬದವರ ಪ್ರಾಣವನ್ನು ಪಣಕ್ಕಿಟ್ಟು ನಿಸ್ವಾರ್ಥವಾಗಿ ಸೋಂಕುಪೀಡಿತರ ಆರೈಕೆ ಮಾಡುತ್ತಿರುವ ದೇವತೆಗಳು ಇವರು. ಸೇವಾ ಮನೋಭಾವ, ವೃತ್ತಿ ನೈತಿಕತೆ, ಮಾನವೀಯ ಗುಣ, ತಾಯಿಯಂಥ ಆರೈಕೆಯಿಂದಾಗಿ ಭಾರತೀಯ ಶುಶ್ರೂಷಕಿಯರಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ.
-ಡಾ| ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆಗಳು ರೋಗಿ-ವೈದ್ಯರ ನಡುವಿನ ಕೊಂಡಿ
ನರ್ಸಿಂಗ್ ವೃತ್ತಿಗೆ ಅದರದ್ದೇ ಆದ ಘನತೆ ಇದೆ. ರೋಗಿ ಮತ್ತು ವೈದ್ಯರ ನಡುವೆ ಕೊಂಡಿಯಾಗಿ ಅವರು ಕೆಲಸ ನಿರ್ವಹಿ ಸುತ್ತಾರೆ. ಈ ವೃತ್ತಿಯಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಬಹಳ ಮುಖ್ಯ. ಅದೆಷ್ಟೋ ಸಂದರ್ಭಗಳಲ್ಲಿ ರೋಗಿಗಳು ತನ್ನ ರೋಗದ ಗೌಪ್ಯವಿಚಾರವನ್ನು ದಾದಿಯರ ಜತೆ ಹಂಚಿಕೊಳ್ಳುತ್ತಾರೆ. ರೋಗಿಯೊಡನೆ ತಾಳ್ಮೆಯಿಂದ ವರ್ತಿಸಿ ತನ್ನ ವೃತ್ತಿಗೆ ಗೌರವ ಸಲ್ಲಿಸುತ್ತಾರೆ.
ಸಮಾಜದಲ್ಲಿ ಶುಶ್ರೂಷಕಿಯರಿಗೆ ಮತ್ತಷ್ಟು ಗೌರವ ಸಿಗಬೇಕಿದೆ. ಇಂದಿನ ಕೊರೊನಾ ಸಮಯದಲ್ಲಿ ನರ್ಸ್‌ಗಳ ಸೇವೆ ಅನನ್ಯ ಅದೆಷ್ಟೋ ಸಂದರ್ಭದಲ್ಲಿ ಮನೆಗಳಿಗೂ ತೆರಳದೆ ದಿನವಿಡೀ ಆಸ್ಪತ್ರೆಗಳಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಅವರಿಗೆ ಸರಿಯಾದ ರೀತಿಯಲ್ಲಿ ಗೌರವ ನೀಡಬೇಕಿದೆ.
– ಡಾ| ಜಿ.ಜಿ. ಲಕ್ಷ್ಮಣ ಪ್ರಭು, ಮೂತ್ರರೋಗ ತಜ್ಞರು, ಮುಖ್ಯಸ್ಥರು, ಯುರಾಲಜಿ ವಿಭಾಗ, ಕೆಎಂಸಿ, ಮಂಗಳೂರು