Advertisement

ಅಂತಾರಾಷ್ಟ್ರೀಯ ಮಾತೃಭಾಷಾ ದಿನ ವಿಶೇಷ: ಕನ್ನಡದ ಕ್ರಿಯೇಟರ್ ಗೆ ಪ್ರೋತ್ಸಾಹ ನೀಡಿದ ಯೂಟ್ಯೂಬ್

05:19 PM Feb 21, 2023 | |

ಯೂಟ್ಯೂಬ್ ನಲ್ಲಿ ತಂತಮ್ಮ ಕ್ಷೇತ್ರಗಳ ಅರಿವನ್ನು ಜನರಿಗೆ ಹಂಚುವ ಮೂಲಕ ಯೂಟ್ಯೂಬರ್ ಗಳು, ಏಕಕಾಲಕ್ಕೆ ಮಾಹಿತಿ ತಿಳಿಸುವ ಹಾಗೂ ತಮ್ಮ ಜೀವನವನ್ನೂ ರೂಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯೂಟ್ಯೂಬ್ ಮೂಲಕ ಇಂಗ್ಲಿಷ್ ನಲ್ಲಿ ಕಂಟೆಂಟ್ ಗಳನ್ನು ಅಸಂಖ್ಯಾತ ಜನರು ತಮ್ಮ ಚಾನೆಲ್ ಗಳ ಮೂಲಕ ಪ್ರಸಾರ ಮಾಡುತ್ತಾರೆ. ಆದರೆ ತಂತಮ್ಮ ಮಾತೃಭಾಷೆಯಲ್ಲಿ ಕಂಟೆಂಟ್ ಗಳನ್ನು ಹೆಚ್ಚಾಗಿ ಸ್ಥಳೀಯರಿಗೆ ತಲುಪಿಸಬೇಕೆಂಬುದು ಯೂಟ್ಯೂಬ್ ನ ಧ್ಯೇಯ. ಹೀಗೆ ಮಾತೃಭಾಷೆಯಲ್ಲಿ ಉತ್ತಮವಾದ, ಕಂಟೆಂಟ್ ಗಳನ್ನು ಒದಗಿಸುವ ಯೂಟ್ಯೂಬರ್ ಗಳಿಗೆ ಯೂಟ್ಯೂಬ್ ನಿಂದ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ವಿಷಯ ಎಷ್ಟೋ ಜನರಿಗೆ ತಿಳಿದಿರಲಿಕ್ಕಿಲ್ಲ. ಕನ್ನಡ ಭಾಷೆಯಲ್ಲಿ ಮಾಹಿತಿ ನೀಡುತ್ತಿರುವ ಯೂಟ್ಯೂಬರ್ ಗೆ ಯೂಟ್ಯೂಬ್ ನೀಡಿದ ಪ್ರೋತ್ಸಾಹ ಕೇಳಿದರೆ ಅಚ್ಚರಿಯಾಗುತ್ತದೆ. ಯೂಟ್ಯೂಬ್ ಸ್ಥಳೀಯ ಭಾಷೆಗಳಿಗೆ ನೀಡುವ ಮಹತ್ವವನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಹಿನ್ನೆಲೆಯಲ್ಲಿ ನೋಡಿದಾಗ ವಿಶೇಷ ಎನಿಸುತ್ತದೆ.

Advertisement

ಯೂಟ್ಯೂಬ್ ನಿಂದ ಇಂಥ ಪ್ರೋತ್ಸಾಹ ಪಡೆದ ಕನ್ನಡಿಗ ತುಮಕೂರು ಜಿಲ್ಲೆಯ ಮಂಜುನಾಥ.ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ತಿಮ್ಮನಹಳ್ಳಿ ಗ್ರಾಮದ ಮಂಜುನಾಥ ಅವರು ಕೃಷಿವಾಣಿ ಎಂಬ ಯೂಟ್ಯೂಬ್ ಚಾನೆಲ್ ಸೃಷ್ಟಿಸಿಕೊಂಡಿದ್ದಾರೆ.

ಬಡ ಕುಟುಂಬದಿಂದ ಬಂದ ಮಂಜುನಾಥ, ಬಾಲ್ಯದಿಂದಲೂ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದರು. ಒಂದೆಡೆ ಓದು, ಶಾಲೆಯಿಂದ ಬಂದ ಬಳಿಕ ತಂದೆಗೆ ಕೃಷಿಯಲ್ಲಿ ನೆರವು. ಅವರ ತಾಯಿ ಮೃತರಾದ ನಂತರ ಬೆಂಗಳೂರಿಗೆ ಹೋಗಿ, ಚಾಲಕನ ಕೆಲಸಕ್ಕೆ ಸೇರಿಕೊಂರು. 2018 ರವರೆಗೂ ಚಾಲಕನಾಗಿದ್ದರು. ಫುಡ್ ಪಾಯ್ಸನ್ ನಿಂದ ಕಣ್ಣಿಗೆ ತೊಂದರೆಯಾದ ಚಾಲಕನ ಕೆಲಸ ಬಿಡಬೇಕಾಗಿ ಬಂತು. ಆಗ ಅವರಿಗೆ 30 ವರ್ಷ. ಇಂಥ ಸಂದರ್ಭದಲ್ಲಿ ಏನಾದರೂ ಮಾಡಬೇಕಿತ್ತು. ಕೃಷಿಯಲ್ಲಿ ಚೆನ್ನಾಗಿ ಅನುಭವ ಇದ್ದುದರಿಂದ ಯೂಟ್ಯೂಬ್ ಚಾನೆಲ್ ಯಾಕೆ ಮಾಡಬಾರದು? ಅನಿಸಿತು. ಆಗ ಕನ್ನಡದಲ್ಲಿ ಕಂಟೆಂಟ್ ಗಳ ಕೊರತೆ ಇತ್ತು. 2018ರ ಡಿಸೆಂಬರ್ ನಲ್ಲಿ ಕೃಷಿವಾಣಿ ಎಂಬ ಯೂಟ್ಯೂಬ್ ಚಾನೆಲ್ ಶುರು ಮಾಡಿದರು. ಅವರ ಮೊಬೈಲ್ ಫೋನಿನಲ್ಲೇ ಕೃಷಿ ಸಂಬಂಧಿತ ವಿಷಯಗಳನ್ನು ಶೂಟ್ ಮಾಡಿಕೊಂಡು ಫೋನಿನಲ್ಲೇ ಎಡಿಟಿಂಗ್ ಮಾಡಿ ಚಾನೆಲ್ ಗೆ ಹಾಕಲು ಆರಂಭಿಸಿದರು.

ಯಾರು ಯಶಸ್ವಿ ರೈತರಿದ್ದಾರೆ. ಅವರ ಹೊಲದಲ್ಲಿ ಏನು ಮಾಡಿದ್ದಾರೆ? ಅದನ್ನು ಇತರರಿಗೂ ತಿಳಿಸುವ ಉದ್ದೇಶದಿಂದ ಚಾನೆಲ್ ಶುರು ಮಾಡಿದರು. ವಾರಕ್ಕೊಂದು ಕಂಟೆಂಟ್ ಹಾಕುತ್ತಿದ್ದರು. ಕೃಷಿ ವಿಷಯದಲ್ಲಿ ಅವರು ನೀಡುತ್ತಿದ್ದ ಮಾಹಿತಿಗಳು ಇಷ್ಟವಾಗಿ ಒಂದು ವರ್ಷದಲ್ಲಿ 4 ಸಾವಿರ ಚಂದಾದಾರರಾದರು!

ವರ್ಷಕ್ಕೊಮ್ಮೆ ಯೂಟ್ಯೂಬ್ ನೆಕ್ಸ್ಟ್ ಅಪ್ ಎಂಬ ಕಾರ್ಯಕ್ರಮ ನಡೆಸುತ್ತದೆ. ಇದರಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕಂಟೆಂಟ್ ನೀಡುತ್ತಿರುವ ಯೂಟ್ಯೂಬರ್ ಗಳನ್ನು ಆಯ್ಕೆ ಮಾಡಲಾಗುತ್ತದೆ. 10 ಸಾವಿರದಿಂದ 1 ಲಕ್ಷದೊಳಗೆ ಚಂದಾದರನ್ನು ಹೊಂದಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ. ಭಾರತದಾದ್ಯಂತ ಒಂದು ವರ್ಷಕ್ಕೆ 20 ಜನರನ್ನು ಆಯ್ಕೆ ಮಾಡಲಾಗುತ್ತದೆ. ಕರ್ನಾಟಕದಿಂದ ಆಯ್ಕೆಯಾದ ಇಬ್ಬರಲ್ಲಿ ಮಂಜುನಾಥ ಸಹ ಒಬ್ಬರು.

Advertisement

ಮಂಜುನಾಥ ಅವರಿಗೆ ಯೂಟ್ಯೂಬ್ ವತಿಯಿಂದಲೇ ಎರಡು ವಾರಗಳ ಕಾಲ ತರಬೇತಿ ನೀಡಲಾಯಿತು. ಇದರಲ್ಲಿ ಶೂಟಿಂಗ್, ಸಂಕಲನ, ಸ್ಕ್ರಿಪ್ಟಿಂಗ್, ವಿಷಯಗಳ ಆಯ್ಕೆ, ಹೆಚ್ಚು ಚಂದಾದಾರನ್ನು ಗಳಿಸಲು ಅನುಸರಿಬೇಕಾದ ವಿಧಾನಗಳನ್ನು ತಿಳಿಸಿಕೊಡಲಾಯಿತು. ಅಲ್ಲದೇ ಅವರಿಗೆ ಒಂದು ಸಾವಿರ ಅಮೆರಿಕನ್ ಡಾಲರ್ ಪ್ರೋತ್ಸಾಹ ಧನವನ್ನೂ ನೀಡಲಾಯಿತು!

ನಿಮ್ಮ ಯಶಸ್ಸಿನ ಸೂತ್ರವೇನು? ಎಂದು ಮಂಜುನಾಥ ಅವರನ್ನು ಕೇಳಿದರೆ, ಮೊದಲನೇ ಒಂದು ವರ್ಷ ಯೂಟ್ಯೂಬ್ ನಿಂದ ಹಣ ಬರಲಿಲ್ಲ. ಆದರೂ ಛಲ ಬಿಡದೆ ವಾರಕ್ಕೊಂದು ಕಂಟೆಂಟ್ ಹಾಕುತ್ತಾ ಹೋದೆ. ಒಂದು ವರ್ಷ ಆದ ಮೇಲೆ ಹಣ ಬರಲು ಶುರುವಾಯಿತು. ತಿಂಗಳಿಗೆ ಒಂದು ಸಣ್ಣ ಕುಟುಂಬ ನಿರ್ವಹಣೆ ಮಾಡುವಷ್ಟು ಸಂಭಾವನೆ ಬರುತ್ತಿತ್ತು. ಈಗ ನನ್ನ ಚಾನೆಲ್ ಗೆ 56 ಸಾವಿರ ಚಂದಾದಾರರಿದ್ದಾರೆ. ನಾಲ್ಕು ಜನರ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುವಷ್ಟು ಹಣ ಯೂಟ್ಯೂಬ್ ನಿಂದ ದೊರಕುತ್ತಿದೆ ಎನ್ನುತ್ತಾರೆ.

ಕಳೆದ 2 ವರ್ಷದಿಂದ ನಾನೂ ಕೃಷಿ ಮಾಡಲು ಶುರು ಮಾಡಿದೆ. 4 ಎಕರೆ ಜಮೀನಿದೆ. ಕಂಟೆಂಟ್ ನೀಡಲು ಹೋದಾಗ ಅನೇಕ ರೈತರಿಂದ ಕಲಿತ ಕೌಶಲ್ಯಗಳನ್ನು ಪಾಠಗಳನ್ನೂ ಕೃಷಿಯಲ್ಲಿ ಅಳವಡಿಸಿಕೊಂಡಿದ್ದೇನೆ. ಒಂದೆಡೆ ಕೃಷಿ, ಇನ್ನೊಂದೆಡೆ ಯೂಟ್ಯೂಬ್ ‍ಚಾನೆಲ್ ನನ್ನ ಜೀವನವನ್ನು ಯಶಸ್ಸಿನತ್ತ ಕೊಂಡೊಯ್ದಿದೆ. ಇದೊಂದು ಸ್ವ ಉದ್ಯೋಗ, ತುಂಬಾ ಜನರು ಗುರುತಿಸುತ್ತಾರೆ ಇಂಥ ಸ್ವಾವಲಂಬಿ ಜೀವನ ಸಂತಸ ಕೊಡುತ್ತದೆ ಎನ್ನುತ್ತಾರೆ.

ಒಂದು ನಿಶ್ಚಿತ ವಿಷಯ ಇಟ್ಟುಕೊಂಡೇ ಮಾಡಿದರೆ, ಯಶಸ್ಸು ಕಾಣಬಹುದು. ಯೂಟ್ಯೂಬ್ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುತ್ತಿದೆ. ನಮ್ಮ ಭಾಷೆಯಲ್ಲಿ ಮಾಡಿದರೆ ಅದು ಯಶಸ್ಸು ತಂದುಕೊಡುತ್ತದೆ. ನಮ್ಮ ಭಾಷೆಯ ಮೇಲೆ ನಮಗೆ ಹಿಡಿತ ರುವುದರಿಂದ, ನಾವು ತಿಳಿದಿರುವ ಕ್ಷೇತ್ರದ ವಿಷಯಗಳ ಬಗ್ಗೆ ವಿಡಿಯೋ ಮಾಡಿದರೆ ಖಂಡಿತ ಯಶಸ್ಸು ದೊರಕುತ್ತದೆ. ಮುಖ್ಯವಾಗಿ ಕಂಟ್ಯೂನಿಟಿ ಇರಬೇಕು ಎಂದು ಕಿವಿಮಾತು ಹೇಳುತ್ತಾರೆ.

ಯೂಟ್ಯೂಬ್ ನಲ್ಲೇ ನನಗೆ ಎಲ್ಲ ಮಾಹಿತಿ ದೊರಕಿತು. ನನ್ನ ಭಾಷೆಯಲ್ಲೇ ಯಶಸ್ವಿಯಾಗಲು ಯೂಬ್ಯೂಬ್ ಸಹಾಯ ಮಾಡಿತು. ಮಾತೃಭಾಷೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯೂಟ್ಯೂಬ್ ಅನ್ನು ಅವರ ಕೃತಜ್ಞತೆಯಿಂದ ನೆನೆಯುತ್ತಾರೆ.

ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿ ಕಾಂಗ್ರೆಸ್ ನ ಜೋಡೆತ್ತುಗಳ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next