Advertisement

ಅಧ್ಯಯನ ತಂಡದಿಂದ ಬಣ್ಣ ಬಣ್ಣದ ಪತಂಗಗಳಿಗಾಗಿ ಹುಡುಕಾಟ

07:08 PM Jul 24, 2019 | Sriram |

ಕಾಸರಗೋಡು: ವೈವಿಧ್ಯಮಯ ಜೀವ ಜಗತ್ತಿನಲ್ಲಿ ಪತಂಗಗಳು ಬಹಳ ವೈಶಿಷ್ಟ್ಯಗಳಿಂದ ಕೂಡಿವೆ. ಸಂಜೆಯಾಯಿತೆಂದರೆ ವಿದ್ಯುತ್‌ ದೀಪಗಳೆದುರಲ್ಲಿ ಹಾರಾಡುತ್ತಾ ಕೊನೆಯದಾಗಿ ಗೋಡೆಗಳಲ್ಲಿ ಮೌನವ್ರತ ಆಚರಿಸುವ ಈ ಕೀಟಗಳು ಚಿಟ್ಟೆ ಕುಟುಂಬದಲ್ಲಿ ಹಿರಿಯರ ಸ್ಥಾನವನ್ನು ಅಲಂಕರಿಸಿವೆ. ಭಾರತದಲ್ಲಿ ಇವುಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಯುವ ಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ಅಭಿರುಚಿಯನ್ನು ಮೂಡಿಸುವ ಸಲುವಾಗಿ ದೇಶದೆಲ್ಲಡೆ ಪತಂಗ ವಾರಾಚರಣೆಯನ್ನು ಜುಲೈ 20ರಿಂದ 29ರ ವರಗೆ ಆಚರಿಸಲಾಗುತ್ತದೆ.

Advertisement

ಈ ನಿಟ್ಟಿನಲ್ಲಿ ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಸದಸ್ಯರು ಒಟ್ಟು ಸೇರಿ ಕಿದೂರಿನಲ್ಲಿ ಪತಂಗ ನಿರೀಕ್ಷಣೆ ಶಿಬಿರವನ್ನು ಅಯೋಜಿಸಿದರು. ಸಂಜೆ ಆರಂಭವಾದ ಕಾರ್ಯಕ್ರಮವು ಮುಂಜಾವಿನವರೆಗೆ ಮುಂದುವರಿಯಿತು. ರಾಜೀವ್‌ ಭವನ, ಕಾಜೂರು ಪಳ್ಳ ಹಾಗೂ ರಸ್ತೆ ಬದಿಗಳಲ್ಲಿ ಅಧ್ಯಯನ ತಂಡ ಪತಂಗಗಳಿಗಾಗಿ ಹುಡುಕಾಡಿತು. ಇಪ್ಪತ್ತಕ್ಕಿಂತ ಹೆಚ್ಚು ಪತಂಗಗಳನ್ನು ನಿರೀಕ್ಷಿಸಲಾಯಿತು. ತುಂಬೆ ಗಿಡಗಳಲ್ಲಿ ಅತ್ಯಂತ ಹೆಚ್ಚು ಪತಂಗಗಳನ್ನು ಪತ್ತೆ ಹಚ್ಚಲಾಯಿತು. ಜೇಡಗಳು ಪತಂಗಗಳನ್ನು ಹಿಡಿದು ತಿನ್ನುವುದನ್ನೂ ಶಿಬಿರಾರ್ಥಿಗಳು ವೀಕ್ಷಿಸಿದರು.

ಉರಗ ತಜ್ಞರಾದ ಪ್ರಶಾಂತ್‌ ಕೃಷ್ಣ ಪೊಸಡಿಗುಂಪೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪತಂಗಗಳ ಲಾರ್ವಗಳೆಂದರೆ ಕಂಬಳಿ ಹುಳುಗಳು. ಇವುಗಳು ಬೆಳೆಗಳಿಗೆ ವಿನಾಶಕಾರಿಗಳಾದರೂ ಜೀವ ಜಗತ್ತಿನ ಆಹಾರ ಶೃಂಖಲೆಯಲ್ಲಿ ಮುಖ್ಯ ಕೊಂಡಿಗಳಾಗಿವೆ. ಹಲವಾರು ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಯಬೇಕಾದರೆ ಪತಂಗಗಳೇ ಬೇಕು. ರೇಷ್ಮೆ ಉತ್ಪಾದನೆಯಲ್ಲಿಯೂ ಪತಂಗಗಳ ಲಾರ್ವಗಳದ್ದೇ ಕಾರುಬಾರು ಎಂಬಿತ್ಯಾದಿ ಮಾಹಿತಿಗಳನ್ನು ಹಂಚಿಕೊಂಡರು.ರಾಜು ಕಿದೂರು, ರೋಹನ್‌ ಕಾಮನಬೈಲು, ನಿತೀಶ್‌, ಪ್ರಣವ್‌ ಕಾರ್ಲೆ, ಗ್ಲೆನ್‌ ಕಿದೂರು ಮೊದಲಾದವರು ಭಾಗವಹಿಸಿದರು

ಚಿಟ್ಟೆ ಮತ್ತು ಪತಂಗಗಳ
ಬಗ್ಗೆ ಒಂದಿಷ್ಟು..
ಚಿಟ್ಟೆಗಳು ಹಾಗೂ ಪತಂಗಗಳು ಲೆಪಿಡೊಪ್ಟೆರ ಕುಟುಂಬಕ್ಕೆ ಸೇರಿದ ಕೀಟಗಳು. ಚಿಟ್ಟೆಗಳಿಗಿಂತ ಮೊದಲೇ ಪತಂಗಗಳು ಭೂಮಿಯಲ್ಲಿದ್ದುವು ಎಂಬುದು ವಿಜ್ಞಾನಿಗಳ ವಾದ. ಪತಂಗದ ಶರೀರ ದಪ್ಪವಾದರೆ ಚಿಟ್ಟೆಗಳದ್ದು ಸಪೂರ. ರಕ್ಕೆಗಳನ್ನು ಎರಡೂ ಬದಿಗಳಿಗೆ ಬಿಡಿಸಿಡುವ ಅಥವಾ ಮಡಚಿಡುವ ಸ್ವಭಾವ ಪತಂಗಗಳದ್ದು.

ಮೇಲೆತ್ತಿ ಅಥವಾ ಬಿಡಿಚಿ ಕುಳಿತುಕೊಳ್ಳುವುದು ಚಿಟ್ಟೆಗಳಿಗೆ ಇಷ್ಟ. ಚಿಟ್ಟೆಗಳಲ್ಲಿರುವ ಎರಡೂ ಆಂಟೆನಾಗಳು ಹತ್ತಿರವಿದ್ದು ನೇರವಾಗಿರುತ್ತವೆ. ಆದರೆ ಪತಂಗಗಳಲ್ಲಿ ದೂರ ದೂರಕ್ಕಿರುವ ಆಂಟೆನಾಗಳ ತುದಿಯ ರಚನೆಯಲ್ಲಿ ವ್ಯತ್ಯಾಸವಿದೆ.

Advertisement

ಹಗಲಿನ ಬಿಸಿಲು ಚಿಟ್ಟೆಗಳಿಗೆ ಇಷ್ಟ. ಪತಂಗಗಳು ಚಂದ್ರನ ಬೆಳಕನ್ನು ಅನುಸರಿಸಿ ಸಂಚರಿಸುವುದರಿಂದಲೇ ಅವುಗಳು ಹೆಚ್ಚಾಗಿ ಪ್ರತ್ಯಕ್ಷವಾಗುವುದು ರಾತ್ರಿಯಲ್ಲಿ.ಚಿಟ್ಟೆಗಳು ಕಡು ಬಣ್ಣದವುಗಳಾದರೆ ಪತಂಗಗಳು ಮಂದ ಬಣ್ಣದವುಗಳು. ಮಕರಂದ ಹಾಗೂ ಕೊಳೆತ ವಸ್ತುಗಳಿಂದ ಹೀರುವ ರಸವು ಈ ಎರಡೂ ಕೀಟಗಳ ಪ್ರಮುಖ ಆಹಾರವಾಗಿದ್ದರೂ ಕೆಲವು ಪತಂಗಗಳು ಆಹಾರವಿಲ್ಲದೆ ಬದುಕುತ್ತವೆ. ಕಾರಣ ಅವುಗಳಿಗೆ ಬಾಯಿಯೇ ಇರುವುದಿಲ್ಲ.

ಸಂಜೆಯಿಂದ ಮುಂಜಾವಿನವರೆಗೆ ರಾಜೀವ್‌ ಭವನ, ಕಾಜೂರು ಪಳ್ಳ ಹಾಗೂ ರಸ್ತೆ ಬದಿ ಗಳಲ್ಲಿ ಅಧ್ಯಯನ ತಂಡ ಪತಂಗಗಳಿಗಾಗಿ ಹುಡುಕಾಡಿತು. ಇಪ್ಪತ್ತಕ್ಕಿಂತ ಹೆಚ್ಚು ಪತಂಗಗಳನ್ನು ವೀಕ್ಷಿಸಲಾಯಿತು. ತುಂಬೆ ಗಿಡಗಳಲ್ಲಿ ಅತ್ಯಂತ ಹೆಚ್ಚು ಪತಂಗಗಳನ್ನು ಪತ್ತೆ ಹಚ್ಚಲಾಯಿತು. ಜೇಡಗಳು ಪತಂಗಗಳನ್ನು ಹಿಡಿದು ತಿನ್ನುವುದನ್ನೂ ಶಿಬಿರಾರ್ಥಿಗಳು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next