ಹೊಸದಿಲ್ಲಿ: ಭಾರತೀಯ- ಅಮೆರಿಕನ್ ಗಣಿತಶಾಸ್ತ್ರಜ್ಞ ಸಿ.ಆರ್.ರಾವ್ ಎಂದೇ ಖ್ಯಾತಿ ಪಡೆದಿದ್ದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. 102 ವರ್ಷದ ಸಿ.ಆರ್.ರಾವ್ ಅವರು ಅಮೆರಿಕದಲ್ಲಿ ನೆಲೆಸಿದ್ದರು.
ಬಳ್ಳಾರಿಯ ಹಡಗಲಿಯ ತೆಲುಗು ಕುಟುಂಬದಲ್ಲಿ ಜನಿಸಿದ ಅವರ ಶಾಲಾ ಶಿಕ್ಷಣವು ಗುಡೂರು, ನುಜ್ವಿಡ್, ನಂದಿಗಾಮ ಮತ್ತು ವಿಶಾಕಪಟ್ಟಣಂನಲ್ಲಿ ಪೂರ್ಣಗೊಂಡಿತು. ಅವರು ಆಂಧ್ರ ವಿಶ್ವವಿದ್ಯಾನಿಲಯದಿಂದ ಎಂ.ಎಸ್ ಸಿ (ಗಣಿತಶಾಸ್ತ್ರ) ಮತ್ತು 1943 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಅಂಕಿಅಂಶಗಳಲ್ಲಿ ಎಂ.ಎ ಪಡೆದರು. ಅವರು 1948 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್ ಡಿ ಪದವಿಯನ್ನು ಪಡೆದರು.
ಸಿ.ಆರ್.ರಾವ್ ಅವರು ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮಾಡಿರುವ ಸಾಧನೆಗಾಗಿ 1968ರಲ್ಲಿ ಪದ್ಮಭೂಷಣ, 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. 2023ರಲ್ಲಿ ನೊಬೆಲ್ ಪ್ರಶಸ್ತಿಗೆ ಸರಿಸಮಾನಾದ ಇಂಟರ್ ನ್ಯಾಶನಲ್ ಪ್ರೈಜ್ ಆಫ್ ಸ್ಟಾಟಿಸ್ಟಿಕ್ಸ್’ ಪ್ರಶಸ್ತಿಗೆ ಭಾಜನರಾಗಿದ್ದರು.
ಅವರ ಹೆಸರಿನಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಿ.ಆರ್. ರಾವ್ ಅಡ್ವಾನ್ಸ್ಡ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕ್ಸ್ ಅಂಡ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಅನ್ನು ಸ್ಥಾಪಿಸಲಾಯಿತು. ಅವರು 19 ದೇಶಗಳಿಂದ 39 ಡಾಕ್ಟರೇಟ್ ಪಡೆದಿದ್ದಾರೆ ಮತ್ತು 477 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು 15 ಪುಸ್ತಕಗಳನ್ನು ಬರೆದಿದ್ದರು.
ಸಿದ್ದರಾಮಯ್ಯ ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಎನ್.ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದಿರುವ ಅವರು, ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞರು, ಕರ್ನಾಟಕ ಮೂಲದ ಸಂಖ್ಯಾಶಾಸ್ತ್ರ ಪರಿಣಿತರು ಆದ ಸಿ.ಆರ್ ರಾವ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ಗಣಿತ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿ ‘ಪದ್ಮವಿಭೂಷಣ’ ಮಾತ್ರವಲ್ಲದೆ, ‘ಇಂಟರ್ ನ್ಯಾಷನಲ್ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ – 2023’, ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’ ಇನ್ನು ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಭಾರತದ ಕೀರ್ತಿ ಹೆಚ್ಚಿಸಿದ್ದರು. ಇಂತಹ ಮೇರು ಸಾಧಕರ ನಿಧನ ನಾಡಿಗೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.