Advertisement

ಬಾನಂಗಳದಲ್ಲಿ ಹಾರಾಡಲಿವೆ ದೇಶ-ವಿದೇಶಗಳ ಗಾಳಿಪಟ !

10:51 PM Jan 16, 2020 | mahesh |

ಮಹಾನಗರ: ಕರಾವಳಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಕೂಡ ಸೇರಿಕೊಂಡಿದ್ದು, ಟೀಂ ಮಂಗಳೂರು ಜತೆಗೂಡಿ ಜ. 17ರಿಂದ ಮೂರು ದಿನಗಳ ಕಾಲ ಪಣಂಬೂರು ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ನಡೆಯಲಿದೆ.

Advertisement

ಗಾಳಿಪಟ ಉತ್ಸವಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿದ್ದು, ನೆದರ್‌ಲ್ಯಾಂಡ್‌, ಚೀನ, ಥಾçಲಂಡ್‌, ಇಂಡೋನೇಷ್ಯಾ, ಸ್ಪೀಡನ್‌, ಇಸ್ರೇಲ್‌, ಮಲೇಶ್ಯಾ ದೇಶಗಳ ಮತ್ತು ಭಾರತದ ರಾಜ್‌ಕೋಟ್‌, ಹೈದರಾ ಬಾದ್‌, ಮುಂಬಯಿ, ಗುಜರಾತ್‌ ಸಹಿತ 10 ದೇಶ-ವಿದೇಶಿ ತಂಡಗಳ ಸದಸ್ಯರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜ. 17ರಂದು ಸಂಜೆ 4ರಿಂದ ಪಣಂಬೂರು ಬೀಚ್‌ನಲ್ಲಿ ಆಹಾರ ಉತ್ಸವ, ಅನಂತರ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವದ ಉದ್ಘಾಟನೆ, ನೃತ್ಯ ಮತ್ತು ಸಂಗೀತ ಸ್ಪರ್ಧೆ ನಡೆಯಲಿದೆ. ಅದೇರೀತಿ ಜ. 18, 19ರಂದು ಸಂಜೆ 4 ಗಂಟೆಯಿಂದ ಗಾಳಿಪಟ ಉತ್ಸವ ನಡೆಯಲಿದೆ. ಗಾಳಿಪಟ ಉತ್ಸವದಲ್ಲಿ ಸಾವಿರಾರು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡಲಿದೆ.  ದೇಶ-ವಿದೇಶಿ ತಂಡಗಳ ಜತೆ ಟೀಂ ಮಂಗಳೂರಿನ ತಂಡದ ಸದಸ್ಯರ ಲಿಮ್ಕಾ ದಾಖಲೆಯ ಕಥಕ್ಕಳಿ ಗಾಳಿಪಟ, ಯಕ್ಷಗಾನ (ರಾಜ, ರಾಕ್ಷಸ, ಬಡಗುತಿಟ್ಟು), ಗಜರಾಜ, ಪುಷ್ಪಕ ವಿಮಾನ, ಗರುಡ, ಭೂತಾರಾದನೆ, ಕೋಳಿ ಅಂಕ ಸಹಿತ ವಿವಿಧ ಪ್ರಾಕಾರದ ಗಾಳಿಪಟಗಳ ಹಾರಾಟ ನಡೆಯಲಿದೆ.

ಸಾರ್ವಜನಿಕರಿಗೂ ಅವಕಾಶ
ಗಾಳಿಪಟ ಉತ್ಸವದಲ್ಲಿ ಒಂದೆಡೆ ದೇಶಿ-ವಿದೇಶಿ ತಂಡದ ಸದಸ್ಯರು ಗಾಳಿಪಟ ಹಾರಾಟ ನಡೆಸುತ್ತಿದ್ದರೆ ಇತ್ತ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಮನೆಯಿಂದ ತಯಾರಿಸಿ ತಂದ ಗಾಳಿಪಟ, ಜತೆಗೆ ಸ್ಟಾಲ್‌ಗ‌ಳಲ್ಲಿ ಮಾರಾಟಕ್ಕಿರುವ ಗಾಳಿಪಟ ಖರೀದಿಸಿಯೂ ಗಾಳಿಪಟ ಹಬ್ಬದಲ್ಲಿ ಪಾಲ್ಗೊಳ್ಳಬಹುದು’ ಎನ್ನುತ್ತಾರೆ ಟೀಂ ಮಂಗಳೂರು ಗಾಳಿಪಟ ತಂಡದ ಸದಸ್ಯ ದಿನೇಶ್‌ ಹೊಳ್ಳ ಅವರು.

ವಿದೇಶಿಗರಿಗೆ ತುಳುನಾಡ ಪರಿಚಯ
“ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆಂದು ನಗರಕ್ಕೆ ಆಗಮಿಸಿರುವ ವಿದೇಶಿಗರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತಿದ್ದು, ಅಲ್ಲಿನ ವೀಕ್ಷಣೆಗೆ, ಕೋಡಿಕ್ಕಲ್‌ನಲ್ಲಿ ನಡೆದ ಕೋಳಿಅಂಕಕ್ಕೆ ತೆರಳಿ ವಿದೇಶಿಗರಿಗೆ ತುಳುನಾಡ ಸಂಸ್ಕೃತಿ ಅರಿತರು. ಅದೇ ರೀತಿ ಶುಕ್ರವಾರ ಯಕ್ಷಗಾನ, ಮೀನುಗಾರಿಕಾ ಬಂದರು ವೀಕ್ಷಣೆಗೆ ವಿದೇಶಿಗರು ಕರೆದುಕೊಂಡು ಹೋಗುತ್ತೇವೆ’ ಎನ್ನುತ್ತಾರೆ ಆಯೋಜಕರಲ್ಲೊಬ್ಬರಾದ
ಗಿರಿಧರ್‌ ಕಾಮತ್‌.

Advertisement

ಇಂದಿನ ಕಾರ್ಯಕ್ರಮ
ಜ. 17ರಂದು ನಗರದ ಕದ್ರಿ ಉದ್ಯಾನವನದಲ್ಲಿ ಸಂಜೆ 5 ಗಂಟೆಯಿಂದ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ-ಯುವ ಉತ್ಸವ, ಸಂಜೆ 6 ಗಂಟೆಯಿಂದ 7.30ರ ವರೆಗೆ ಕರಾವಳಿ ಉತ್ಸವ ಮೈದಾನದ ವಸ್ತು ಪ್ರದರ್ಶನ ವೇದಿಕೆಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಸಾಂಸ್ಕೃತಿಕ ವೈವಿಧ್ಯ, ದಕ್ಷಿಣ ಕನ್ನಡ ಮಾಧ್ಯಮ ಮಿತ್ರ ಬಳಗದಿಂದ ಕರಾವಳಿಯ ಸಾಂಸ್ಕೃತಿಕ ವೈಭವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next