ಪಣಜಿ: ನವೆಂಬರ್ 20 ರಿಂದ 28 ರ ವರೆಗೆ ಗೋವಾದಲ್ಲಿ ನಡೆಯಲಿರುವ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‍ಎಫ್‍ಐ) ಉದ್ಘಾಟನಾ ಸಮಾರಂಭದಲ್ಲಿ ‘ಧಕ್‍ಧಕ್ ಗರ್ಲ್’ ಮಾಧುರಿ ದೀಕ್ಷಿತ್, ನಟ ಶಾಹಿದ್ ಕಪೂರ್ ಮತ್ತು ಶ್ರಿಯಾ ಸರನ್ ಭಾಗವಹಿಸಲಿದ್ದಾರೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನೊವೆಂಬರ್ 20 ರಂದು ಸಂಜೆ ಗೋವಾ ರಾಜಧಾನಿ ಪಣಜಿಯ ಸಮೀಪದ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಖ್ಯಾತ ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಅವರಿಗೆ ಪ್ರತಿಷ್ಠಿತ ‘ಸತ್ಯಜಿತ್ ರೇ ಜೀವನ್ ಗೌರವ್’ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಎನ್‍ಎಫ್‍ಡಿ ವ್ಯವಸ್ಥಾಪಕ ಪೃಥುಲ್ ಕುಮಾರ್ ತಿಳಿಸಿದ್ದಾರೆ. ಗೋವಾ ಎಂಟರ್‍ಟೈನ್‍ಮೆಂಟ್ ಸೊಸೈಟಿಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೋವಾ ಎಂಟರ್‍ಟೈನ್‍ಮೆಂಟ್ ಸೊಸೈಟಿ ಸಿಇಒ ಅಂಕಿತಾ ಮಿಶ್ರಾ, ಉಪಾಧ್ಯಕ್ಷ ಶಾಸಕ ದಿಲಾಯಲ ಲೋಬೋ ಉಪಸ್ಥಿತರಿದ್ದರು. 10 ದಿನಗಳ ಉತ್ಸವದಲ್ಲಿ ಒಟ್ಟು 198 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮೊದಲ 13 ವಿಶ್ವ ಪ್ರೀಮಿಯರ್‍ಗಳು ಗ್ಲೋಬಲ್ ಐಎಫ್‍ಎಫ್‍ಐನಲ್ಲಿ ನಡೆಯಲಿದೆ.
18 ಅಂತರರಾಷ್ಟ್ರೀಯ ಪ್ರೀಮಿಯರ್‍ಗಳು, 62 ಏಷ್ಯನ್ ಪ್ರೀಮಿಯರ್‍ಗಳು ಮತ್ತು 89 ಭಾರತೀಯ ಪ್ರೀಮಿಯರ್‍ಗಳು ಸಹ ಒಳಗೊಂಡಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ವಿಶ್ವ ಸಾಕ್ಷ್ಯಚಿತ್ರಗಳು ಮತ್ತು ಮರುಬಳಕೆಯ ಕ್ಲಾಸಿಕ್ ಚಲನಚಿತ್ರಗಳ ವಿಶೇಷ ವಿಭಾಗಗಳನ್ನು ಹೊಂದಿರುತ್ತದೆ. ಒಟಿಟಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಾಗುವುದು ಎಂದು ಕುಮಾರ್ ಹೇಳಿದರು.
ಇದನ್ನೂ ಓದಿ: Goa: ನೀಲೇಶ್ ಕ್ಯಾಬ್ರಾಲ್ ರಾಜೀನಾಮೆ ಬೆನ್ನಲ್ಲೇ ಪ್ರಮಾಣವಚನ ಸ್ವೀಕರಿಸಿದ ಅಲೆಕ್ಸೊ ಸಿಕ್ವೇರಾ