Advertisement
ವಿಶ್ವಸಂಸ್ಥೆಯಲ್ಲಿ ರಾಯಭಾರಿಗಳ ಆಸನ: ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಲ್ಲಿ ವಿವಿಧ ದೇಶಗಳ ರಾಯಭಾರಿಗಳು, ಅಧಿಕಾರಿಗಳು, ಧಾರ್ಮಿಕ ನಾಯಕರು ಹಾಗೂ ನಾಗರಿಕರು ಭಾಗವಹಿಸಿದ್ದರು. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸುಮಾರು 2 ತಾಸು ಕಾರ್ಯಕ್ರಮ ನಡೆಯಿತು. ಇಂದಿನ ಸಂಕೀರ್ಣ ಜೀವನಕ್ಕೆ ಯೋಗ ಅತ್ಯಂತ ಅಗತ್ಯ ಎಂದು ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಹೇಳಿದ್ದಾರೆ.
ಮುಂಬಯಿಯಲ್ಲಿ ವೆಂಕಯ್ಯ ನಾಯ್ಡು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಂಬಯಿಯ ಬಾಂದ್ರಾ ರಿಕ್ಲಮೇಶನ್ ಸೀಲಿಂಕ್ ಪ್ರೊಮೆನೇಡ್‌ನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಾಲಾ ಪಠ್ಯದಲ್ಲಿ ಯೋಗ ಸೇರ್ಪಡೆಗೊಳಿಸುವುದು ದೇಶದ ಆರೋಗ್ಯಕ್ಕೆ ಹಿತಕರ ಎಂದಿದ್ದಾರೆ. ಗರ್ಭಿಣಿಯರೊಂದಿಗೆ ಮೇನಕಾ ಗಾಂಧಿ ಯೋಗ:
ಕೇಂದ್ರ ಸಚಿವೆ ಮೇನಕಾ ಗಾಂಧಿ ದಿಲ್ಲಿಯಲ್ಲಿ ಗುರುವಾರ ಗರ್ಭಿಣಿಯರೊಂದಿಗೆ ಯೋಗ ನಡೆಸಿದರು. ನ್ಯಾಚುರಲ್ ಚೈಲ್ಡ್ ಬರ್ತ್ ಸೆಂಟರ್‌ನಲ್ಲಿ ಮಹಿಳೆಯರು ಹಲವು ಯೋಗಾಸನ ಹಾಕಿದರು. ಗರ್ಭಿಣಿಯರು ಯೋಗ ಮಾಡುವುದು ಉತ್ತಮ ವಿಧಾನ. ಆದರೆ ಇದಕ್ಕೆ ತರಬೇತುದಾರರ ಮಾರ್ಗದರ್ಶನ ಕಡ್ಡಾಯವಾಗಿ ಬೇಕು ಎಂದು ಹೇಳಿದ್ದಾರೆ. ಈ ಮಧ್ಯೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಗರ್ಭಿಣಿ ಯಾಗಿದ್ದು, ಅವರೂ ಯೋಗಾಸನ ಮಾಡಿದ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಇದನ್ನು ಪ್ರಶಂಸಿಸಿದ ಮೇನಕಾ, ಗರ್ಭಿಣಿಯಾದಾಗ ಫಿಟ್ ಆಗಿರಲು ಯೋಗಾಸನ ಉತ್ತಮ ವಿಧಾನ ಎಂದಿದ್ದಾರೆ.
Related Articles
ಸೇನೆಯ ವಿವಿಧ ಪಡೆಗಳೂ ಗುರುವಾರ ಯೋಗಾಚರಣೆ ನಡೆಸಿವೆ. ನೌಕಾಪಡೆಯ 15 ಸಾವಿರಕ್ಕೂ ಹೆಚ್ಚು ಯೋಧರು ವಿವಿಧ ಆಸನಗಳನ್ನು ಪ್ರಯೋಗಿಸಿದರು. ನೌಕಾಪಡೆಯ ಹಡಗುಗಳು ಹಾಗೂ ಸಬ್‌ಮರೀನ್ ಗಳಲ್ಲೂ ಯೋಧರು ಯೋಗಾಸನ ನಡೆಸಿದ್ದು ವಿಶೇಷವಾಗಿತ್ತು. ಪತಂಜಲಿ ಸಮಿತಿ, ಆರ್ಟ್ ಆಫ್ ಲಿವಿಂಗ್ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದ ನೌಕಾಪಡೆಯ ಹಲವು ನೆಲೆಗಳಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Advertisement
ಮೈಸೂರು ದಾಖಲೆ ಮುರಿದ ರಾಜಸ್ಥಾನ
ಅತಿ ಹೆಚ್ಚು ಸಂಖ್ಯೆಯ ಜನರು ಒಟ್ಟಿಗೆ ಸೇರಿ ಯೋಗ ಮಾಡಿ ಈ ಹಿಂದೆ ಮೈಸೂರು ಮಾಡಿದ್ದ ದಾಖಲೆಯನ್ನು ರಾಜಸ್ಥಾನದ ಕೋಟ ಮುರಿದಿದೆ. ಮೈಸೂರಿನಲ್ಲಿ ಕಳೆದ ವರ್ಷ 55,524 ಜನರು ಒಂದೇ ಬಾರಿಗೆ ಯೋಗಾಸನ ಮಾಡಿದ್ದು ದಾಖಲೆಯಾಗಿತ್ತು. ಗುರುವಾರ ರಾಜಸ್ಥಾನದ ಕೋಟದಲ್ಲಿ 1.05 ಲಕ್ಷ ಜನರು ಯೋಗಾಸನ ಮಾಡಿದ್ದಾರೆ. ಇದು ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣ ಪತ್ರ ಪಡೆದಿದೆ. ಈ ಕಾರ್ಯಕ್ರಮವನ್ನು ರಾಜಸ್ಥಾನ ಸರ್ಕಾರ, ಬಾಬಾ ರಾಮದೇವ್ ಅವರ ಪತಂಜಲಿ ಯೋಗಪೀಠ ಮತ್ತು ಕೋಟ ಜಿಲ್ಲಾಡಳಿತ ಆಯೋಜಿಸಿತ್ತು. ಮೂಲಗಳ ಪ್ರಕಾರ 1.05 ಲಕ್ಷದಲ್ಲಿ ದಾಖಲೆ ಬರೆಯಲಾಗಿದ್ದರೂ, ಈ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಬೆಳಗ್ಗೆ 6.30ರಿಂದ ಅರ್ಧಗಂಟೆಯವರೆಗೆ ಈ ಕಾರ್ಯಕ್ರಮ ನಡೆದಿದೆ. 15 ಯೋಗ ಆಸನಗಳನ್ನು ನಡೆಸಲಾಗಿತ್ತು. 67 ವರ್ಷದ ಕ್ರೈಸ್ತ ಸನ್ಯಾಸಿನಿಯಿಂದ ಯೋಗಾಸನ
ವಿವಿಧ ಚರ್ಚ್ ಹಾಗೂ ಕ್ರೈಸ್ತ ಸಮುದಾಯಗಳ ವಿರೋಧದ ನಡುವೆಯೂ ಕೇರಳದ ಕ್ಯಾಥೋಲಿಕ್ ಕ್ರೈಸ್ತ ಸನ್ಯಾಸಿನಿ ಇನ್ಫ್ಯಾಂಟ್ ಟ್ರೆಸಾ ವಿವಿಧ ಯೋಗದ ಆಸನಗಳಲ್ಲಿ ಪರಿಣಿತಿ ಪಡೆದಿದ್ದಾರೆ. ಸೂರ್ಯನಮಸ್ಕಾರ, ಪ್ರಾಣಾಯಾಮ ಹಾಗೂ ವಿವಿಧ ಆಸನಗಳನ್ನು ನಿತ್ಯವೂ ಮಾಡುವುದಲ್ಲದೇ, ನೂರಾರು ಜನರಿಗೆ ತರಬೇತಿಯನ್ನೂ ನೀಡುತ್ತಾರೆ. ಕಳೆದ 30 ವರ್ಷಗಳಿಂದಲೂ ಇವರು ಯೋಗಾಭ್ಯಾಸ ನಡೆಸಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. 1985ರ ವೇಳೆ ನನಗೆ ತೀವ್ರ ಬೆನ್ನು ನೋವು ಹಾಗೂ ಉಬ್ಬಸ ಸಮಸ್ಯೆಯಿತ್ತು. ಎಷ್ಟೇ ಚಿಕಿತ್ಸೆ ಪಡೆದರೂ ಗುಣವಾಗಲಿಲ್ಲ. ಆದರೆ ಯೋಗದಿಂದಾಗಿ ನನಗೆ ಈ ಸಮಸ್ಯೆ ನಿವಾರಣೆಯಾಯಿತು ಎಂದು ಟ್ರೆಸಾ ಹೇಳಿದ್ದಾರೆ. ಯೋಗ ಜಾತ್ಯತೀತವಾದದ್ದು ಮತ್ತು ಇದು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. 2006ರಲ್ಲಿ ದಾದಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ಸಂಪೂರ್ಣವಾಗಿ ಯೋಗ ಹಾಗೂ ಧ್ಯಾನಕ್ಕೆ ತಮ್ಮನ್ನು ತೆರೆದುಕೊಂಡಿದ್ದಾರೆ. ಮೂವತ್ತುಪುಳ ಹಾಗೂ ತೊಡುಪ್ಪುಳದಲ್ಲಿ ಯೋಗ ಕೇಂದ್ರ ಸ್ಥಾಪಿಸಿದ್ದಾರೆ. ಇಂದಿಗೂ ಹಲವು ಚರ್ಚ್‌ಗಳು ಯೋಗದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿವೆ ಎಂದು ಟ್ರೆಸಾ ಹೇಳುತ್ತಾರೆ.