ಕಲಬುರಗಿ: ಕೆಕೆಆರ್‌ಡಿಬಿಗೆ ವಿಶ್ವವಿದ್ಯಾಲಯದ 50 ಎಕರೆ ಜಾಗ ಮಂಜೂರಾತಿಯಾಗಿದ್ದರಿಂದ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುವುದು. ಅದರಲ್ಲಿ 20 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಬದ್ದತೆ ಹೊಂದಿರುವುದಾಗಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ದಿ| ಚಂದ್ರಶೇಖರ ಪಾಟೀಲ್ ಸ್ಮರಣಾರ್ಥ ಹಮ್ಮಿಕೊಂಡ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ವಿಜೇತರಿಗೆ ಟ್ರೋಫಿ ವಿತರಿಸಿ ಮಾತನಾಡಿದರು.
ಕ್ರೀಡೆಗಳು ನಗರದ ಜತೆಗೆ ಗ್ರಾಮೀಣ ಭಾಗಕ್ಕೂ ವಿಸ್ತರಿಸುವುವ ನಿಟ್ಟಿನಲ್ಲಿ ಕ್ರೀಡಾ (ಗ್ರಾಮ) ಸಂಕೀರ್ಣ ಪೂರಕವಾಗಲಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲು ಮುಂದಾಗಲಾಗುವುದು ಎಂದು ಅಪ್ಪುಗೌಡ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಸಿಆರ್‌ಐ ತಂಡಕ್ಕೆ ಗೆಲುವು
ನಾಲ್ಕು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ನೂತನ ವಿದ್ಯಾಲಯ ಹಾಗೂ ಶಹಾಬಾದ್‌ನ ಸಿಆರ್‌ಐ ತಂಡದ ನಡುವೆ ನಡೆದ ರೋಚಕ ಪಂದ್ಯದಲ್ಲಿ ಸಿಆರ್‌ಐ ತಂಡ ಕೊನೆಗೂ ಏಳು ವಿಕೆಟ್‌ಗಳಿಂದ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ನೂತನ ವಿದ್ಯಾಲಯ ತಂಡ 120 ರನ್‌ಗಳನ್ನು ಗಳಿಸಿತು. ತದನಂತರ ಬ್ಯಾಟ್ ಮಾಡಿದ ಸಿಆರ್‌ಐ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗ ಏಳು ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿತು.
ಚಂದ್ರಶೇಖರ ಫೌಂಡೇಷನ್ ಅಧ್ಯಕ್ಷ ಅಪ್ಪು ಕಣಕಿ, ಮುಖಂಡರಾದ ಸೂರಜ್ ತಿವಾರಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ| ರಾಜು ಕುಳಗೇರಿ, ನೂತನ ವಿದ್ಯಾಲಯ ಕ್ರೀಡಾ ವಿಭಾಗದ ಮುಖ್ಯಸ್ಥ ಡಾ| ಸುರೇಂದ್ರ ಸಿದ್ಧಾಪುರಕರ್, ಮಹೇಶ ರೆಡ್ಡಿ, ಸುಂದರ ಕುಲಕರ್ಣಿ ಸೇರಿದಂತೆ ಮುಂತಾದವರಿದ್ದರು.